ಕನಸಿನ ಹಾದಿಗೆ ಸೇತುವೆಯಾದವರು

Upayuktha
0


ನಸು ಕಾಣುವುದು ಸುಲಭ. ಆ ಕನಸನ್ನು ನನಸಾಗಿಸಿಕೊಳ್ಳಲು ಸಾಗುವ ಹಾದಿಯು ಅಷ್ಟೊಂದು ಸುಲಭವಾದುದಲ್ಲ. ಕನಸಿನ ಲೋಕದಲ್ಲಿ ತೇಲಾಡುವ ಸುಖವಿದ್ದರೆ, ನನಸಾಗಿಸುವ ಪಯಣದಲ್ಲಿ ಹೆಜ್ಜೆಹೆಜ್ಜೆಯೂ ಕಷ್ಟ. ಕುಸಿದಂತಾದಾಗ ಹಿಡಿದೆತ್ತಿ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೈಗಳಿದ್ದರೆ ಕಷ್ಟಗಳೆಲ್ಲವೂ ಹಗುರ, ಸುಲಭ. ಮತ್ತೊಂದು ಹೊಸ ಕನಸಿನ ಹಂಬಲ. ಮತ್ತೊಮ್ಮೆ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅದೇನೋ ವಿಶೇಷ ಹುರುಪು.

ಬದುಕಿಗೆ ಸಂಬಂಧಗಳೇ ಆಸರೆ. ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲ ಒಂದು ರೀತಿಯ ಸಂಬಂಧಗಳು ಬೇಕು. ಕೆಲವು ಸುಂದರ ಸಂಬಂಧಗಳು ನಮ್ಮ ಬಾಳಿನುದ್ದಕ್ಕೂ ಸಾಗಿ ಬರುತ್ತವೆ. ನಮ್ಮ ಬದುಕಿನಲ್ಲಿ ಬರುವಂತಹ ಕೆಲವೊಂದು ಅನಿರೀಕ್ಷಿತ  ಸಂಬಂಧಗಳಿಂದ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ, ಬೆಳೆಯುತ್ತೇವೆ. ನಾನು ಕೂಡ ಅಷ್ಟೇ, ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದೆ. ಆದರೆ, ಆ ಹಾದಿಯಲ್ಲಿ ನಾ ಸಾಗಬಲ್ಲೆನೆಂಬ ನಂಬಿಕೆ ನನ್ನಲ್ಲಿ ಸ್ಥಿರವಾಗಿರಲಿಲ್ಲ. ಕಾರಣ, ಪ್ರೋತ್ಸಾಹದ ಕೊರತೆ. ಆದರೆ  ಆ ಒಬ್ಬ ವ್ಯಕ್ತಿಯಿಂದಾಗಿ ನನ್ನ ಕನಸಿಗೆ ರೆಕ್ಕೆ ಮೂಡಿತು. ಇನ್ನಷ್ಟು ಹೊಸತನ್ನು  ಹುಡುಕಿ ಹುಡುಕಿ ಕಲಿಯಬೇಕೆಂಬ ಆಸಕ್ತಿ ಬಲವಾಯಿತು. ನನ್ನ ಪ್ರತಿ ಹೆಜ್ಜೆಯಲ್ಲೂ ಕೂಡ ಹುರಿದುಂಬಿಸಿ ಬೆನ್ನುತಟ್ಟಿದ್ದರವರು. ಕನಸು ಎಂಬ ಹೂವಿಗೆ ನೀರೆರೆದು ಪೋಷಿಸಿದರು. ಇರುವ ಚಿಕ್ಕ-ಚಿಕ್ಕ ಖುಷಿಗಳನ್ನೇ ಆನಂದಿಸುತ್ತಾ, ಎಲ್ಲರೊಂದಿಗೂ ನಗು-ನಗುತಾ ಬೆರೆಯಲು ಯತ್ನಿಸುತ್ತಿದ್ದ ನನಗೆ ಕೆಲವೊಂದು ಸಂದರ್ಭಗಳಲ್ಲಿ ನನ್ನ ಈ ಸ್ವಭಾವವೇ ದುಃಖ ನೀಡುತ್ತಿತ್ತು ಅಂದರೂ ಸುಳ್ಳಲ್ಲ. ಇಂತಹ ಸಂದರ್ಭದಲ್ಲೆಲ್ಲಾ ನನ್ನ ನೋವಿಗೆ ಹೆಗಲಾಗಿ ನಿಂತು ಮುಖದಲ್ಲಿ ನಗು ತರಿಸಲು ಪ್ರಯತ್ನಿಸುತ್ತಿದ್ದರು. ಕೆಲವೊಂದು ಘಟನೆಗಳಿಂದ ಹೂವಂತಿರುವ ನಮ್ಮ ಮನಸ್ಸು ಬಾಡಿ ಹೋಗದಂತೆ ಆಸರೆಯಾಗಿ ನಿಲ್ಲುವವರು ಮನಸ್ಸಿಗೆ ಹೆಚ್ಚು ಆಪ್ತವಾದ ಇಂತಹ ಸಂಬಂಧವೇ.

ಸುಖದಲ್ಲಿ ಭಾಗಿಯಾಗಿ ನಮ್ಮೊಂದಿಗೆ ಆಡಿ ನಲಿಯುವವರಿಗಿಂತ, ನಮ್ಮ ನೋವಿಗೆ ಜೊತೆಯಾಗಿ, ನೋವ ಮರೆಸಿ ನಗುವ ತರಿಸುವವರು ಸಿಕ್ಕರೆ ಜೀವನದಲ್ಲಿ ಅದಕ್ಕಿಂತ ಹೆಚ್ಚಿನದ್ದೇನೂ ಬೇಕಾಗಿಲ್ಲ. ಸೋತು ಗೆಲ್ಲುವುದು ಹೇಗೆ ಎಂಬುವುದನ್ನು ನಾನು ಅವರಿಂದ ಕಲಿತೆ. ನನ್ನಲ್ಲಿದ್ದ ಸಣ್ಣ-ಸಣ್ಣ ಆಸಕ್ತಿ, ಹವ್ಯಾಸಗಳಲ್ಲಿ ನನ್ನನ್ನು ನಾನು ಹೆಚ್ಚು ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. ಹೀಗೆ ನನ್ನ ಜೀವನದಲ್ಲಿ ಭರವಸೆಯ ಹೊಸ ಬೆಳಕಾಗಿ ನಿಂತರವರು.

ಪ್ರತಿಯೊಬ್ಬರ ಜೀವನದಲ್ಲಿ ಕೂಡ ಇಂತಹ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ ಮತ್ತು ನಮ್ಮ ಜೀವನದಲ್ಲಿನ ಕೆಲವೊಂದು ಬದಲಾವಣೆಗಳಿಗೆ ಕಾರಣರಾಗುತ್ತಾರೆ. ಇಂತಹ ಪ್ರತೀ ಸಂಬಂಧವನ್ನು ನವಿರಾಗಿ, ಗೌರವಯುತವಾಗಿ ನಿಭಾಯಿಸುತ್ತಾ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು. ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು. ನಮ್ಮ ಕಾಲೆಳೆಯುವವರು ಅನೇಕ ಮಂದಿ. ನಮ್ಮ ತಪ್ಪುಗಳನ್ನು ತಿದ್ದಿ  ಪ್ರೋತ್ಸಾಹಿಸುವವರು ಸಿಗುವುದು ಅತೀ ವಿರಳ. ನಮ್ಮ ಅಂತಸ್ತುಗಳಿಗಿಂತ ನಮ್ಮ ಖುಷಿಯ ಬಯಸುವ ಹಿತೈಷಿಗಳಿದ್ದರೆ ಬದುಕು ಸುಂದರ.

ಪ್ರಸಾದಿನಿ.ಕೆ ತಿಂಗಳಾಡಿ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು 


   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top