ಉಡುಪಿ: ಉಡುಪಿ ಜಿಲ್ಲೆಯು ಸ್ಥಾಪನೆಯ ರಜತ ಮಹೋತ್ಸವ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಹೊತ್ತಲ್ಲಿ ಜಿಲ್ಲೆಯ ಆರ್ಥಿಕತೆ ವೃದ್ಧಿ, ಪ್ರತಿಭಾ ಪಲಾಯನ ತಡೆ, ಹಾಗೂ ಕೃಷಿ ಪುನಶ್ಚೇತನ, ಕೌಟುಂಬಿಕ ಜೀವನ ವ್ಯವಸ್ಥೆ ಸುಧಾರಣೆಯೇ ಮೊದಲಾದ ಆಶಯಗಳ ಈಡೇರಿಕೆಗಾಗಿ ಜಿಲ್ಲೆಯಲ್ಲಿ ಸಾಫ್ಟ್‌ವೇರ್ ಐಟಿ ಪಾರ್ಕ್ ಒಂದನ್ನು ಶೀಘ್ರವೇ ನಿರ್ಮಿಸುವಂತೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ, ಎಂಟರ್ ಪ್ರನ್ಯೂರ್ ಶಿಪ್, ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ರಾಜ್ಯ ಮಂತ್ರಿ ರಾಜೀವ್ ಚಂದ್ರಶೇಖರ್ ಅವರಿಗೆ ಕಳೆದ ಸಪ್ಟಂಬರ್ ತಿಂಗಳಲ್ಲಿ ಶ್ರೀಗಳು ಪತ್ರ ಬರೆದಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ರಾಜ್ಯದ ಐಟಿ ಬಿಟಿ ಮಂತ್ರಿಯಾಗಿರುವ ಡಾ. ಅಶ್ವತ್ಥನಾರಾಯಣ ಅವರಲ್ಲೂ ಶ್ರೀಗಳು ಚರ್ಚಿಸಿದ್ದು ಅವರೂ ತುಂಬ ಉತ್ಸಾಹದ ಸ್ಪಂದನೆ ನೀಡಿದ್ದಾರೆ. ಕೇಂದ್ರದ ಕೃಷಿ ಮತ್ತು ರೈತಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಿಗೂ ಪತ್ರದ ಪ್ರತಿ ಕಳಿಸಿದ್ದು ಅವರು ಜಿಲ್ಲಾಧಿಕಾರಿಗಳಿಗೆ ಕೂಡಲೇ ಈ ಬಗ್ಗೆ ಪ್ರಸ್ತಾವನೆಯನ್ನು ರಾಜ್ಯಕ್ಕೆ ಕಳಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಸ್ತಾವನೆ ಸಿದ್ಧವಾಗುತ್ತಿದ್ದು ಕೂಡಲೇ ಕಳಿಸಲಾಗುವುದು ಎಂಬ ಮಾಹಿತಿ ದೊರೆತಿದೆ.
ಶ್ರೀಗಳು ತಮ್ಮ ಪತ್ರದಲ್ಲಿ ಅನೇಕ ಅಂಶಗಳನ್ನು ವಿವರಿಸಿದ್ದಾರೆ. ಉಡುಪಿ ಮತ್ತು ದಕ ಜಿಲ್ಲೆಗಳು ಶೈಕ್ಷಣಿಕವಾಗಿ ಉತ್ತಮ ನಿರ್ವಹಣೆಯನ್ನು ತೋರುತ್ತಿದ್ದು, ಪ್ರತೀವರ್ಷ ನೂರಾರು ಪ್ರತಿಭಾವಂತ ಐಟಿ ಪದವೀಧರರು ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ. ಆದರೆ ಅದಕ್ಕನುಗುಣವಾಗಿ ಉದ್ಯೋಗದ ವ್ಯವಸ್ಥೆ ಇಲ್ಲಿ ಇಲ್ಲದಿರುವುದರಿಂದ ಬೆಂಗಳೂರು ಮುಂಬಯಿ ಪೂನಾ ಚೆನ್ನೈ ಹೀಗೆ ಹೊರರಾಜ್ಯ ಹೊರದೇಶಗಳಿಗೆ ತೆರಳುತ್ತಿದ್ದಾರೆ. ಪರಿಣಾಮವಾಗಿ ಪ್ರತಿಭಾ ಪಲಾಯನವಾಗಿ ಇಲ್ಲಿನ ಕೌಟುಂಬಿಕ ಜೀವನ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿವೆ. ನೂರಾರು ಮನೆಗಳಲ್ಲಿ ವೃದ್ಧ ಹೆತ್ತವರಿಗೆ ಇಳಿ ವಯಸ್ಸಲ್ಲಿ ಆಸರೆ ಇಲ್ಲದಂತಾಗಿದೆ. ಅಲ್ಲದೇ ಅನೇಕ ಇಂಥಹ ಯುವಕರಿಗೆ ಕೃಷಿ ಕುಟುಂಬದ ಹಿನ್ನೆಲೆಯೂ ಇರುವುದರಿಂದ ಅವರು ಹೊರಗಡೆ ಉದ್ಯೋಗ ನಡೆಸುವುದರಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ಬಂಜರು ಬೀಳಲು ಅದೂ ಒಂದು ಕಾರಣವಾಗಿದೆ. ಈ ಸಾಮಾಜಿಕ ಸಮಸ್ಯೆಗಳ ಪರಿಹಾರ ಮತ್ತು ಜಿಲ್ಲೆಯ ಆರ್ಥಿಕತೆ ವೃದ್ಧಿಗೆ ಪೂರಕವಾಗಿ ಜಿಲ್ಲೆಯಲ್ಲಿ ಕನಿಷ್ಠ ನೂರು ಎಕರೆ ಪ್ರದೇಶದಲ್ಲಿ ಸಾಫ್ಟ್ ವೇರ್ ಪಾರ್ಕ್ ಒಂದನ್ನು ನಿರ್ಮಿಸಬೇಕು; ಈ ಉದ್ದೇಶಕ್ಕೆ ಮೂಲಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿಯಷ್ಟು ಅನುದಾನವನ್ನು ಶೀಘ್ರ ಒದಗಿಸುವಂತೆ ಶ್ರೀಗಳು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಇದರಿಂದಾಗಿ ಉಡುಪಿಯ ಸಾವಿರಾರು ಐಟಿ ಪದವೀಧರರಿಗೆ ಜಿಲ್ಲೆಯಲ್ಲೇ ಯೋಗ್ಯ ಉದ್ಯೋಗ ದೊರೆಯುವಂತಾದರೆ ಕೃಷಿ ಮೊದಲಾದ ಪೂರಕ ಚಟುವಟಿಕೆಗಳಿಗೂ ಹೊಸ ಶಕ್ತಿ ದೊರೆಯಲು ಸಾಧ್ಯವಿದೆ. ಹೆತ್ತವರಿಗೆ ಮಕ್ಕಳ ಆಸರೆ ದೊರೆಯುತ್ತದೆ. ಜಿಲ್ಲೆಯಲ್ಲಿ ಐಟಿ ಉದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ಶೀಘ್ರ ಬಳಸಿಕೊಳ್ಳುವಂತೆಯೂ ಶ್ರೀಗಳು ವಿವರಿಸಿದ್ದಾರೆ. ಈ ಪತ್ರಕ್ಕೆ ರಾಜೀವ್ ಚಂದ್ರಶೇಖರ್ ಸೂಕ್ತವಾಗಿ ಸ್ಪಂದಿಸಿದ್ದು ರಾಜ್ಯದಿಂದ ಪ್ರಸ್ತಾವನೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ