ಮಂಗಳೂರು: ಡಿಸೆಂಬರ್ 25 ರ ಭಾನುವಾರ ಸಂಜೆ 3 ಗಂಟೆಗೆ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ಕಾರ್ಯಕ್ರಮ ನಡೆಯಲಿದ್ದು ಸುಮಾರು 1,250 ಕುಟುಂಬಗಳಿಗೆ 2.50 ಕೋಟಿ ರೂ. ಸಹಾಯ ಧನ ವಿತರಿಸಲಾಗುವುದು ಎಂದು ಎಂಆರ್ ಜಿ ಗ್ರೂಪ್ ನ ಅಧ್ಯಕ್ಞ ಕೆ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಯೋಜನೆಗೆ ಸಂಬಂಧಿಸಿ ಅರ್ಜಿಗಳನ್ನು ವಿತರಣೆ ಮಾಡಿದ ಬಳಿಕ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಪರಿಶೀಲಿಸಿ, ಅವಶ್ಯವೆನಿಸಿದಲ್ಲಿ ಅರ್ಜಿದಾರರ ಮನೆಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ಕೆ ಮಾಡಲಾಗಿದೆ. ತೀರಾ ಅವಶ್ಯಕತೆ ಇರುವವರನ್ನು ಗುರುತಿಸಿದ್ದೇವೆ ಎಂಬ ತೃಪ್ತಿ ನಮಗಿದೆ ಎಂದು ಸಹಾಯ ಹಸ್ತ ಯೋಜನೆಯ ಕುರಿತಂತೆ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ಸಮಾಜ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳನ್ನೂ ನೆರವಿಗೆ ಆಯ್ಕೆ ಮಾಡಲಾಗಿದೆ. ಜಾತಿ, ಧರ್ಮಗಳನ್ನು ಪರಿಗಣಿಸದೆ ಸಹಾಯವನ್ನು ವಿತರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಪ್ರತಿ ಗ್ರಾಮಗಳಿಂದಲೂ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ವೈದ್ಯಕೀಯ ನೆರವಿಗಾದರೆ ಆಧಾರ್ ಕಾರ್ಡ್, ವೈದ್ಯಕೀಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ವಿದ್ಯಾರ್ಥಿಗಳಿಗೆ ನೀಡುವ ನೆರವಿಗಾದರೆ ಅವರ ಅಂಕಗಳನ್ನು ಮತ್ತು ಆರ್ಥಿಕ ಪರಿಸ್ಥಿತಿಯನ್ನು ನೋಡಿ ಆಯ್ಕೆ ಮಾಡಲಾಗಿದೆ. ಸ್ವತಂತ್ರ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದರಿಂದ ಇದರಲ್ಲಿ ಯಾರದೇ ಶಿಫಾರಸುಗಳನ್ನು ಪರಿಗಣಿಸಲಾಗಿಲ್ಲ. ಅರ್ಹ ಫಲಾನುಭವಿಗಳಿಗೆ ಸಹಾಯ ಸಲ್ಲಬೇಕೆನ್ನುವ ಆಶಯದಲ್ಲಿ ಬೇರೆ ಬೇರೆ ಸಮಿತಿಗಳನ್ನು ರಚಿಸಿಕೊಂಡು ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಡಿಸೆಂಬರ್ 25 ರಂದು ಸಂಜೆ 3 ಗಂಟೆಗೆ ಫಲಾನುಭವಿಗಳನ್ನು ವಾಹನದ ಮೂಲಕ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಅವರಿಗೆ ಅಲ್ಲಿಯೇ ಸಹಾಯವನ್ನು ನೀಡಿ ಬಳಿಕ ಅವರನ್ನು ಮನೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಅವರು ಮುಖ್ಯವಾಹಿನಿಯಲ್ಲಿ ಘನತೆಯ ಬದುಕು ಕಟ್ಟಿಕೊಳ್ಳ ಬೇಕೆಂಬುದು ಎಂಆರ್ ಜಿ ಗ್ರೂಪ್ ನ ಆಶಯ. ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆ ಆರ್ಥಿಕವಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಹಸ್ತ ಚಾಚಿದೆ. ಎಲ್ಲರೂ ಆರ್ಥಿಕವಾಗಿ ಸದೃಢರಾಗಬೇಕೆಂಬುದು ನಮ್ಮ ಆಶಯ ಎಂದು ಕೆ.ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಸಾಲುಮರದ ತಿಮ್ಮಕ್ಕ ಮತ್ತು ಮಹಾಲಿಂಗ ನಾಯ್ಕ್, ಮೂಡಬಿದ್ರೆ ಆಳ್ವಾಸ್ ಶಿಕ್ಣಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಗುರ್ಮೆ ಫೌಂಡೇಶನ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಎಂಆರ್ ಜಿ ಗ್ರೂಪ್ ನ ನಿರ್ದೇಶಕ ಗೌರವ್ ಪಿ ಶೆಟ್ಟಿ ಭಾಗವಹಿಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ