ನಾಗರಾಜ ಗೋಪಾಲ ಭಟ್ ಕುಂಕಿಪಾಲ 06.07.1993 ರಂದು ಗೋಪಾಲ ಭಟ್ ಹಾಗೂ ಗಾಯತ್ರಿ ಭಟ್ ಇವರ ಮಗನಾಗಿ ಜನನ. ಐ.ಟಿ.ಐ ಇವರ ವಿದ್ಯಾಭ್ಯಾಸ. ಗಣಪತಿ ಭಾಗ್ವತ್ ಕವ್ವಾಳೆ ಇವರ ಯಕ್ಷಗಾನ ಗುರುಗಳು.
ನಾಗರಾಜ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರಥಮವಾಗಿ ಹತ್ತಿರದ ಸಂಬಂಧಿಯಾದ ವಿದ್ವಾನ್ ಗಣಪತಿ ಭಟ್ ಅವರ ಪದ್ಯವನ್ನು ಕೇಳಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿತು ಹಾಗೂ ನಾಗರಾಜ ಅವರು ವಿದ್ವಾನ್ ಗಣಪತಿ ಭಟ್ ಅವರ ಅಭಿಮಾನಿ ಎಂದು ಹೇಳುತ್ತಾರೆ.
ವೇಷ ಮಾಡಲು ಪ್ರೇರಣೆ ಕಣ್ಣಿಮನೆ ಗಣಪತಿ ಭಟ್, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ. ಭಾಗವತಿಕೆಗಿಂತ ಚೆಂಡೆ ಹಾಗೂ ಮದ್ದಳೆ ನುಡಿಸುವುದರಲ್ಲಿ ಆಸಕ್ತಿ ಜಾಸ್ತಿ. ಉಡುಪಿ ಕೇಂದ್ರದಲ್ಲಿ ಬಗ್ವಾಡಿ ಕೃಷ್ಣಮೂರ್ತಿ ಭಟ್ ಅವರ ಬಳಿ ಚೆಂಡೆ ನುಡಿಸುವುದನ್ನು ಕಲಿತರು ಹಾಗೂ ಚೆಂಡೆಯನ್ನು ನುಡಿಸಬೇಕು ಎಂಬ ಆಸಕ್ತಿ ತುಂಬಾ ಇದೆ ಎಂದು ಕುಂಕಿಪಾಲ ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಹಿರಿಯ ಕಲಾವಿದರ ವೇಷದ ನಡೆ ನೋಡಿಕೊಳ್ಳುವುದು, ಕೇಳಿಕೊಳ್ಳುವುದು ಹಾಗೂ ನನಗೆ ತಿಳಿದ ಹೊಸ ವಿಚಾರ ಸೇರಿಸಿ ಪ್ರಯತ್ನ ಮಾಡಿ, ಅದು ಕೆಲವೊಮ್ಮೆ ತಪ್ಪು ಕೂಡ ಆಗುತ್ತದೆ ಸರಿ ಮಾಡಿಕೊಂಡು ತಯಾರಿ ಮಾಡಿಕೊಳುತ್ತೇನೆ ಎಂದು ಕುಂಕಿಪಾಲ ಹೇಳುತ್ತಾರೆ.
ಕೃಷ್ಣಾರ್ಜುನ, ಶಶಿಪ್ರಭೆ ಹಾಗೂ ಪೌರಾಣಿಕ ಎಲ್ಲಾ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು. ಸುಭದ್ರೆ, ಪ್ರಭಾವತಿ, ಸುದೇಷ್ಣೆ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹಿರಿಯ ಕಲಾವಿದರು ಅನೇಕ ಕಷ್ಟ ನಷ್ಟ ಎದುರಿಸಿ ತಮ್ಮ ಕಲಾ ಜೀವನ ಪೂರ್ಣಗೊಳಿಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಿದ್ದಾರೆ. ಇಂದಿನ ಸ್ಥಿತಿ ಯಕ್ಷಗಾನಕ್ಕೆ ಪ್ರೋತ್ಸಾಹ, ಕಲಾಭಿಮಾನಿ ಸಹಕಾರ ತುಂಬಾ ಇದೆ. ಇದು ತುಂಬಾ ಸಂತಸದ ವಿಚಾರ. ಇದು ಕಲಾವಿದರಗೂ ಯಕ್ಷಗಾನಕ್ಕೂ ಉತ್ತಮ ವಾತಾವರಣ ಎಂದು ಕುಂಕಿಪಾಲ ಹೇಳುತ್ತಾರೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಯಾವತ್ತು ಕಲೆಗೂ ಕಲಾವಿದರಿಗೂ ಅಗತ್ಯ. ಉತ್ತಮ ಪ್ರೇಕ್ಷಕರು ಇಂದು ಆಟವನ್ನು ನೋಡುವುದಕ್ಕೆ ಬಂದು ಕಲಾವಿದರ ತಪ್ಪು ಒಪ್ಪುಗಳನ್ನು ಕಲಾವಿದರಿಗೆ ತಲುಪಿಸುವ ಮೂಲಕ ತಿದ್ದಿಕೊಳ್ಳುವುದಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಕುಂಕಿಪಾಲ ಹೇಳುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:- ಯೋಜನೆ ಮಾಡಿ ಅದನ್ನು ಪೂರ್ಣಗೊಳಿಸುವ ಅರ್ಹತೆ ಕಲಾವಿದನಾಗಿ ನಾನಿನ್ನೂ ಪಡೆದಿಲ್ಲ. ಆದರೆ ಯಕ್ಷಗಾನದ ಉತ್ತಮ ವಿಚಾರ ಜನಾಕರ್ಷಣೆಯ ವೇಷಕ್ಕಿಂತಲೂ ಪಾತ್ರದ ಔಚಿತ್ಯಕ್ಕೆ ಬೇಕಾದ ಹಾಗೆ ಪಾತ್ರ ಮಾಡುವಲ್ಲಿ ಕಲಿಯುವ ಹಾಗೆ ತಕ್ಕಮಟ್ಟಿಗಾದರೂ ಅದನ್ನು ಸಾಧಿಸುವ ಹಂಬಲ ಇದೆ ಎಂದು ಕುಂಕಿಪಾಲ ಹೇಳುತ್ತಾರೆ.
ಕೆರೆಮನೆ ಅವರೊಟ್ಟಿಗೆ ಅಮೆರಿಕ ಹಾಗೂ ದೇಶ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತಾರೆ. ಗುಂಡಬಾಳ, ಮಂದಾರ್ತಿ, ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ಪ್ರಜಾವಾಣಿ ಯುವ ಸಾಧಕ ಪ್ರಶಸ್ತಿ, ಹೈದರಬಾದ್ ಕರಾವಳಿ ಯಕ್ಷ ಸಂಘದ ಸನ್ಮಾನ, ಅಮೆರಿಕದಲ್ಲಿ ಪುರಸ್ಕಾರ ಇನ್ನೂ ಹಲವು ಸನ್ಮಾನ ಹಾಗೂ ಪ್ರಶಸ್ತಿ ಕುಂಕಿಪಾಲ ಅವರಿಗೆ ದೊರೆತಿರುತ್ತದೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ