ಮಾನವನು ತನ್ನ ಜೀವನದಲ್ಲಿ ಬದುಕಲು ಇಚ್ಚಿಸದಂತಹ ಏಕೈಕ ಸ್ಥಳ ಆಶ್ರಮ. ಆದರೆ ಅದೇ ಕೆಲವರ ಪಾಲಿಗೆ ಜೀವನದುದ್ದಕ್ಕೂ ಶಾಶ್ವತ ಮನೆಯಾಗಿದೆ. ತಮಗೆ ಯಾರು ಇಲ್ಲ ಎನ್ನುವವರಿಗೆ ಒಂದು ಕುಟುಂಬವನ್ನು ಕೊಡುವ ಏಕೈಕ ಸ್ಥಳ ಆಶ್ರಮ.
ನಾನು ಮೊದಲ ಬಾರಿಗೆ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದು ಬಾಲ್ಯ ವಯಸ್ಸಿನಲ್ಲಿ. ಅಲ್ಲಿ ವಯಸ್ಸಾದವರು ಅಜ್ಜಿ-ಅಜ್ಜಂದಿರು ಕೂತು ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವಾಗ ಬೇಜಾರೆನಿಸುತ್ತಿತ್ತು. ಆದರೆ ಅವರು ಎಲ್ಲವನ್ನು ಕಳೆದುಕೊಂಡೂ, ಇತರರೊಂದಿಗೆ ಖುಷಿಯಾಗಿದ್ದರು. ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಆಶ್ರಮಗಳಿಗೆ ಭೇಟಿ ನೀಡುವ ಅವಕಾಶ ದೊರೆಯಿತು. ಕೇವಲ ವೃದ್ಧಾಶ್ರಮವಲ್ಲ, ಅನಾಥಾಶ್ರಮ, ಮಕ್ಕಳ ಆಶ್ರಮ, ಏಡ್ಸ ರೋಗಿಗಳ ಆಶ್ರಮ ಮುಂತಾದವುಗಳಿಗೆ ಭೇಟಿ ನೀಡುವ ಸಮಯಬಂದಿತ್ತು
ಮೊದಲಿಗೆ ಭೇಟಿ ನೀಡಿದ್ದು ವೃದ್ಧಾಶ್ರಮ ಬಾಲ್ಯವಯಸ್ಸಿನಲ್ಲಿ ಆಶ್ರಮವನ್ನು ಹೇಗೆ ಕಂಡಿದ್ದೆನು ಇವತ್ತಿಗೂ ಅಂಥದ್ದೇ ಅನುಭವವಾಗಿತ್ತು, ಅದರಲ್ಲೂ ವಿಪರ್ಯಾಸವೆಂದರೆ ಯಾರು ಅತಿ ಶ್ರೀಮಂತರಿದ್ದಾರೋ, ಅವರ ತಂದೆ-ತಾಯಿ ಆಶ್ರಮದಲ್ಲಿ ಏನೂ ಇಲ್ಲದವರಾಗಿ ಬದುಕುತ್ತಿರುತ್ತಾರೆ. ಅವರೊಂದಿಗೆ ಸಂಭಾಷಣೆ ಮಾಡಿದ ನಂತರ ಹೋದದ್ದು ಅನಾಥಾಶ್ರಮ ಹಾಗೂ ಮಕ್ಕಳ ಆಶ್ರಮಕ್ಕೆ. ಅನಾಥರನ್ನಂತು ಕಂಡಾಗ ಬಡವರಾದರು ನಮಗೆ ಕುಟುಂಬ ಎಂಬುವುದು ಇದ್ದದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಿದ್ದುಈಗಲೂ ನೆನಪಿಗೆ ಬರುತ್ತದೆ.
ಅಂದು ಮನ ಮುಟ್ಟುವಂತ ಒಂದು ಘಟನೆ ನಡೆಯಿತು. ಕೊನೆಯದಾಗಿ ಹೋದ ಮಕ್ಕಳಾಶ್ರಮವೂ ಗಂಡು ಹಾಗೂ ಹೆಣ್ಣು ಎಂದು ಎರಡು ಭಾಗಗಳಾಗಿ ವಿಭಾಗಿಸಲಾಗಿತ್ತು. ನಾನು ಮೊದಲಿಗೆ ಭೇಟಿ ನೀಡಿದ್ದು ಹೆಣ್ಣು ಮಕ್ಕಳ ಆಶ್ರಮಕ್ಕೆ. ಇದರಲ್ಲಿ ಅನಾಥರಿಗಿಂತ ಹೆಚ್ಚಾಗಿ ತಂದೆ-ತಾಯಿ ಬೇಡವೆಂದು ಎಸೆದು ಹೋದ ಮಕ್ಕಳೇ ಹೆಚ್ಚು. ಅವರ ಬಗ್ಗೆ ತಿಳಿದುಕೊಳ್ಳುವಾಗ ಮಕ್ಕಳು ಬೇಡ ಎಂಬುದೇ ಇದ್ದಲ್ಲಿ ಯಾಕಾದರೂ ಮಕ್ಕಳನ್ನು ಹೆತ್ತರು ಎಂಬ ಭಾವನೆ ಬರುತ್ತಿತ್ತು.
ಇತರರೊಂದಿಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಒಂದು ಪುಟ್ಟ ಮಗು ನಿದ್ದೆಯಿಂದ ಎದ್ದು ಬರುವುದನ್ನು ಕಂಡೆ. ಎರಡರಿಂದ ಮೂರು ವರ್ಷ ವಯಸ್ಸಾಗಿರಬಹುದು. ಅವಳ ಬಗ್ಗೆ ತಿಳಿದುಕೊಳ್ಳುವಾಗ ಅವಳ ತಮ್ಮ ಅದೇ ಆಶ್ರಮದ ಮತ್ತೊಂದು ಭಾಗದಲ್ಲಿದ್ದಾನೆ ಎಂಬುದು ಗೊತ್ತಾಯ್ತು. ನನ್ನೊಂದಿಗೆ ತೊದಲು ನುಡಿಯನ್ನಾಡುತ್ತಾ ಏನೋ ಒಂದು ಸಂಬಂಧವನ್ನೇ ಬೆಳೆಸಿಕೊಂಡ ಭಾವನೆ ನನ್ನಲ್ಲಿ ಬಂತು. ಸುಮಾರು 2 ಗಂಟೆಗಳ ಕಾಲ ಆ ಪುಟ್ಟ ಮಗುವಿನೊಂದಿಗೆ ಕಳೆದ ಕ್ಷಣ ಮನಸ್ಸಿನಲ್ಲಿ ಹೊಸ ಭಾವನೆಯನ್ನು ಯೋಚನೆಗಳನ್ನು ತಂದಿಟ್ಟಿತ್ತು. ಅದರಲ್ಲೂ ನಾವಲ್ಲಿಂದ ಹೊರಡುವಾಗ ನಾನು ನಿಮ್ಮ ಜೊತೆ ಮನೆಗೆ ಬರುತ್ತೇನೆ ಎಂದು ಹೇಳಿದ ಮಾತುಗಳು ಕಣ್ಣಲ್ಲಿ ನೀರೇ ಬರುವಂತೆ ಮಾಡಿದವು. ಮತ್ತೊಂದು ಭಾಗದಲ್ಲಿ ಅ ಪುಟ್ಟ ಮಗುವಿನ ತಮ್ಮನನ್ನು ಮಾತನಾಡಿಸಿದಾಗ ತಂಗಿಯೊಂದಿಗೆ ಮಾತನಾಡುವ ಮನಸ್ಸಾಗುತ್ತದೆ ಆದರೆ ವಾರಾಂತ್ಯದಲ್ಲಿ ಮಾತ್ರ ಮಾತನಾಡಲು ಸಿಗುತ್ತಾಳೆ ಎಂದನು.
ಎಲ್ಲಾ ದೃಶ್ಯಗಳನ್ನು ಕಂಡಾಗ ಮನಸ್ಸಲ್ಲಿ ಮೂಡಿದ ಪ್ರಶ್ನೆಗಳು ಹಲವಾರು. ತಂದೆ ತಾಯಿಗೆ ಮಕ್ಕಳು ಬೇಡ ಎಂಬುದೇ ಆಗಿದ್ದಲ್ಲಿ ಹೆರಲೇಬಾರದಿತ್ತಲ್ಲವೇ ಅವರು ಮಾಡಿದ ಕರ್ಮಕ್ಕೆ ಮಕ್ಕಳು ಏತಕ್ಕೆ ಶಿಕ್ಷೆ ಅನುಭವಿಸಬೇಕು?. ಇನ್ನು ವೃದ್ಧಾಶ್ರಮದಲ್ಲಿರುವವರ ತಪ್ಪೇನು?. ತಮ್ಮ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ.ಆದರೆ ಅದೇ ಮಕ್ಕಳು ತಮ್ಮ ತಂದೆ ತಾಯಿಯ ಋಣವನ್ನು ಮರೆತು ಅವರನ್ನು ಸಾಕಲು ಸಾಧ್ಯವಿಲ್ಲ ಎಂದು ವೃದ್ದಾಶ್ರಮಕ್ಕೆ ತಂದುಬಿಡುತ್ತಾರೆ. ತಮಗಾಗಿ ಕಷ್ಟ ಪಟ್ಟ ತಂದೆ ತಾಯಿಯನ್ನು ಸಾಕುವುದು ಮಕ್ಕಳಿಗೆ ಕಷ್ಟದ ಕೆಲಸವೆನಿಸಿದ್ದು ವಿಪರ್ಯಾಸ. ಮುಂದೊಂದು ದಿನ ಅದೇ ಕರ್ಮ ಅವರಿಗೆ ಹಿಂತಿರುಗಿ ಬರುತ್ತದೆ ಎಂದು ಹೇಳಬೇಕಷ್ಟೆ.
ಇಡೀ ದಿನದ ಆಶ್ರಮದ ಭೇಟಿಗಳಲ್ಲಿ ಕಲಿತಂತಹ ಕೆಲವು ಪಾಠಗಳು ಜೀವನದುದ್ದಕ್ಕೂ ನಮ್ಮನ್ನು ಸರಿದಾರಿಯಲ್ಲಿ ಇರುವಂತೆ ಸಹಕರಿಸುತ್ತದೆ. ಅದನ್ನು ಮುಗ್ಧ ಭಾವನೆಯೊಂದಿಗೆ ಹೇಳುವುದಾದರೆ ನಮಗೆ ಸಿಕ್ಕಂತಹ ಕುಟುಂಬಕ್ಕಾಗಿ ನಾವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಯಾವತ್ತೂ ನಮಗಾಗಿ ಕಷ್ಟಪಟ್ಟವರ, ಕಷ್ಟಕ್ಕೆ ಗೌರವ ನೀಡಿ ಅವರಿಗೆ ಆಭಾರಿಯಾಗಿರಬೇಕು. ಏಕೆಂದರೆ ಜೀವನದಲ್ಲಿ ಕೆಲವೊಂದು ವ್ಯಕ್ತಿಗಳ ಋಣವನ್ನು ಯಾವತ್ತು ತೀರಿಸಲು ಸಾಧ್ಯವಿಲ್ಲ!
-ಸ್ವೀಡಲ್ ಬಳಕುಂಜೆ
ಆಳ್ವಾಸ್ ಕಾಲೇಜ್ ಮೂಡುಬಿದಿರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


