ಪಡುಬಿದ್ರಿ: ಶ್ರೀ ಕಟೀಲು ಮೇಳದ ಹಿರಿಯ ಕಲಾವಿದ, ಪ್ರಬಂಧಕ, ಅರ್ಥಧಾರಿ, ವಾಗ್ಮಿ ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ಖ್ಯಾತ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರಿಗೆ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ನಡೆದ ಕಟೀಲು ಯಕ್ಷಗಾನ ಮೇಳದ ಸೇವೆ ಆಟದಲ್ಲಿ 'ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಕಲ್ಲಟೆ ಗುತ್ತು ಮೂಲ ಕುಟುಂಬಸ್ಥರಾದ ಎರ್ಮಾಳು ರಾಧಾ ವಿಠ್ಠಲ ಶೆಟ್ಟಿ ಹಾಗೂ ಮಕ್ಕಳು ಕಂಬಳ ಕ್ಷೇತ್ರದಲ್ಲಿ ಕೋಣಗಳ ಯಜಮಾನರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟ್ ಕೋಪರ್ ನ ಭಾರತ್ ಕೆಫೆಯ ಸಂಸ್ಥಾಪಕ ಎರ್ಮಾಳ್ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಿದರು.
ಕಟೀಲು ದೇವಸ್ಥಾನ ದ ಅನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಮಾತನಾಡಿ, ಕಟೀಲು ಮೇಳ ಒಂದರಲ್ಲಿಯೇ ಕಳೆದ ನಲ್ವತ್ತು ವರುಷಗಳಿಂದ ನಿರಂತರ ಕಲಾ ಸೇವೆ ಮಾಡುತ್ತಿರುವ ಸುಣ್ಣಂಬಳ ಅವರ ಕಲಾಯಾನದ ಮೇಲ್ಮೆಯನ್ನು ಹಾಗೂ ರಾಜ ಹಾಸ್ಯದ ಪ್ರತಿನಿಧಿಯಂತೆ ರಂಗಸ್ಥಳದಲ್ಲಿ ಮೆರೆಯುವ ಮಣಿಯಾಣಿ ಅವರ ಹಾಸ್ಯದ ಓಘವನ್ನು ಕೊಂಡಾಡಿದರು.
ರಿಬ್ಬನ್ಸ್ ಅಂಡ್ ಬಲೂನ್ಸ್ ಸಂಸ್ಥಾಪಕ ಎರ್ಮಾಳ್ ಸತೀಶ್ ಶೆಟ್ಟಿ ಅವರು ನಿರಂತರವಾಗಿ ಇಪ್ಪತ್ತಾರನೆಯ ವರ್ಷದ ತಮ್ಮ ಕುಟುಂಬದ ಸೇವೆ ಆಟಕ್ಕೆ ಆಗಮಿಸಿ ಹರಸಿದ ಅಸ್ರಣ್ಣ ಅವರನ್ನು ಗೌರವಿಸಿದರು.
ಐಕಳ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಎರ್ಮಾಳ್ ಹೊಸಮನೆ ಕಮಲನಿವಾಸ ಉದಯ ಶೆಟ್ಟಿ, ರಾಜೇಶ್ ಶೆಟ್ಟಿ, ವಿಶು ಕುಮಾರ್ ಉಚ್ಚಿಲ್ ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಈ ಸಂದರ್ಭದಲ್ಲಿ 'ವೀರ ಮಾರುತಿ' ಯಕ್ಷಗಾನ ಪ್ರದರ್ಶನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ