ಜೀವಿತಾವಧಿಯಲ್ಲಿ ಒಮ್ಮೆ ಕಾಣಸಿಗುವ ಅತಿಥಿ 'ಹಸಿರು ಧೂಮಕೇತು'

Upayuktha
0


ಖಗೋಳದ ಅಪರೂಪದ ಅತಿಥಿಯೊಂದು ನಮಗೆಲ್ಲ ವಿದಾಯ ಹೇಳಲು ಸಿದ್ಧವಾಗುತ್ತಿದೆ. ಮತ್ತೆ ಪುನಃ ಇದರ ಭೇಟಿ ಬರೋಬ್ಬರಿ 50,000 ವರ್ಷಗಳ ಬಳಿಕ! ಹಸಿರು ಬಣ್ಣದ C/2022 E3 ದೀರ್ಘಾವಧಿಯ ಧೂಮಕೇತುವಾಗಿದ್ದು, ಸೌರವ್ಯೂಹದ ಅಂಚಿನಲ್ಲಿರುವ ಊರ್ಟ್ ಮೇಘದಿಂದ ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಪ್ರಸ್ತುತ ದಿನದಿಂದ ದಿನಕ್ಕೆ ಪ್ರಕಾಶಮಾನವಾಗುತ್ತಾ ಬರಿಗಣ್ಣಿಗೆ ಮಂದವಾಗಿ ಗೋಚರಿಸಲಿದೆ.


ಧೂಮಕೇತುವು ಗ್ರಹದ ಹಾಗೆಯೇ ಸೂರ್ಯನ ಸುತ್ತ ಚಲಿಸುವ ಶಿಲೆಯ ತುಣುಕು. ಇಂತಹ ಕಲ್ಲುಗಳಲ್ಲಿ ಹೆಚ್ಚಿನವು ಸೌರವ್ಯೂಹದ ಅಂಚಿನಲ್ಲಿರುವ ಊರ್ಟ್ ಮೇಘದಿಂದ ಹುಟ್ಟಿಕೊಂಡಿರುವಂತವು. ಈ ಪ್ರದೇಶವು ಸೂರ್ಯನಿಂದ ಬಹಳ ದೂರವಿರುವುದರಿಂದ ಈ ಕಾಯಗಳು ಹಿಮದ ಶಿಲೆಗಳಾಗಿರುತ್ತವೆ. ಆದರೆ, ಗುರುತ್ವದಿಂದಾಗಿ ಈ ಹಿಮದ ಶಿಲೆಗಳ ಕಕ್ಷೆಯು ಬದಲಾಗುವುದರಿಂದ, ಇವು ಸೂರ್ಯನ ಸುತ್ತ ಹೊಸ ಕಕ್ಷೆಗಳಲ್ಲಿ ಸುತ್ತುತ್ತವೆ. ಸಾಮಾನ್ಯವಾಗಿ ಇವುಗಳು ದೀರ್ಘ ವೃತ್ತಾಕಾರದ ಕಕ್ಷೆಗಳಾಗಿರುತ್ತವೆ.


ದೀರ್ಘ ವೃತ್ತಾಕಾರದ ಕಕ್ಷೆಯೆಂದರೆ, ಉದ್ದವಾಗಿರುವ ವೃತ್ತ. ಒಂದು ವೃತ್ತವನ್ನು ಒಂದು ದಿಕ್ಕಿನಲ್ಲಿ ಎಳೆದು ಹಿಗ್ಗಿಸಿದರೆ, ಅದರ ಒಂದು ಜೋಡಿ ಅಭಿಮುಖ ಬದಿಗಳು ಹೆಚ್ಚು ಉದ್ದನೆಯ ವ್ಯಾಸವನ್ನು ಮತ್ತು ಇನ್ನೊಂದು ಜೋಡಿ ಅಭಿಮುಖ ಬದಿಗಳು ಚಿಕ್ಕ ವ್ಯಾಸವನ್ನು ಹೊಂದಿರುವ ದೀರ್ಘ ವೃತ್ತಾಕಾರದ ರಚನೆಯಾಗುತ್ತದೆ. ವೃತ್ತಾಕಾರದ ಕಕ್ಷೆಯು ಒಂದು ಕೇಂದ್ರ ಬಿಂದುವನ್ನು ಹೊಂದಿದ್ದರೆ, ದೀರ್ಘ ವೃತ್ತಾಕಾರದ ಕಕ್ಷೆಯ ಕೇಂದ್ರವು ಹೆಚ್ಚು ಉದ್ದನೆಯ ವ್ಯಾಸದ ಮೇಲಿನ ಎರಡು ಬಿಂದುಗಳು. ಇಂತಹ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಈ ಎರಡು ಕೇಂದ್ರ ಬಿಂದುಗಳಲ್ಲೊಂದರಲ್ಲಿ ಸೂರ್ಯನು ಇರುವಂತೆ ಧೂಮಕೇತುವು ಸೂರ್ಯನ ಸುತ್ತ ಸುತ್ತುತ್ತದೆ.


ಕಕ್ಷೆಯು ಯಾವ ರೀತಿಯಲ್ಲಿ ರೂಪುಗೊಂಡಿದೆ ಎಂಬುದರ ಮೇಲೆ ಅವಲಂಬಿತವಾಗಿ ಧೂಮಕೇತುವನ್ನು ಆವರ್ತನೀಯ ಅಥವಾ ಆವರ್ತಕವಲ್ಲದ ಧೂಮಕೇತು ಎಂದು ವರ್ಗೀಕರಿಸಬಹುದು. ಆವರ್ತಕ ಧೂಮಕೇತುಗಳು ನಿರ್ದಿಷ್ಟ ಕಕ್ಷಾವಧಿಯೊಂದಿಗೆ ಸೂರ್ಯನ ಸುತ್ತ ಪುನರಾವರ್ತಿತವಾಗಿ ಸುತ್ತುತ್ತವೆ. ಪ್ರಸಿದ್ಧ ಹ್ಯಾಲಿ ಧೂಮಕೇತು ಆವರ್ತನೀಯ ಧೂಮಕೇತುವಾಗಿದ್ದು, ಪ್ರತಿ 76 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದು ಕೊನೆಯ ಬಾರಿಗೆ 1986 ರಲ್ಲಿ ಕಾಣಿಸಿಕೊಂಡಿದ್ದು, ಪುನಃ ಇದರ ಭೇಟಿ 2061ನೇ ವರ್ಷದಲ್ಲಿ. ಹಾಗೆಯೇ, ಪ್ರಸ್ತುತ  C/2022 E3 ಕೂಡಾ ಆವರ್ತಕ ಧೂಮಕೇತುವಾಗಿದ್ದು, ಸುದೀರ್ಘವಾದ 50000 ವರ್ಷಗಳ ಕಕ್ಷಾವಧಿಯನ್ನು ಹೊಂದಿರುವ ಧೂಮಕೇತುವಾಗಿದೆ. ಅಂದರೆ, ಹಿಂದಿನ ಬಾರಿ ಈ ಧೂಮಕೇತು ಭೂಮಿಯನ್ನು ಭೇಟಿ ಮಾಡಿದಾಗ ಆದಿ ಮಾನವರಾದ ನಿಯಾಂಡರ್ಥಾಲ್ಸ್ ಭೂಮಿಯ ಮೇಲೆ ವಾಸಿಸುತ್ತಿದ್ದರು ಹಾಗೂ ಸಹಾರಾ ಮರುಭೂಮಿಯು ಹಸಿರಿನಿಂದ ಸಮೃದ್ಧವಾಗಿ ಫಲವತ್ತಾಗಿದ್ದ ಸಮಯ. ಕೆಲವು ಧೂಮಕೇತುಗಳು ಮರಳಿ ಬಾರದಂತಹವು ಹಾಗೂ ಅವುಗಳನ್ನು ಆವರ್ತಕವಲ್ಲದ ಧೂಮಕೇತುಗಳೆಂದು ಕರೆಯಲಾಗುತ್ತದೆ. ಧೂಮಕೇತು ಸೂರ್ಯನನ್ನು ಸಮೀಪಿಸುತ್ತಿದ್ದಂತೆ, ಅದರ ಹಿಮದ ಮೇಲ್ಮೈಯು ಕರಗಲು ಪ್ರಾರಂಭಿಸಿ, 'ಕೊಮಾ' ಎಂಬ ವಾತಾವರಣದ ನಿರ್ಮಾಣವಾಗುತ್ತದೆ ಹಾಗೂ ಅದರೊಂದಿಗೆ ಬಾಲವೂ ಸಹ ರೂಪುಗೊಳ್ಳುತ್ತದೆ. ಈ ರೀತಿಯ ರಚನೆಯಿಂದಾಗಿ ಧೂಮಕೇತು ಮತ್ತು ಕ್ಷುದ್ರಗ್ರಹಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ. ಸೂರ್ಯನ ಶಾಖದಿಂದ ಈ ಬಾಲವು ರಚನೆಯಾಗುವುದರಿಂದಾಗಿ, ಧೂಮಕೇತುವಿನ ಚಲನೆಯು ಯಾವುದೇ ದಿಕ್ಕಿನಲ್ಲಿರಲಿ, ಅದರ ಬಾಲವು ಯಾವಾಗಲೂ ಸೂರ್ಯನ ವಿರುದ್ಧ ದಿಕ್ಕಿನೆಡೆಗೆ ಇರುತ್ತದೆ.


ಪ್ರಸ್ತುತC/2022 E3 ಧೂಮಕೇತು ಒಳ ಸೌರವ್ಯೂಹದಲ್ಲಿದ್ದು, 2023 ಜನವರಿ 12 ರಂದು ಪುರರವಿ ಬಿಂದುವನ್ನು ತಲುಪಿ, ಅಂದರೆ ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಇದೇ ಫೆಬ್ರವರಿ 1 ರಂದು ಭೂಮಿಯಿಂದ 42.63 ದಶಲಕ್ಷ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ. ಅಂದರೆ, ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಸರಿಸುಮಾರು ಮೂರನೇ ಒಂದರಷ್ಟು. ಈ ಧೂಮಕೇತು ಭೂಮಿಯ ಹತ್ತಿರಕ್ಕೆ ಬಂದಂತೆ 5.4 ರಷ್ಟು ಕಾಂತಿಮಾನದಲ್ಲಿ ಪ್ರಕಾಶಿಸಲಿದೆ. ಕಾಂತಿಮಾನವು ಒಂದು ಕಾಯದ ಪ್ರಕಾಶಮಾನತೆಯನ್ನು ತಿಳಿಸುತ್ತದೆ. ಕಾಯದ ಕಾಂತಿಮಾನವು ಕಡಿಮೆಯಿದ್ದಷ್ಟು ಅದರ ಪ್ರಕಾಶಮಾನತೆ ಹೆಚ್ಚು. ಸೂರ್ಯನು -26 ರಷ್ಟು ಕಾಂತಿಮಾನ ಹೊಂದಿದ್ದು ಮತ್ತು ಶುಕ್ರ ಗ್ರಹವು -4 ರಷ್ಟು ಕಾಂತಿಮಾನದಲ್ಲಿ ಹೊಳೆಯುತ್ತದೆ. ಆಕಾಶವು ಎಷ್ಟು ಶುಭ್ರವಾಗಿದೆಯೆಂಬುದರ ಮೇಲೆ ಅವಲಂಬಿತವಾಗಿ ಒಂದು ಕಾಯವು 6 ಅಥವಾ ಅದಕ್ಕಿಂತ ಕಡಿಮೆ ಕಾಂತಿಮಾನವನ್ನು ಹೊಂದಿದ್ದರೆ ಬರಿಗಣ್ಣಿಗೆ ಗೋಚರಿಸುತ್ತದೆ ಎಂದು ಹೇಳಬಹುದು. ಹಾಗಾದರೆ, ಜನವರಿ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಮತ್ತು ಫೆಬ್ರವರಿ ತಿಂಗಳ ಪ್ರಾರಂಭದ ಕೆಲವು ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ C/2022 E3 ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದು.


ಗುರುತಿಸುವುದು ಹೇಗೆ?


ಈ ಧೂಮಕೇತು 7 ನಕ್ಷತ್ರಗಳಿಂದಾದ ಲಘು ಸಪ್ತರ್ಷಿಮಂಡಲ ನಕ್ಷತ್ರಪುಂಜದಲ್ಲಿದೆ. ಇದನ್ನು ಗುರುತಿಸಲು ಮೊದಲಿಗೆ ಸಪ್ತರ್ಷಿಮಂಡಲ ಹಾಗೂ ಲಘು ಸಪ್ತರ್ಷಿಮಂಡಲ ನಕ್ಷತ್ರಪುಂಜಗಳ ಸಹಾಯದಿಂದ ಧ್ರುವ ನಕ್ಷತ್ರವನ್ನು ಗುರುತಿಸಿ. ಸಪ್ತರ್ಷಿಮಂಡಲ ನಕ್ಷತ್ರಪುಂಜವು 7 ನಕ್ಷತ್ರಗಳಿಂದಾದ ಗಾಳಿಪಟದ ಆಕಾರವನ್ನು ಹೊಂದಿದ್ದು, ಮುಂಜಾನೆ 3 ಗಂಟೆಯ ನಂತರ ಗೋಚರಿಸುತ್ತದೆ. ಆದ್ದರಿಂದ, ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಆಕಾಶದಲ್ಲಿ ಎತ್ತರದ ಸ್ಥಾನದಲ್ಲಿ ಗೋಚರಿಸುವ ಈ ನಕ್ಷತ್ರಪುಂಜದ ಎಡ ಭಾಗದಲ್ಲಿರುವ ಮೊದಲೆರಡು ನಕ್ಷತ್ರಗಳಾದ ಪುಲಹ (Merak) ಮತ್ತು ಕ್ರತು (Dhube)- ಇವುಗಳಿಂದ ಗೆರೆಯನ್ನು ಎಳೆದು ವೃದ್ಧಿಸಿದರೆ, ಈ ಗೆರೆಯು ದಿಗಂತದ ಸಮೀಪ ಪ್ರಕಾಶಮಾನವಾಗಿ ಹೊಳೆಯುತ್ತಿರುವ ನಕ್ಷತ್ರವನ್ನು ಸಂಧಿಸುತ್ತದೆ. ಇದುವೇ, ಲಘು ಸಪ್ತರ್ಷಿಮಂಡಲ ನಕ್ಷತ್ರಪುಂಜದ ಅತಿ ಹೆಚ್ಚು ಪ್ರಕಾಶಮಾನವಾದ ಧ್ರುವ ನಕ್ಷತ್ರ ಅಥವಾ ಪೊಲಾರಿಸ್. ಧೂಮಕೇತುವು ಫೆಬ್ರವರಿ 1 ರಂದು ಮುಂಜಾನೆಯ ಆಕಾಶದಲ್ಲಿ ಪ್ರಕಾಶಮಾನವಾಗಿ ಗೋಚರಿಸಲಿದ್ದು, ಪುನಃ 50,000 ವರ್ಷಗಳ ಬಳಿಕ ಕಾಣಿಸಿಕೊಳ್ಳುವ ಈ ಅಪರೂಪದ ಅತಿಥಿಯನ್ನು ವೀಕ್ಷಿಸುವ ಮೂಲಕ ವಿದಾಯ ಹೇಳಲು ಇದೊಂದು ಸುವರ್ಣಾವಕಾಶ ಎಂದೇ ಹೇಳಬಹುದು.


ಅತುಲ್ ಭಟ್

ಸಹಾಯಕ ಪ್ರಾಧ್ಯಾಪಕ, ಪೂರ್ಣಪ್ರಜ್ಞಾ ಕಾಲೇಜು, ಉಡುಪಿ

(ಸಂಯೋಜಕ, ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳಶಾಸ್ತ್ರಜ್ಞರ ಕ್ಲಬ್)



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter









إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top