|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾಣಿನಿಯ ಪಾಣಿಯಲ್ಲಿ 30 ಸಂಗೀತವಾದ್ಯಗಳು!

ಪಾಣಿನಿಯ ಪಾಣಿಯಲ್ಲಿ 30 ಸಂಗೀತವಾದ್ಯಗಳು!


ಕೋಸ್ಟಿಕ್ ಗಿಟಾರ್, ಇಲೆಕ್ಟ್ರಿಕ್ ಗಿಟಾರ್, ಸ್ಲೈಡ್ ಗಿಟಾರ್, ಮ್ಯಾಂಡೊಲಿನ್, ಸಂತೂರ್ , ವಯೋಲಿನ್, ವೀಣೆ, ಯುಕುಲೆಲೆ, ಹಾರ್ಮೋನಿಯಂ, ಕೀಬೋರ್ಡ್, ಮೆಲೋಡಿಕಾ, ಹಾರ್ಮೋನಿಕ, ಸ್ಯಾಕ್ಸ ಫೋನ್, ಬಾನ್ಸುರಿ, ಐರಿಶ್ ಫ್ಲೂಟ್, ರೆಕಾರ್ಡರ್, ಮಿನಿ ಸ್ಯಾಕ್ಸ್, ಕ್ಸೈಲೋಫೋನ್, ಮೋರ್ಸಿಂಗ್, ಕಾಝೂ (ಬಾಚಣಿಗೆ ಬಳಸಿ ನುಡಿಸುವ ಸಂಗೀತ), ಐ ಪ್ಯಾಡ್ (ಜಿಯೋಶ್ರೆಡ್), ಕಹೊನ್, ಕಾಂಗೋ, ಜೆಂಬೆ, ದರ್ಬೂಕ, ಬಾಂಗೊ, ಡ್ರಮ್ಸ್, ಡ್ರಮ್ ಪ್ಯಾಡ್, ಡಫ್ಲಿ, ಮೊರೊಕ್ಕೊ, ಡೋಲು..


ಇವಿಷ್ಟೂ ವಿವಿಧ ಸಂಗೀತ ವಾದ್ಯಗಳ ಹೆಸರುಗಳು! ಸಾಮಾನ್ಯವಾಗಿ ಇವುಗಳಲ್ಲಿ ಕೆಲವು ವಾದ್ಯಗಳ ಹೆಸರು ಕೇಳಿಯೇ ಇರುವುದಿಲ್ಲ. ಕೇಳಿದ್ದರೂ ನೆನಪಿನಲ್ಲಿ ಉಳಿಯುವುದಿಲ್ಲ. ಹೀಗಿದ್ದಾಗ ವಿಭಿನ್ನ ಶೈಲಿಯ ಇಷ್ಟೂ ವಾದ್ಯಗಳನ್ನು ಒಬ್ಬನೇ ವ್ಯಕ್ತಿ ನುಡಿಸಬಲ್ಲ ಅಂದರೆ ಆಶ್ಚರ್ಯವೇ ಸರಿ! 


ಇಲ್ಲಿದೆ ನೋಡಿ ವೀಡಿಯೋ:




ಇವರು ಪಾಣಿನಿ ದೇರಾಜೆ. ಸಂಗೀತದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಬಹುವಾದ್ಯ ಪರಿಣತ. ಸಂಗೀತ ಸಂಯೋಜಕ, ಹಾಡುಗಾರ, ತರಬೇತುದಾರ. ರೆಕಾರ್ಡರ್ /ಕೊಳಲನ್ನು ಮೂಗಿನಲ್ಲಿ ನುಡಿಸುವುದು, ಪದ್ಯಗಳನ್ನು ಉಲ್ಟಾ ಹಾಡುವುದು, ಬಾಚಣಿಗೆ ಮತ್ತು ಕಾಗದ ಬಳಸಿ ಬರುವ ಸ್ವರದಿಂದ ರಾಗದಲ್ಲಿ ಹಾಡುಗಳನ್ನು ನುಡಿಸುವುದು ಇತ್ಯಾದಿ ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಿರುವ ಕ್ರಿಯಾಶೀಲ.


ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಯಕ್ಷಗಾನ-ತಾಳಮದ್ದಳೆ, ಸಾಹಿತ್ಯ, ಸಂಗೀತ, ನಾಟಕಕ್ಕೆ ಹೆಸರಾದ ದೇರಾಜೆ ಮನೆತನದವರು. ಖ್ಯಾತ ನಾಟಕ ನಿರ್ದೇಶಕ ಮೂರ್ತಿ ದೇರಾಜೆ ಮತ್ತು ಸುಮತಿ ಅವರ ಪುತ್ರ. ಯಕ್ಷಗಾನ-ತಾಳಮದ್ದಳೆ ಕಲಾಲೋಕದ ಸಾಧಕರಾದ ರಸಋಷಿ ಖ್ಯಾತಿಯ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಮೊಮ್ಮಗ.


ಇವರ ಸಂಗೀತದ ಬಾಲನುಡಿಗಳಿಗೆ ಅಪ್ಪನೇ ಮೊದಲ ಗುರು. ಕೀ ಬೋರ್ಡ್, ಮ್ಯಾಂಡೋಲಿನ್, ಮೌತ್ ಆರ್ಗನ್ ನುಡಿಸಲು ಕಲಿಸಿ ವಿಶೇಷ ಆಸಕ್ತಿ ಮೂಡಿಸಿದ್ದು ತಂದೆ ಮೂರ್ತಿ ದೇರಾಜೆ ಅವರೇ. ಮುಂದಿನ ದಿನಗಳಲ್ಲಿ ಪುತ್ತೂರು ರಾಜಶೇಖರ್ ಅವರಿಂದ ಗಿಟಾರ್ ನ ಆರಂಭಿಕ ಪಾಠ. ಬೆಂಗಳೂರಿನ ನರೇಂದ್ರ ನಾಥ್ ಅವರ ಬಳಿ ಪಾಶ್ಚಾತ್ಯ ಸಂಗೀತ ಸಂಕೇತಗಳ (western staff notations) ಅಭ್ಯಾಸ, ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡಿದ ಅನುಭವ. ನಂತರ, ಬೆಂಗಳೂರಿನ ಖ್ಯಾತ ಸಂಗೀತ ಸಂಯೋಜಕ, ಹಾಡುಗಾರ ಹಾಗೂ ಬಹು ವಾದ್ಯಪರಿಕರಗಳ ನುಡಿಸುವಿಕೆಯಲ್ಲಿ ನಿಪುಣರಾದ ವಿಕ್ಟರ್ ಆಲ್ಬರ್ಟ್ ಜತೆ ಒಂದೂವರೆ ವರ್ಷಗಳ ಕಾಲ ಒಡನಾಟದ ಮೂಲಕ ಪಾಶ್ಚಾತ್ಯ ಸಂಗೀತದ ಬಗೆಗಿನ ಆಳವಾದ ಜ್ಞಾನ ಪ್ರಾಪ್ತಿ. ಜತೆಗೆ, ರಂಗ ಸಂಗೀತದ ಬಗ್ಗೆ ಹೆಗ್ಗೋಡಿನ ನೀನಾಸಂ ನಲ್ಲಿ ಭಾಸ್ಕರ ಚಂದಾವರ್ಕರ್ ಅವರಿಂದ ವಿಶೇಷ ತರಬೇತಿ.


ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಪಾಣಿನಿ, ಪೂರ್ಣಾವಧಿ ತಮ್ಮ ಸಂಗೀತ ವಾದ್ಯಪರಿಕರಗಳೊಂದಿಗೇ ಬದುಕುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟವರು. ಪ್ರಸ್ತುತ ಕಲಾನಗರಿ ಮೈಸೂರಿನಲ್ಲಿ ವಾಸ. ತಮ್ಮಲ್ಲಿರುವ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸದಿದ್ದರೆ ಅದು ವ್ಯರ್ಥವಾಗಿಬಿಡುತ್ತದೆ. ತಾವು ಕಲಿತಿರುವುದನ್ನು ಇನ್ನೊಬ್ಬರಿಗೆ ಕಲಿಸಿದಾಗಲೇ ಜ್ಞಾನ ವೃದ್ಧಿಯಾಗುವುದು ಎಂಬ ಇಂಗಿತದಿಂದ ಇದೀಗ ವಿವಿಧ ವಾದ್ಯಪರಿಕರಗಳ ತರಬೇತಿ ನೀಡುತ್ತಿದ್ದಾರೆ. ಜತೆಗೆ, ಭಾವಗೀತೆ, ಜನಪದ ಗೀತೆ ಹಾಗೂ ಭಕ್ತಿಗೀತೆಗಳನ್ನು ಕಲಿಸುತ್ತಿದ್ದಾರೆ. ಇದಲ್ಲದೇ, ಪಾಶ್ಚಾತ್ಯ ಸಂಗೀತದಲ್ಲಿ ಒಂದು ಪ್ರಮಾಣೀಕೃತ ಕೋರ್ಸ್ ಆಗಿರುವ ಮ್ಯೂಸಿಕಮ್ಯಾಥ್ ನ ಅಧಿಕೃತ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದಾರೆ.


ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ನಿರ್ದೇಶನದ ಮಲ್ಲಿನಾಥ ಧ್ಯಾನ ಮತ್ತು ರಂಗಭೂಮಿಯ ಖ್ಯಾತ ನಟ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರು ಬೆಂಗಳೂರು ಕೇಂದ್ರೀಯ ಜೈಲಿನ ಕೈದಿಗಳಿಗೆ ನಿರ್ದೇಶನ ಮಾಡಿದ ಮಾರನಾಯಕ ನಾಟಕಗಳಿಗೆ ಸಂಗೀತ ಸಹಕಾರ ನೀಡಿದ್ದಾರೆ. ಧರ್ಮೇಂದ್ರ ನಿರ್ದೇಶನದ  ಪ್ರೇಮಪತ್ರ ನಾಟಕಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮೂರ್ತಿ ದೇರಾಜೆ ನಿರ್ದೇಶನದ ಎಲ್ಲ ನಾಟಕಗಳಿಗೆ ಸಂಗೀತ ನೀಡುವ ಇವರು ಕಳೆದ 20 ವರ್ಷಗಳಿಂದ ಉಡುಪಿಯ ಪ್ರೊ. ಶಂಕರ್ ಅವರ ಗಿಲಿಗಿಲಿ ಮ್ಯಾಜಿಕ್ ತಂಡದ ಸಕ್ರಿಯ ಸದಸ್ಯ. ಅಲ್ಲದೇ, ಸಮನ್ವಯ ರಂಗಗೀತೆಗಳು ತಂಡದೊಂದಿಗೆ ಕೆಲಸ ನಿರ್ವಹಿಸಿದ ಅನುಭವ ಇವರದ್ದು.


ಬೆಂಗಳೂರಿನ ಹ್ಯಾಪ್ಪಿ ವ್ಯಾಲಿ, ಗುರುಕುಲ, ಜೆಎಂವಿಕೆ ಮುಂತಾದ ಶಾಲೆಗಳಲ್ಲಿ ಮ್ಯೂಸಿಕ್ ಶಿಕ್ಷಕರಾಗಿ ಸೇವೆಸಲ್ಲಿಸಿದ್ದಲ್ಲದೆ ಸುಮಾರು 20 ವರ್ಷಗಳ ಕಾಲ ಬೆಂಗಳೂರಿನಲ್ಲಿ ಮ್ಯೂಸಿಕ್ ತರಗತಿ ನಡೆಸಿದ್ದಾರೆ. ಪ್ರಸ್ತುತ ಮೈಸೂರಿನ ಕೌಟಿಲ್ಯ ವಿದ್ಯಾಲಯ, ಮೈಸೂರು ಪಬ್ಲಿಕ್ ಸ್ಕೂಲ್ ಮತ್ತು ಪರಿವರ್ತನಾ ಸ್ಕೂಲ್ ಶ್ರೀರಂಗಪಟ್ಟಣ ಇಲ್ಲಿ ಮಕ್ಕಳಿಗೆ ಸಂಗೀತ ಪಾಠ ಮಾಡುತ್ತಿದ್ದಾರೆ. 


ಇವರ ಯೂಟ್ಯೂಬ್ ಚಾನೆಲ್ ವೀಕ್ಷಿಸಿ


https://youtube.com/@PaniniDeraje


ಪ್ರದರ್ಶನವನ್ನೇ ಗುರಿಯಾಗಿಸಿಕೊಂಡು ಮ್ಯೂಸಿಕ್ ಕ್ಲಾಸ್ ಗಳಿಗೆ ಮಕ್ಕಳನ್ನು ಸೇರಿಸುವ ಬಗ್ಗೆ ಅತೀವ ಬೇಸರ ಇದೆ. ಏನಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಬೇಕು ಎಂಬ ಉದ್ದೇಶದಿಂದ ಅಥವಾ ಇಂತದ್ದನ್ನೇ ಕಲಿಯಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುವುದು ತಪ್ಪು. ಇದರಿಂದ ಸಮಯ, ದುಡ್ಡು ಎರಡೂ ಹಾಳು. ಆಸಕ್ತಿ, ಅಭಿರುಚಿ ಇದ್ದರೆ ಮಾತ್ರ ಕಲಾ ಸಾಧನೆ ಸಾಧ್ಯ ಎಂಬುದು ಇವರ ಅನುಭವ ಮತ್ತು ಅಭಿಪ್ರಾಯ.


ತಂದೆ, ತಾಯಿ, ಅಣ್ಣ ಭಾರವಿ ದೇರಾಜೆ (ಹೆಸರಾಂತ ತಬಲಾ ವಾದಕ), ಪತ್ನಿ ಸುಮಾ ಇವರ ಬೆಂಬಲ ಪಾಣಿನಿ ಸಾಧನೆಯ ಹಿಂದಿನ ಶಕ್ತಿ. ಅತೀವ ಆಸಕ್ತಿ, ತಾಳ್ಮೆ, ಸತತ ಅಭ್ಯಾಸ, ಬದ್ಧತೆ ಜತೆಗೆ ಒಂದಷ್ಟು ಸೃಜನಶೀಲತೆ ಇದ್ದರೆ ಸಾಧನೆಗೆ ಮಿತಿಯಿಲ್ಲ ಎಂಬುದಕ್ಕೆ ಇವರು ಸಾಕ್ಷಿ.

 ಈ ಅಪೂರ್ವ ಕಲಾವಿದನಿಗೆ ಶುಭಹಾರೈಕೆಗಳು. 


- ಉಪಯುಕ್ತ ನ್ಯೂಸ್ ಟೀಮ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


2 Comments

Post a Comment

Post a Comment

Previous Post Next Post