ಶಂಕರರ ಅವಿಚ್ಛಿನ್ನ ಪರಂಪರೆಯಿಂದ ದೇಶ ಬೆರಗುಗೊಳ್ಳುವಂಥ ಸಾಧನೆ: ಬಿ.ಎಲ್ ಸಂತೋಷ್

Upayuktha
0

ವಿಷ್ಣುಗುಪ್ತ ವಿವಿ ದೇಶ ಬೆಳಗುವ ಜ್ಞಾನಗೋಪುರ: ರಾಘವೇಶ್ವರ ಶ್ರೀ


ಗೋಕರ್ಣ: ಮರಳಿ ಮೂಲಕ್ಕೆ ಎನ್ನುವುದು ನಮ್ಮ ಸಂಸ್ಕೃತಿಯ ತಿರುಳು. ಜೀವನ ಎನ್ನುವುದು ಸತ್ ವೃತ್ತ ಇದ್ದಂತೆ; ಮತ್ತೆ ಮೂಲ ಬಿಂದುವನ್ನೇ ಮುಟ್ಟುತ್ತದೆ. ಭಗವಂತನ ಸನ್ನಿಧಿಯಿಂದ ಬಂದ ನಾವು ಮತ್ತೆ ಅವನನ್ನೇ ತಲುಪಬೇಕು ಎನ್ನುವ ಆಶಯದೊಂದಿಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಗೋಕರ್ಣದ ಅಶೋಕೆಯಲ್ಲಿ ಶ್ರೀಮಠದ ಕಾರ್ಯಕರ್ತರ ದೇಣಿಗೆಯಿಂದಲೇ ವಿಶಿಷ್ಟವಾಗಿ ನಿರ್ಮಿಸಲಾದ ಸೇವಾಸೌಧದ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಮುಂದಿನ ಪೀಳಿಗೆಗಳು ನೆನೆಸಿಕೊಳ್ಳುವಂಥ ಘನ ರಾಷ್ಟ್ರಕಾರ್ಯವನ್ನು ಮಾಡುವ ಮೂಲಕ ಭಗವಂತನಿಗೆ ಹತ್ತಿರವಾಗೋಣ ಎಂದು ಕಿವಿಮಾತು ಹೇಳಿದರು. ವಿವಿವಿ ಮುಂದಿನ ದಿನಗಳಲ್ಲಿ ರಾಷ್ಟ್ರದ ದೀಪಗೋಪುರ, ಜ್ಞಾನಗೋಪುರವಾಗಿ ತಲೆ ಎತ್ತಿ ನಿಲ್ಲಲಿದೆ ಎಂದರು.


"ಸೇವಾ ಸೌಧದ ಮೂಲಕ ನಾವು ಮರಳಿ ಮೂಲಕ್ಕೆ ಬಂದೆವು. ಸಾವಿರ ವರ್ಷ ಹಿಂದೆ ಶ್ರೀಶಂಕರರು ಮೂಲಮಠ ಸ್ಥಾಪಿಸಿದ ಪ್ರದೇಶ, ಪೋರ್ಚ್‍ಗೀಸ್ ದಾಳಿಯಿಂದಾಗಿ ಹಲವು ವರ್ಷಗಳ ಕಾಲ ಅದೃಶ್ಯವಾಗಿತ್ತು. ಪೋರ್ಚುಗೀಸರು ದಾಳಿ ಮಾಡಿ ನಾಶಮಾಡಿದ ಮಠದ ನೂರು ಪಟ್ಟು ಶಕ್ತಿಯೊಂದಿಗೆ ಮಠ ಮತ್ತೆ ಆವೀರ್ಭವಿಸುತ್ತಿದೆ ಎಂದು ಹೇಳಿದರು.


ಶಂಕರಾಚಾರ್ಯರು ಮೂಲಮಠ ಸ್ಥಾಪಿಸಿದ ಪುಣ್ಯಭೂಮಿಯಲ್ಲಿ ಮತ್ತೆ ಅಲ್ಲಿಯೇ ಮಠ, ಅಗ್ರಹಾರ, ವಿಶ್ವವಿದ್ಯಾಪೀಠವೊಂದು ಮರಳಿ ಮೂಡಿ ಬರುತ್ತಿರುವುದು ತ್ಯಾಗ- ಬಲಿದಾನ ಮಾಡಿದ ಜೀವಗಳಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ. ಮಠದ ಹಿತ್ಲು ಪ್ರದೇಶದಲ್ಲಿ ಮೂಲಮಠದ ಅವಶೇಷಗಳು ಮಾತ್ರ ಇಂದು ಉಳಿದುಕೊಂಡಿವೆ. ಅಂಥ ನಾಶಕಾಂಡದಿಂದ ಮತ್ತೆ ಸೃಷ್ಟಿಕಾಂಡ ಚಿಗುರೊಡೆಯುತ್ತಿದೆ ಎಂದು ವಿಶ್ಲೇಷಿಸಿದರು.


ಸೇವಾಸೌಧ ಶ್ರೀಗಳ ಸೌಧವಷ್ಟೇ ಅಲ್ಲದೇ, ವಿವಿವಿ ಕುಲಪತಿಗಳ ನಿವಾಸವೂ ಆಗಿರುತ್ತದೆ. ಸತ್ ಶಿಕ್ಷಣ ನೀಡುವುದು ಮಠಗಳ ಕರ್ತವ್ಯ. ಮಠಗಳನ್ನು ವಿದ್ಯಾಕೇಂದ್ರಗಳೆಂದು ಕೋಶಗಳಲ್ಲಿ ವಿವರಿಸಲಾಗಿದೆ. ಅಂಥ ನಿಜ ಅರ್ಥದ ಮಠ ಇಲ್ಲಿ ಸ್ಥಾಪನೆಯಾಗುತ್ತಿದೆ. ಇಲ್ಲಿ ಉದಿಸುತ್ತಿರುವ ವಿವಿವಿ ಅಂದಿನ ಪೋರ್ಚ್‍ಗೀಸರು ಹಾಗೂ ಇಂದಿನ ಪೋರ್ಚ್‍ಗೀಸರಿಗೆ ನಾವು ನೀಡುತ್ತಿರುವ ಉತ್ತರ ಎಂದು ಬಣ್ಣಿಸಿದರು.


ಮಠದ ಶಿಷ್ಯರ ಉದ್ಧಾರಕ್ಕಾಗಿ, ಸಮಾಜಕ್ಕಾಗಿ, ಸಂಸ್ಕೃತಿಗಾಗಿ, ವಿಸ್ತøತವಾಗಿ ದೇಶಕ್ಕೆ ಕೊಡುಗೆ ನೀಡುವುದು ವಿವಿವಿ ಪರಿಕಲ್ಪನೆ, ಇದು ಕೇವಲ ಒಂದು ಸಮಾಜಕ್ಕೆ ಅಥವಾ ರಾಜ್ಯಕ್ಕೆ ಸೀಮಿತವಾದ ಕಾರ್ಯವಲ್ಲ; ಇದು ಬೃಹತ್ ರಾಷ್ಟ್ರಕಾರ್ಯ. ರಾಷ್ಟ್ರ ಕಟ್ಟುವಂಥವರು, ದೇಶ ಆಳುವಂಥವರು ಮತ್ತು ಬೆಳೆಗುವವರು ಇಲ್ಲಿ ರೂಪುಗೊಳ್ಳುತ್ತಾರೆ. ಹಲವು ಪೀಳಿಗೆಗಳು ಸೇರಿ ಅಭಿವೃದ್ಧಿಪಡಿಸಬೇಕಾದ ಮಹತ್ಕಾರ್ಯ ಇದು. ವಿವಿ ಮೂಲಕ ಮತ್ತೊಂದು ಕಾಶಿ, ತಕ್ಷಶಿಲೆ ಪುನರವತರಿಸುತ್ತಿದೆ ಎಂದು ತಿಳಿಸಿದರು.


ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯಾದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, "ಕೋಟಿ ವರ್ಷಕ್ಕೊಮ್ಮೆ ಮಹಾತ್ಮರು ಜನ್ಮ ತಳೆಯುತ್ತಾರೆ ಎಂಬ ಮಾತಿದೆ. ಶಂಕರಾಚಾರ್ಯರು ಅಂಥ ಮಹಾತ್ಮರು. ಅತ್ಯಂತ ಕಿರಿ ವಯಸ್ಸಿನಲ್ಲೇ ವಿಶಿಷ್ಟ ಕೊಡುಗೆ ನೀಡಿದ ಸಾಧಕ ಪರಂಪರೆಯಲ್ಲಿ ಅಗ್ರಗಣ್ಯರು. ಹತ್ತು ವಿವಿಗಳು, ನೂರಾರು ಸಂಸ್ಥೆಗಳು ಮಾಡುವ ಕಾರ್ಯವನ್ನು ಶಂಕರರೊಬ್ಬರೇ ಮಾಡಿದರು. ದೇಶದ ಸಂಸ್ಕøತಿಗೆ, ವ್ಯಕ್ತಿಯ ವೈಯಕ್ತಿಕ ಉನ್ನತಿಗೆ ಅವರು ನೀಡಿದ ಕೊಡುಗೆ ಅಪಾರ. ರಾಜಗುರುವಾಗಿ ಆಡಳಿತಕ್ಕೆ ವ್ಯಾವಹಾರಿಕ ಚೌಕಟ್ಟನ್ನು ಹಾಕಿಕೊಟ್ಟವರು. ಆಧ್ಯಾತ್ಮದ ವಿವಿಧ ಮಜಲುಗಳನ್ನು ಸಮಾಜದ ಮುಂದೆ ತೆರೆದಿಟ್ಟರು. ಯತಿಪರಂಪರೆಯನ್ನು ಸ್ವತಃ ಆಚರಿಸಿ ತೋರಿಸಿಕೊಟ್ಟರು. ಹಿಂದಿರುಗಿ ಬಾರದ ಪ್ರಯಾಣದಲ್ಲಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ದೇಶಕ್ಕೆ ಬೆಳಕು ತೋರಿಸಿದರು. ಅಂಥ ಶಂಕರರ ಅವಿಚ್ಛಿನ್ನ ಪರಂಪರೆಯ ಪೀಠಾಧಿಪತಿಗಳಾಗಿ ರಾಘವೇಶ್ವರ ಶ್ರೀಗಳು ದೇಶವೇ ಬೆರಗುಗೊಳ್ಳುವ ಸಾಧನೆಯ ಪಥದಲ್ಲಿ ಮುನ್ನಡೆದಿದ್ದಾರೆ" ಎಂದು ಹೇಳಿದರು.


ಗೊಂದಲದ ಸನ್ನಿವೇಶದಲ್ಲಿ ದೇಶಕ್ಕೆ ಬೆಳಕಾದ ಶಂಕರರು ಮೂರು ಬಾರಿ ಪಾದಸ್ಪರ್ಶ ಮಾಡಿದ ಪುಣ್ಯ ಪ್ರದೇಶದಲ್ಲಿ ಹಿಂದೂ ಸಂಸ್ಕೃತಿ, ಸನಾತನ ಪರಂಪರೆ ಮತ್ತೆ ಪುನರುತ್ಥಾನವಾಗುತ್ತಿದೆ. ಮಂದಿರ, ಸ್ವಾಮೀಜಿಯವರ ವಸತಿ, ಮುಂದಿನ ಪೀಳಿಗೆಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯ ನಡೆಯಲಿ ಎಂದು ಆಶಿಸಿದರು. ಮುಂದಿನ ಪೀಳಿಗೆ ದೇಶದ ನೈಜ ಆಸ್ತಿ. ಕೆಲ ಶತಮಾನಗಳ ಕಾಲ ದೇಶದ ಜ್ಞಾನಪರಂಪರೆಗೆ ಅಡ್ಡಿ ಆತಂಕಗಳು ಬಂದೊಡ್ಡಿದವು. ಆದರೆ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಮತ್ತೊಂದು ಸಾಮಾಜಿಕ ಕ್ರಾಂತಿ, ಜ್ಞಾನಕ್ರಾಂತಿ ಕುಡಿಯೊಡೆದಿದೆ ಎಂದು ಅಭಿಪ್ರಾಯಪಟ್ಟರು.


"ನಾವು ಸಮಾಜಕ್ಕೆ, ಜಗತ್ತಿಗೆ ನೀಡಬೇಕಾದ್ದು ಬಹಳಷ್ಟಿದೆ ಎಂಬ ಜ್ಞಾನೋದಯ ಪ್ರತಿಯೊಬ್ಬರಲ್ಲೂ ಆಗುತ್ತಿದೆ. ರಾಜ್ಯದಲ್ಲಿ ಸಮಾಜಕ್ಕೆ ಜ್ಞಾನ ಹಂಚುವ ಕಾರ್ಯವನ್ನು ಮಠ ಮಂದಿರಗಳು ಮಾಡುತ್ತಿದ್ದು, 80 ಸಾವಿರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮಠಗಳು ನಡೆಸುತ್ತಿವೆ. ಜಗತ್ತಿನ ಒಳಿತಿಗಾಗಿ ನಾವು ಸುಶಿಕ್ಷಿತರಾಗಬೇಕು ಎಂಬ ಭಾವನೆಯಲ್ಲಿ ಯುವ ಸಮುದಾಯದಲ್ಲಿ ಬೆಳೆಸುವ ಮೂಲಕ ಅವರನ್ನು ದೇಶದ ಆಸ್ತಿಯಾಗಿ ರೂಪಿಸಬೇಕು" ಎಂದು ಸೂಚಿಸಿದರು.


"ವಿವಿವಿಯಲ್ಲಿ ರೂಪುಗೊಳ್ಳುವ ಮಕ್ಕಳು ಹೊರಗಿನ ಕಲ್ಮಶವನ್ನು ಅಂಟಿಸಿಕೊಳ್ಳದೇ ಪರಿಶುದ್ಧವಾಗಿರುತ್ತಾರೆ. ಇವರು ಸಮಾಜದ ಆಸ್ತಿಗಳಾದಾಗ ಇಂಥ ಸಂಸ್ಥೆ ಬೆಳಗುತ್ತವೆ. ಆಸ್ತಿ, ಸಂಪತ್ತಿಗಿಂತ ಹೆಚ್ಚಾಗಿ ನಾವು ವಾರಸಿಕೆಯನ್ನು ಬಿಟ್ಟುಹೋಗಬೇಕು. ಹತ್ತಾರು, ನೂರಾರು ಪೀಳಿಗೆಗಳು ನೆನಪು ಮಾಡಿಕೊಳ್ಳುವಂಥ ವಾರಸಿಕೆಯನ್ನು ಬಿಟ್ಟುಹೋಗಬೇಕು.


ಇಡೀ ವಿಶ್ವದ ದೃಷ್ಟಿ ಇಂದು ಭಾರತದ ಮೇಲೆ ನೆಟ್ಟಿದೆ. 12 ಸಾವಿರ ಮಂದಿ ಭಾರತದಲ್ಲಿ ಯೋಗ ಕಲಿತು ವಿಶ್ವಾದ್ಯಂತ ಶಿಕ್ಷಣ ನೀಡುತ್ತಿದ್ದಾರೆ. 40 ಸಾವಿರ ಮಂದಿ ಎಣ್ಣೆ ಮಸಾಜ್ ಚಿಕಿತ್ಸೆ ನೀಡುತ್ತಿದ್ದಾರೆ. ಲಕ್ಷಕ್ಕಿಂತ ಹೆಚ್ಚು ಮಂದಿ ಸಂಸ್ಕೃತ ವಿದ್ವಾಂಸರು ವಿಶ್ವಾದ್ಯಂತ ಸಂಸ್ಕೃತದ ಕಂಪು ಪಸರಿಸುತ್ತಿದ್ದಾರೆ. ವಿಶ್ವದ 27 ವಿವಿಗಳಲ್ಲಿ ಸಂಸ್ಕೃತ ಪೀಠಗಳಿವೆ. ಭಾರತದಲ್ಲಿ ಇಂಥ ವಿಶಿಷ್ಟ ಪ್ರಯೋಗಗಳು ನಡೆಯುತ್ತಿರುವುದರಿಂದ ಜಗತ್ತಿನಲ್ಲಿ ಭಾರತಕ್ಕೆ ಗೌರವ ದೊರಕುತ್ತಿದೆ. ಇದೆಲ್ಲ ಸಾಧ್ಯವಾಗಿರುವುದು ಈ ಬಗೆಯ ಚೈತನ್ಯ ಕೇಂದ್ರಗಳ ಮೂಲಕ ಎಂದು ವಿಶ್ಲೇಷಿಸಿದರು.


ಇಡೀ ದೇಶಕ್ಕೇ ಚೈತನ್ಯ ಮೂಡಿಸುವ ಕೇಂದ್ರವಾಗಿ ವಿವಿವಿ ಮುಂದಿನ ದಿನಗಳಲ್ಲಿ ಬೆಳಗಲಿದೆ. ಇಲ್ಲಿನ ಮಕ್ಕಳು ಕುಟುಂಬ, ಸಮಾಜ, ಭಾರತ, ವಿಶ್ವದಲ್ಲಿ ತಾವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಕರ್ತವ್ಯಪರತೆಯಿಂದ ಕಾರ್ಯ ನಿರ್ವಹಿಸುವ ಪೀಳಿಗೆಯಾಗಿ ರೂಪುಗೊಳ್ಳಲಿ. ಕರ್ತವ್ಯವೇ ಜೀವನ ಎಂಬ ತತ್ವ ಬೋಧಿಸುವ ಇಂಥ ಕಾರ್ಯಕ್ಕೆ ಸಮಾಜ ಕೈಜೋಡಿಸಬೇಕು ಎಂದು ಮನವಿ ಮಾಡಿದರು.


ಶಿಷ್ಯರ ಕೊಡುಗೆಯಿಂದಲೇ ನಿರ್ಮಾಣವಾದ ಸೇವಾಸೌಧ ನಮ್ಮೆಲ್ಲರ ಸೇವೆಯ ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವ ಕರ್ತವ್ಯ ಸೌಧವಾಗಿ, ರಾಷ್ಟ್ರಸಂಸ್ಕಾರದ ಪ್ರೇರಣಾಕೇಂದ್ರವಾಗಿ ಬೆಳಗಲಿ ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು.


ಭಾರತ ಇಂದು ಇಡೀ ವಿಶ್ವಕ್ಕೆ ನೇತೃತ್ವ ನೀಡಬಲ್ಲ ಸಮರ್ಥ ರಾಷ್ಟ್ರವಾಗಿ ತಲೆ ಎತ್ತಿದ್ದು, ವಿಶ್ವಕ್ಕೇ ಮಾರ್ಗದರ್ಶನ ನೀಡುವ ಆ ಅರ್ಹತೆಯನ್ನು ನಾವು ಪಡೆಯಬೇಕು. ಇದಕ್ಕೆ ಪರಿಶ್ರಮ ಬೇಕು. ಹಣ ಗಳಿಕೆಯೇ ಜೀವನ ಎಂಬ ಭ್ರಮೆಯಿಂದ ಹೊರಬಂದು ನಮ್ಮನ್ನು ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ವಿವಿವಿ ಇಂಥ ರಾಷ್ಟ್ರವೀರರನ್ನು ರೂಪಿಸುವ ಚೈತನ್ಯಕೇಂದ್ರ ಎಂದು ಬಣ್ಣಿಸಿದರು.


ತಕ್ಷಶಿಲೆ, ನಳಂದದ ಮಾದರಿಯಲ್ಲಿ ಗೋಕರ್ಣ ವಿವಿವಿ ಸಜ್ಜಾಗುತ್ತಿವೆ. ಇಲ್ಲಿ ಮಕ್ಕಳು ಭವಿಷ್ಯದ ಸವಾಲು ಎದುರಿಸಲು ಸಜ್ಜಾಗಬೇಕು. ಪರಿವರ್ತನೆಯ ಹರಿಕಾರರು ಇಲ್ಲಿ ಸಜ್ಜಾಗಬೇಕು. ನಂಬಿಕೆಯನ್ನೇ ಘಾಸಿಗೊಳಿಸುವಂಥ ಕೃತ್ಯಗಳು ನಡೆಯುತ್ತಿರುವ ನಡುವೆಯೇ ನಮ್ಮತನವನ್ನು ಕಾಪಾಡಿಕೊಂಡು ಮುನ್ನಡೆಯುವ ಮೂಲಕ ಅವರ ಬಾಯಿ ಮುಚ್ಚಿಸುವ ಕಾರ್ಯ ಆಗಬೇಕು ಎಂದು ಸೂಚಿಸಿದರು.


ತಿರುವನಂತಪುರ ಅನಂತ ಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಪಟ್ಟೇರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ದಿನಕರ್ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಗೋವಾ ಶಾಸಕ ಕೃಷ್ಣಾ ಡಿ.ಸಾಲ್ಕರ್, ಪಶ್ಚಿಮಘಟ್ಟ ಕಾರ್ಯಪಡೆಯ ಗೋವಿಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.


ಮೋಹನ್ ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಸಭಾಪೂಜೆ ನೆರವೇರಿಸಿದರು. ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ವಿವಿವಿ ಕೇಂದ್ರ ಸಮಿತಿ ಅಧ್ಯಕ್ಷ ಡಿ.ಡಿ.ಶರ್ಮಾ, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ವೇಣುವಿಘ್ನೇಶ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಲೋಕಸಂಪರ್ಕಾಧಿಕಾರಿ ಹರಿಕೃಷ್ಣ ಪೆರಿಯಾಪು, ವಿಶ್ರಾಂತ ಸಿಇಓ ಕೆ.ಜಿ.ಭಟ್, ಪ್ರಮೋದ್ ಹೆಗಡೆ, ಡಾ. ವೈ.ವಿ. ಕೃಷ್ಣಮೂರ್ತಿ, ಗ್ರಾಮಪಂಚಾಯ್ತಿ ಅಧ್ಯಕ್ಷ ಮಂಜುನಾಥ ಜನ್ನು, ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ್ ಮತ್ತಿತರರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top