ಗೋಕರ್ಣ: ಮಣ್ಣಿನಿಂದಲೇ ಮನುಕುಲದ ಉಳಿವು. ಮನುಷ್ಯನ ಸ್ವಾಸ್ಥ್ಯ, ಸಮಾಜದ ಹಾಗೂ ವಿಶ್ವದ ಆರೋಗ್ಯಕ್ಕೆ ಮಣ್ಣೇ ಮೂಲ. ಮಣ್ಣಿನ ಸಾರ ಸಂರಕ್ಷಣೆ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲದಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಸಾಯಿಲ್ ವಾಸು ತಂಡದಿಂದ ಆಯೋಜಿಸಿದ್ದ "ನಮ್ಮ ಮಣ್ಣು ಹೇಗಿದೆ?" ಎಂಬ ವಿಷಯ ಕುರಿತ ವಿಶೇಷ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಮಕ್ಕಳಿಗೆ ಎಳವೆಯಲ್ಲೇ ಮಣ್ಣಿನ ಮಹತ್ವವನ್ನು ತಿಳಿಸಿಕೊಡುವ ಕಾರ್ಯ ಅಗಬೇಕು. ಮಣ್ಣು ಕೊಳಕು, ಕೆಸರು ಎಂಬ ಭಾವನೆ ಇಂದಿನ ನಗರ ವಾಸಿ ಮಕ್ಕಳಲ್ಲಿ ನಾವು ಮೂಡಿಸಿದ್ದೇವೆ. ಆದರೆ ಅದು ಪೂಜ್ಯ. ಮನುಕುಲದ ಉಳಿವಿಗೆ ಮಣ್ಣೇ ಆಧಾರ ಎಂದು ವಿಶ್ಲೇಷಿಸಿದರು.
'ಮಣ್ಣಿನ ಮಕ್ಕಳೇ ಚಿನ್ನದ ಮಕ್ಕಳು'. ನಾವು ಮೊದಲು ನೆಲವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕು. ಮಣ್ಣಿಗೆ ನಾವು ರಾಕ್ಷಸರಾಗಬಾರದು. ಮಣ್ಣಿಗೆ ನಾವು ಮಕ್ಕಳಾಗಬೇಕು ಎಂದು ಕಿವಿಮಾತು ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ ಮತ್ತು ಕಾಮದುಘ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೂಲತಃ ಕೃಷಿಕರು, ಕನ್ನಡ ಲೇಖಕರು, ಮಣ್ಣಿನ ಬಣ್ಣದಲ್ಲಿಯೇ ಚಿತ್ರ ರಚಿಸಬಲ್ಲ ಕಲಾಕಾರರೂ ಆಗಿರುವ ರಾಧಾಕೃಷ್ಣ ಬಂದಗದ್ದೆ ಅವರು ಶ್ರೀ ಕೃಷ್ಣನು ಮಣ್ಣನ್ನು ತಿಂದ ಕಥೆಯ ಮೂಲಕ ಮಾತನ್ನು ಪ್ರಾರಂಭಿಸಿ ಮಣ್ಣು ಎಂದರೆ ನೆಲ. ಅದು ಸರಿಯಾಗಿದ್ದರೆ ಮಾತ್ರ ನಾವು ಅದರ ಅನುಗ್ರಹ ಪಡೆಯಲು ಸಾಧ್ಯ ಎಂದು ಬಣ್ಣಿಸಿದರು.
ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಾಯಿಲ್ ವಾಸು ತಂಡದ ಪ್ರಭಾಕರ್ ಮತ್ತು ಶಿವಮೂರ್ತಿ ಅವರು ಸಾವಯವ ಗೊಬ್ಬರವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದರೆ, ರಾಸಾಯನಿಕ ಗೊಬ್ಬರವು ಭೂಮಿಯನ್ನು ಹಾಳುಮಾಡುತ್ತದೆ. ಹಾಗಾಗಿ ಮಣ್ಣನ್ನು ಕಾಪಾಡಿಕೊಂಡರೆ ನಮ್ಮ ಬದುಕು ಕಾಪಾಡಿಕೊಂಡಂತೆ ಎಂದು ಹೇಳಿದರು.
ಮಣ್ಣಿನಲ್ಲಿ ಫಲವತ್ತತೆಯ ಅಂಶ ಎಷ್ಟಿದೆ ಎಂಬುದನ್ನು ಪ್ರಯೋಗದ ಮೂಲಕ ಪ್ರಭಾಕರ್ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಮಕ್ಕಳೂ ಸ್ವತಃ ಆ ಪ್ರಯೋಗವನ್ನು ಮಾಡಿ ಮಣ್ಣಿನಲ್ಲಿರುವ ಫಲವತ್ತತೆಯನ್ನು ಕಂಡುಹಿಡಿಯುವ ಕಲೆ ಕರಗತ ಮಾಡಿಕೊಂಡರು.
ಏಳು ವಿವಿಧ ಜಾತಿಯ ಮಣ್ಣಿನಿಂದ ಹೇಗೆ ಬಣ್ಣಗಳನ್ನು ತಯಾರಿಸಿಕೊಂಡು ಚಿತ್ರವನ್ನು ಬಿಡಿಸಬಹುದು ಎಂಬುದನ್ನು ಮಕ್ಕಳಿಗೆ ಕಲಿಸಿಕೊಟ್ಟು ಮಕ್ಕಳಿಂದ ಚಿತ್ರವನ್ನು ಬಿಡಿಸಲಾಯಿತು.
ಸಂಶೋಧನಾ ಖಂಡದ ಶ್ರೀಸಂಯೋಜಕ ಗುರುರಾಜ್ ಪಡೀಲ್, ಗುರುಕುಲದ ನಿರ್ದೇಶಕ ಶ್ರೀಪಾದ ಭಟ್ಟ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ಟ, ಸಾರ್ವಭೌಮ ಗುರುಕುಲದ ಮುಖ್ಯೋಧ್ಯಾಪಕಿಯಾದ ಸೌಭಾಗ್ಯ ಭಟ್ಟ, ಗುರುಕುಲದ ಸಮನ್ವಯ ಅಧಿಕಾರಿ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಛಾಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ಅವರು ಸ್ವಾಗತಿಸಿದರು. ಮಾನಸ ಉಪಾಧ್ಯಾಯ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ