ಒಂದು ಉತ್ತಮ ಸಂಸ್ಕಾರಯುಕ್ತ ಮತ್ತು ಧಾರ್ಮಿಕ- ಸಾಂಸ್ಕೃತಿಕ ಸಂವೇದನಾಶೀಲ ಮನಸ್ಸುಗಳಲ್ಲಿ ಅದೇನೆಲ್ಲ ಸುಂದರ ಕಲ್ಪನೆಗಳು ಅರಳಬಲ್ಲವು ಅನ್ನುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಬಹುದು.
ಉಡುಪಿಯ ಶ್ರೀ ಹರೀಶ್ ಆಚಾರ್ಯರು ತಮ್ಮ ಸಾರ್ಥಕ ಜೀವನದ ಅರುವತ್ತು ವಸಂತಗಳನ್ನು ಪೂರೈಸಿದ ಸಡಗರದಲ್ಲಿ ಒಂದು ಉತ್ತಮ ಕಾರ್ಯಮಾಡಿ ಗಮನ ಸೆಳೆದಿದ್ದಾರೆ. ಜನವರಿ 28 ರಂದು ಉಡುಪಿ ನೀಲಾವರದ ಗೋಶಾಲೆಗೆ ತಮ್ಮ ಮನೆ ಮಂದಿ, ಇಷ್ಟಮಿತ್ರರು ಹಾಗೂ ಬಂಧುಗಳೊಡನೆ ತೆರಳಿ ಸುಮಾರು ಎರಡು ಲಕ್ಷ ರೂ. ಗಳಷ್ಟು ವೆಚ್ಚದಲ್ಲಿ ವಿವಿಧ ಬಗೆಯ ಹಿಂಡಿಗಳನ್ನು, ಕುಚ್ಚಲಕ್ಕಿ ಬೆಲ್ಲದೊಂದಿಗೆ ಮಿಶ್ರಣಮಾಡಿ ಪಾಯಸದ ರೂಪದಲ್ಲಿ ಸಿದ್ಧಪಡಿಸಿ ಅಲ್ಲಿರುವ ಒಂದೂವರೆ ಸಾವಿರಕ್ಕೂ ಅಧಿಕ ಗೋವುಗಳಿಗೆ ಯಥೇಚ್ಛ ಉಣಬಡಿಸಿ ಮನಸಾ ಸಂತೋಷ ಪಟ್ಟಿದ್ದಾರೆ. ಈ ಮುಖೇನ ತಮ್ಮ ಷಷ್ಠ್ಯಬ್ದಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಮಾದರಿಯಾಗಿದ್ದಾರೆ.
ಗೋಶಾಲೆಯ ಮುಖ್ಯಸ್ಥರೂ ಆಗಿರುವ ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಿತ್ತೈಸಿ ಈ ಸತ್ಕರ್ಮಕ್ಕೆ ಚಾಲನೆ ನೀಡಿ ಹರಸಿದರು.
ಗೋಸೇವೆಯ ಬಳಿಕ ಆಗಮಿಸಿದ ಎಲ್ಲರಿಗೂ ಭೋಜನ ವ್ಯವಸ್ಥೆಯನ್ನೂ ಮಾಡಿದ್ದರು. ಅರುವತ್ತರ ಉದ್ದೇಶಕ್ಕೆ ಶಾಂತಿ ಹೋಮ ಹವನ ಸಮಾರಾಧನೆ ನಡೆಸಲಿದ್ದು, ಆ ಸಂಭ್ರಮದ ಒಂದು ಭಾಗವನ್ನು ಪುಣ್ಯಕೋಟಿಯ ಕುಲಕ್ಕಾಗಿ ವ್ಯಯಿಸಿ ಕೋಟಿ ಪುಣ್ಯ ಸಂಪಾದಿಸುವ ಪುಣ್ಯಕಾರ್ಯ ಮಾಡಿದ್ದಾರೆ. ಹರೀಶ್ ಆಚಾರ್ಯರು ಇದೇ ರೀತಿ ತಮ್ಮ 70, 80, 90, 100 ವಸಂತಗಳನ್ನು ಆಚರಿಸಿಕೊಳ್ಳುವಂತಾಗಲಿ. ಶ್ರೀಕೃಷ್ಣ ಅವರಿಗೆ ಆರೋಗ್ಯಪೂರ್ಣ ಆಯುಷ್ಯ, ನೆಮ್ಮದಿಯ ಜೀವನವನ್ನು ಅನುಗ್ರಹಿಸಲಿ, ಅವರಿಂದ ಇಂತಹ ಗೋಸೇವೆಗಳು ನಿರಂತರ ನಡೆಯಲಿ ಎಂದು ಶುಭಹಾರೈಸೋಣ.
ಹರೀಶ್ ಆಚಾರ್ಯರು ಉಡುಪಿ ನಗರದ ಹೃದಯಭಾಗದಲ್ಲಿ (ಸಂಸ್ಕೃತ ಕಾಲೇಜು ರಸ್ತೆ) ದಶಕಗಳ ಹಿಂದೆ ತಮ್ಮ ಹಿರಿಯರು ಆರಂಭಸಿದ ಹಾಗೂ ಅತ್ಯಂತ ಪ್ರಸಿದ್ಧವಾದ ಶ್ರೀ ಕೃಷ್ಣ ಸ್ಟೋರ್ಸ್ ಎಂಬ ಜಿನಸು ಅಂಗಡಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗೋಸೇವೆಯನ್ನೂ ಮಾಡುತ್ತಲೇ ಬಂದಿದ್ದಾರೆ. 'ಸಮಾಜದಲ್ಲಿ ಗೋವಿನ ಪೋಷಕರನ್ನು ಹಾಗೂ ಧನಿಕರನ್ನು (ಇಂತಹ ಸತ್ಕರ್ಮ ನಿರತರಾದವರು) ಸಮಾಜ ಆದ್ಯತೆಯ ಮೇರೆಗೆ ಪೋಷಿಸಬೇಕು, ಪ್ರೋತ್ಸಾಹಿಸಬೇಕು ಎಂಬುದು ಮಹರ್ಷಿ ವೇದವ್ಯಾಸರು, ಆಚಾರ್ಯ ಚಾಣಕ್ಯ ಮೊದಲಾದವರು ಆದೇಶವೆಂಬ ರೀತಿಯಲ್ಲಿ ಹೇಳಿದ ಒಂದು ಮಾತು. ಅದರಿಂದ ಲೋಕಕ್ಕೆ ಒಳಿತಾಗುತ್ತದೆ. ಆ ಹಿನ್ನೆಲೆಯಲ್ಲಿ ಹರೀಶ್ ಆಚಾರ್ಯರಂಥವರಿಗೆ ಶುಭ ಹಾರೈಸುವುದು, ಅವರು ನಡೆಸುವ ಇಂತಹ ಸತ್ಕಾರ್ಯಗಳಿಗೆ ನೆರವಾಗುದು ಮತ್ತು ಅವರ ವ್ಯಾಪಾರ ವ್ಯವಹಾರಗಳಿಗೆ ಪ್ರೋತ್ಸಾಹ ನೀಡುವುದು ನಮ್ಮಿಂದ ಸಾಧ್ಯವಾದರೆ ಅವರ ಪುಣ್ಯ ಕಾರ್ಯಗಳಲ್ಲಿ ನಮಗೂ ಒಂದಂಶ ಪುಣ್ಯ ಒದಗಿ ಬಂದೀತು.
-ಜಿ ವಾಸುದೇವ ಭಟ್ ಪೆರಂಪಳ್ಳಿ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ