ಮಂಗಳೂರು: ಕೋಟೆಕಾರು ಆನಂದಾಶ್ರಮ ಶಾಲೆಯಲ್ಲಿ 32 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಮಾಜದ ಗೌರವಕ್ಕೆ ಪಾತ್ರರಾದ ಪುತ್ತೂರು ತಾಲೂಕಿನ ಮೊದೆಲ್ಕಾಡಿ ತಾರಾನಾಥ ರೈ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಕ್ರೀಡಾಳುಗಳನ್ನು ರೂಪಿಸಿದ ಆದರ್ಶ ಅಧ್ಯಾಪಕ. 1997 ರಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಕ್ರೀಡೋತ್ಸವ ಸಂಚಾಲಕರಾಗಿ, ಪುನಾರಚಿತ ಅಬ್ಬಕ್ಕ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಅವರ ಸೇವೆ ಸ್ಮರಣೀಯ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ನಿಧನರಾದ ನಿವೃತ್ತ ಕ್ರೀಡಾ ಶಿಕ್ಷಕ ಮತ್ತು ಶ್ರೇಷ್ಠ ಸಂಘಟಕ ಕೆ. ತಾರಾನಾಥ ರೈ ಅವರಿಗೆ ದೇರಳಕಟ್ಟೆ ಕಂಫರ್ಟ್ ಇನ್ ಸಭಾಂಗಣದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ನುಡಿ ನಮನ ಸಲ್ಲಿಸಿದರು.
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದ.ಕ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಲ. ಚಂದ್ರಹಾಸ ಶೆಟ್ಟಿ, ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕೋಶಾಧಿಕಾರಿ ಪಿ.ಡಿ. ಶೆಟ್ಟಿ ಅವರು ತಾರಾನಾಥ ರೈ ಅವರ ಕುರಿತು ಮಾತನಾಡಿದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ದೈಹಿಕ ಶಿಕ್ಷಕ ಸಂಘದ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.
ಪ್ರತಿಷ್ಠಾನದ ಪ್ರಮುಖರಾದ ವಾಮನ್ ಬಿ. ಮೈಂದನ್, ತುಕಾರಾಮ ಉಳ್ಳಾಲ್, ಪುರುಷೋತ್ತಮ ಅಂಚನ್, ಮೋಹನ್ ದಾಸ್ ರೈ, ಸುವಾಸಿನಿ ಬಬ್ಬುಕಟ್ಟೆ, ವಿಜಯಲಕ್ಷ್ಮಿ ಬಿ.ಶೆಟ್ಟಿ, ಸುಮಾ ಪ್ರಸಾದ್, ವಿಜಯಲಕ್ಷ್ಮಿ ಕಟೀಲು, ಪ್ರತಿಮಾ ಹೆಬ್ಬಾರ್, ಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು. ಸಭೆಯಲ್ಲಿ ದಿ. ತಾರಾನಾಥ ರೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ