ಬದುಕು...ಭಾವನೆಗಳಿಲ್ಲದೆ ಬರಡು

Upayuktha
0


ನಮಸ್ತೆ ಮಿತ್ರರೇ,

ಇಂದಿನ ನವಯುಗದ ಸಮಾಜದಲ್ಲಿ ದಿನಕ್ಕೊಂದು ಹೊಸ ಅನ್ವೇಷಣೆ ಮಾಡುವುದರ ಮೂಲಕ ಮನುಷ್ಯ ಪ್ರಕೃತಿಯಲ್ಲಿ ಜೀವಿಸುವ ಎಲ್ಲಾ ಜೀವಿಗಳಿಗಿಂತ ತಾನು ವಿಭಿನ್ನ ಎಂದು ನಿರೂಪಿಸುತ್ತಿದ್ದಾನೆ. ಈ ಅನ್ವೇಷಣೆಗಳು ಮನುಷ್ಯನ ಬದುಕಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತಿದೆ ಮತ್ತು ಇಂದಿನ ಪೀಳಿಗೆ ಕೂಡ ಆ ಬದಲಾವಣೆಗೆ ಅತ್ಯಂತ ಅಲ್ಪ ಸಮಯದಲ್ಲಿ ಒಗ್ಗಿಕೊಳ್ಳುತ್ತಿರುವುದು ಒಂದು ಕಡೆ ಧನಾತ್ಮಕ ಅಂಶವಾದರೆ ಋಣಾತ್ಮಕತೆಯು ಸಮಾಜವನ್ನು ಆವರಿಸುತ್ತಿರುವ ಸೂಚನೆ ಗೋಚರವಾಗುತ್ತಿದೆ.


ನಮ್ಮ ಭಾರತೀಯ ಪರಂಪರೆಯಲ್ಲಿ ಒಂದು ಕಾಲದ ತನಕ ಅವಿಭಕ್ತ ಕುಟುಂಬ ಎನ್ನುವ ಪರಿಕಲ್ಪನೆಯಿತ್ತು. ಅಂದಿನ ದಿನಮಾನದಲ್ಲಿ ಒಂದು ಮನೆಯೆಂದರೆ ಅದು ಹಲವಾರು ಸದಸ್ಯರು ಕೂಡಿ ಮುನ್ನೆಡುಸುತ್ತಿದ್ದ ಅಚ್ಚುಕಟ್ಟಿನ ವ್ಯವಸ್ಥೆಯಾಗಿತ್ತು. ಒಬ್ಬ ಹಿರಿಕರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಎಲ್ಲ ನಿರ್ಧಾರಗಳು ಅವರ ಮೂಲಕವೇ ತೆಗೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದ ಕಾಲಮಾನ ಅಂದಿತ್ತು. ಎಲ್ಲದಕ್ಕಿಂತ ಮಿಗಿಲಾಗಿ ಮನುಷ್ಯ ಸಂಬಂಧಗಳ ಮೌಲ್ಯವನ್ನು ತಿಳಿಸಿ ಬದುಕಿನಲ್ಲಿ ಎದುರಾಗುವ ಬಹುವಿಧದ ಏರಿಳಿತವನ್ನು ಪ್ರದರ್ಶಿಸುವ ಪಾಠ ಶಾಲೆಯಾಗಿತ್ತು. ಅಂದು ಸಂಬಂಧಗಳು ಭಾವನೆ ಎನ್ನುವ ಮಾಧ್ಯಮದ ಮೂಲಕ ಸಂವಹನ ನಡೆಸುತ್ತಿತ್ತು. ಏಕೆಂದರೆ ಆಗ ಸಮಾಜ ಹಲವಾರು ಸನ್ನಿವೇಶದಲ್ಲಿ ಒಂದು ಕುಟುಂಬದಂತೆ ಒಗ್ಗೂಡುತ್ತಿತ್ತು. ಆದರೆ ಇಂದು ಅವಿಭಕ್ತ ಕುಟುಂಬ ಎನ್ನುವ ಪರಿಕಲ್ಪನೆಯೇ ಮಾಯವಾಗಿ ನಾವಿಬ್ಬರೂ ನಮಗಿಬ್ಬರು ಎಂಬ ಆಲೋಚನೆಯೊಂದಿಗೆ, ಮನುಷ್ಯ ಬಾಹ್ಯವಾಗಿ ಅದೇಷ್ಟೋ ಆಧುನಿಕತೆ ಹೊಂದಿದ್ದರೂ  ಅಂತರಂಗದಲ್ಲಿ ಸಂಕುಚಿತ ಭಾವವನ್ನು ತಳೆದಿದ್ದಾನೆ.


ಹತ್ತಾರು ಮಂದಿಯಿರುತ್ತಿದ್ದ ಮನೆ ಮನದಲ್ಲಿ ಇಂದು ನಾಲ್ಕಾರು ಮಂದಿಯಿರುವ ವ್ಯವಸ್ಥೆಯಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಸಮಾಜದ ಇಕ್ಕೆಲಗಳಲ್ಲಿ ನೂರಾರು ಮಂದಿ ಕಾಣುವುದಕ್ಕೆ ಸಿಕ್ಕರು ಮನುಷ್ಯ ಮನಸ್ಸಿನ ಭಾವ ಹಂಚಿಕೊಳ್ಳಲಾಗದೆ ಒಂಟಿಯಾಗುತ್ತಿದ್ದಾನೆ.‌ ಗೆಲುವು ಸೋಲಿನ ಬೀದಿ ಗದ್ದಲದಲ್ಲಿ ಮುಳುಗಿ ನಿರಾಶನಾಗುತ್ತಿದ್ದಾನೆ. ಸಮಾಲೋಚನೆ ನಡೆಸಿ ನಿರ್ಧರಿಸಲು ಹಿರಿಯರಿಲ್ಲ. ಇದ್ದವರು ಅವರವರ ಕಾಯಕದಲ್ಲಿ ತೊಡಗಿ ಮತ್ತೊಬ್ಬರ ಸಮಸ್ಯೆ ಆಲಿಸಿ ಪರಿಹರಿಸುವಷ್ಟು ಸಮಯ ಇಲ್ಲದಂತಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ಸಂಬಂಧಗಳಲ್ಲಿ ಭಾವನೆಗಳು ಸಂವಹನ ಮಾಧ್ಯಮವಾಗದೆ ಮನುಷ್ಯನ ಬಾಹ್ಯ ಸುಸ್ಥಿತಿಗಳ ಮೂಲಕ ವ್ಯವಹಾರ ನಡೆಯುತ್ತಿದೆ. ಹೀಗಾಗಿ ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಿತಿ ಚೆನ್ನಾಗಿದ್ದಾಗ ಇರುವ ಸಂಬಂಧಗಳ ಗಟ್ಟಿತನ ಹದಗೆಟ್ಟಾಗ ಕಾಣ ಸಿಗುವುದಿಲ್ಲ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿಭಕ್ತ ಕುಟುಂಬದಲ್ಲಿ ಬದುಕುತ್ತಿರುವ ನಾವು ಒಂದಿಷ್ಟು ಭಾವನೆಗಳ ಮೂಲಕ ಸಂಬಂಧವನ್ನು ರೂಪಿಸುವುದು ಕಲಿತು ಮುನ್ನಡೆದರೆ ಮುಂದಿನ ಪೀಳಿಗೆಯು ನಮ್ಮಿಂದ ಒಂದಿಷ್ಟು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿ ಆಗಬಹುದು. ಇಲ್ಲವಾದಲ್ಲಿ ಕೆಡುಕುಗಳ ಕಗ್ಗತ್ತಲಿಗೆ ನಮ್ಮ ಭವಿಷ್ಯದ ಮಕ್ಕಳನ್ನು ತಳ್ಳುವುದರಲ್ಲಿ ನಾವೇ ಪ್ರಮುಖ ಪಾತ್ರ ವಹಿಸಿದಂತಾಗುವುದು.


-ಪ್ರದೀಪ ಶೆಟ್ಟಿ ಬೇಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top