ಸಾಧನೆ ಎನ್ನುವುದು ಸುಲಭದ ಮಾತಲ್ಲ. ಯಾವುದೇ ಕ್ಷೇತ್ರ ಆಗಿರಬಹುದು, ಸತತವಾದ ಪರಿಶ್ರಮ ಮತ್ತು ಅತೀವ ಆಸಕ್ತಿ ಇದ್ದರೆ ಮಾತ್ರ ಯಶಸ್ಸು ಕೈಗೆಟುಕಬಲ್ಲದು. ಕಠಿಣ ಪರಿಶ್ರಮದಿಂದ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಿ, ಎಲೆ ಮರೆಯ ಕಾಯಿಯಂತೆ ಕ್ರೀಡಾ ಕ್ಷೇತ್ರದಲ್ಲಿ ಬೆಳೆಯುತ್ತಿರುವ ತುಳುನಾಡ ಪ್ರತಿಭೆ ಶ್ರೀನಿವಾಸ ಗೌಡ.
ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲದವರು. ತಂದೆ ರಾಮಣ್ಣ ಗೌಡ ಹಾಗೂ ತಾಯಿ ಜಯಂತಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಒಕ್ಕೆತ್ತೂರು ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ವಿಠಲ ಪ್ರೌಢ ಶಾಲೆಯಲ್ಲಿ ಹಾಗೂ ಪಿ.ಯು.ಸಿ ಮತ್ತು ಪದವಿಯನ್ನು ಎಸ್.ಡಿ.ಎಮ್ ಕಾಲೇಜು ಉಜಿರೆಯಲ್ಲಿ ಪಡೆದುಕೊಂಡರು. ನಂತರ ಬಿ.ಪಿ.ಎಡ್ ಪದವಿ ಮತ್ತು ಎಂ.ಪಿ.ಎಡ್ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ.
ಕ್ರೀಡೆಯ ಮೇಲೆ ಅಪಾರವಾದ ಆಸಕ್ತಿ, ಒಲವನ್ನು ಇರಿಸಿಕೊಂಡಿರುವ ಇವರು ತಮ್ಮ ಬಾಲ್ಯದಲ್ಲಿಯೇ ಹಲವಾರು ಕ್ರೀಡೆಗಳಲ್ಲಿ ಮಿಂಚಿರುತ್ತಾರೆ. ಪ್ರಾಥಮಿಕ ಶಾಲೆಯಲ್ಲಿದ್ದಾಗ ವಾಲಿಬಾಲ್ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು, ಹೈಸ್ಕೂಲಿನಲ್ಲಿ ರಾಜ್ಯ ಮಟ್ಟದ ವಾಲಿಬಾಲ್, ಅಥ್ಲೆಟಿಕ್ಸ್ ಹಾಗೂ ಪಿ.ಯು.ಸಿಯಲ್ಲಿ ಅಥ್ಲೆಟಿಕ್ಸ್ ನಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿರುತ್ತಾರೆ. 2019ರಲ್ಲಿ ಗುಜರಾತ್ ನ ವಡೋರ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿರುತ್ತಾರೆ. 2022ರಲ್ಲಿ ಜಿ.ಎಲ್.ಎ ವಿಶ್ವವಿದ್ಯಾಲಯ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಇವರು ವಿಟ್ಲದ ವಿಠಲ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಂದ ತರಬೇತು ಪಡೆದ ಅದೆಷ್ಟೋ ಯುವ ಕ್ರೀಡಾ ಪ್ರತಿಭೆಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ.
ಬಾಲ್ಯದಿಂದಲೇ ಕ್ರೀಡೆಯ ಮೇಲೆ ಅತೀವ ಪ್ರೀತಿಯಿಟ್ಟುಕೊಂಡು ಅವಿರತ ಸಾಧನೆಯ ಮೂಲಕ ಈ ಮಟ್ಟಕ್ಕೆ ಬೆಳೆದ ತಮ್ಮ ಮಗನ ಮುಂದಿನ ಕನಸುಗಳೆಲ್ಲವೂ ಆದಷ್ಟು ಬೇಗ ನನಸಾಗಲಿ ಎಂಬುದು ಪೋಷಕರ ಪ್ರೋತ್ಸಾಹದ ನುಡಿಗಳು.
-ದೀಕ್ಷಿತಾ ಗಿರೀಶ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ