ಫಾರ್ಮ್ ಟಿವಿಯಿಂದ ಅಡಿಕೆ ಎಲೆಚುಕ್ಕೆ ರೋಗ ಅಧ್ಯಯನ

Upayuktha
0

 ವಿಜ್ಞಾನಿಗಳ ತಂಡದೊಂದಿಗೆ ರೋಗಗ್ರಸ್ತ ತೋಟಗಳ ವೈಜ್ಞಾನಿಕ ವಸ್ತುಸ್ಥಿತಿ ಅಧ್ಯಯನ ಪ್ರವಾಸ


ಬೆಂಗಳೂರು : ಇಂದು ಅಡಿಕೆ ಇಡೀ ಕರ್ನಾಟಕದ ಬೆಳೆಯಾಗಿದೆ. ಅದರಲ್ಲೂ ಮಲೆನಾಡಿನಲ್ಲಿ ಉಪಬೆಳೆಗಳೆಲ್ಲ ಮಾಯವಾಗಿ ಜನಜೀವನ, ವ್ಯಾಪಾರ-ವ್ಯವಹಾರ ಕೇವಲ ಅಡಿಕೆಯ ಮೇಲೆ ನಿಂತಿದೆ. ಈ ನಡುವೆ ಎಲೆಚುಕ್ಕೆ ರೋಗ ಕಂಡು ಕೇಳರಿಯದ ರೀತಿಯಲ್ಲಿ ಹರಡಿ ಬೆಳೆಗಾರರಲ್ಲಿ ಭೀತಿ ಹುಟ್ಟಿಸುತ್ತಿದೆ. ಸದ್ಯ 1 ಲಕ್ಷ ಎಕರೆಗೆ ರೋಗ ವ್ಯಾಪಿಸಿದೆಯೆಂಬುದು ತೋಟಗಾರಿಕಾ ಇಲಾಖೆಯ ಅಂದಾಜು. ಇನ್ನುಳಿದ ಅಂದಾಜು ೯ ಲಕ್ಷ ಎಕರೆ ತೋಟಗಳ ರೈತರು ರೋಗಪೀಡಿತ ಪ್ರದೇಶಗಳಿಂದ ಬರುತ್ತಿರುವ ವರದಿಗಳಿಂದ ಭಯಭೀತರಾಗಿದ್ದಾರೆ.


ಈ ನಡುವೆ ಸರ್ಕಾರ ಕೂಡ ರೋಗ ಹತೋಟಿಗೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ- ಸಿ.ಪಿ.ಸಿ.ಆರ್.ಐ. ರೋಗ ನಿಯಂತ್ರಣ ಮತ್ತು ಹರಡುವಿಕೆ ತಡೆಯಲು ಸಂಶೋಧನೆ ಕೈಗೊಂಡಿವೆ. ಆದರೆ ಸಂವಹನದ ಕೊರತೆಯಿಂದ ರೋಗ ನಿಯಂತ್ರಣದ ಸ್ಪಷ್ಟ ಮಾಹಿತಿ ಬೆಳೆಗಾರರಿಗೆ ತಲುಪುತ್ತಿಲ್ಲ. ಮತ್ತೆ ಈ ರೋಗ ನಿಯಂತ್ರಣ ಅಷ್ಟು ಸುಲಭವಿಲ್ಲ.


ಸಮರೋಪಾದಿಯ ಕಾರ್ಯಾಚರಣೆಯ ಅಗತ್ಯವಿದೆ. ಕೇವಲ ಸರ್ಕಾರದ ಹಣಕಾಸು ನೆರವಿನಿಂದ ಅಸಾಧ್ಯವೆಂಬಂತಿದೆ.


ರಾಜ್ಯದ ರೈತರ ಆಪದ್ಬಾಂಧವ ಫಾರ್ಮ್ ಟಿವಿ ಈ ನಿಟ್ಟಿ ನಲ್ಲಿ ಒಂದು ಸ್ಪಷ್ಟ ಚಿತ್ರಣ ಮೂಡಿಸಲು ಮುಂದಾಗಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಸಿ.ಪಿ.ಸಿ.ಆರ್.ಐ., ಸಿ.ಸಿ.ಆರ್.ಐ, ಕೃಷಿ ಪ್ರಯೋಗ ಪರಿವಾರ ಮತ್ತು ಸ್ವತಂತ್ರ ಖ್ಯಾತ ಸಸ್ಯ ರೋಗತಜ್ಞರ ತಂಡ ರಚಿಸಿಕೊಂಡು ಕಳಸ, ಆಗುಂಬೆ, ತೀರ್ಥಹಳ್ಳಿ ಮುಂತಾದ ರೋಗಪೀಡಿತ ಪ್ರದೇಶಗಳಿಗೆ ಮಂಗಳವಾರದಿಂದ (17-01-2023) ಮೂರು ದಿನಗಳ ವೈಜ್ಞಾನಿಕ ವಸ್ತುಸ್ಥಿತಿ ಅಧ್ಯಯನ ಪ್ರವಾಸ ಹಮ್ಮಿಕೊಂಡಿದೆ. 


ಬಹುಶ: ರಾಜ್ಯದ ಕೃಷಿ ಇತಿಹಾಸದಲ್ಲಿ ಒಂದು ಖಾಸಗಿ ಮಾದ್ಯಮ ಸಂಸ್ಥೆಯಿಂದ ಕೈಗೊಂಡ ಮೊದಲ ವೈಜ್ಞಾನಿಕ ಪ್ರಯತ್ನ ಇದಾಗಲಿದೆ. ಈ ಅಧ್ಯನದ ಫಲಶೃತಿ ಆಧರಿಸಿ ಸಂಬಂಧಿತ ಎಲ್ಲ ಸಂಸ್ಥೆ-ಕಂಪನಿಗಳ ಸಹಯೋಗದಲ್ಲಿ ಅಡಿಕೆ ಎಲೆಚುಕ್ಕೆ ರೋಗದ ಪರಿಹಾರಕ್ಕೆ ಮಾರ್ಗೋಪಾಯ ಹುಡುಕುವುದು ಫಾರ್ಮ್ ಟಿವಿಯ ಆಶಯ.


ಇದೊಂದು ಪೂರ್ತಿ ವೈಜ್ಞಾನಿಕ ಅಧ್ಯಯನ ಪ್ರವಾಸವಾಗಿದ್ದು ಯಾವುದೇ ರೈತ ಗುಂಪುಗಳೊಂದಿಗೆ ಸಭೆ-ಚರ್ಚೆ ಇಟ್ಟುಕೊಂಡಿಲ್ಲ. ಆದರೆ ಅಡಿಕೆ ರೈತರು ಈ ರೋಗದ ಹಾಗೂ ರೋಗ ನಿಯಂತ್ರಣದ ಕುರಿತು ಮಾಹಿತಿ-ಸಲಹೆ ಹಂಚಿಕೊಳ್ಳಬಹುದು. ಆಸಕ್ತರು ಫಾರ್ಮ್ ಟಿವಿ - -9008709347, 9980534320  ಸಂಪರ್ಕಿಸಬಹುದು.


ವರದಿ: ಡಾ. ವೆಂಕಟ್ರಮಣ ಹೆಗಡೆ

ಪ್ರಧಾನ ಸಂಪಾದಕರು, ಫಾರ್ಮ್ ಟಿವಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top