ವಿಟ್ಲ: ಜಗತ್ತಿನ ಅತ್ಯುನ್ನತ ಸಿನೆಮಾ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್‌ಗೆ ಈ ವರ್ಷ ಭಾರತದ ಅಧಿಕೃತ ಪ್ರವೇಶ ಪಡೆದ ಗುಜರಾತಿ ಭಾಷೆಯ "ಛೆಲ್ಲೋ ಶೋ" ಚಿತ್ರವು 15ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಈ ಚಿತ್ರದ ಸಂಕಲನದ ಹೊಣೆಗಾರಿಕೆಯನ್ನು ಜಿಲ್ಲೆಯ ಉಪ್ಪಿನಂಗಡಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿ ಪವನ್ ಭಟ್ ನಿರ್ವಹಿಸಿದ್ದು, ಕರ್ನಾಟಕಕ್ಕೂ ಹೆಮ್ಮೆಯೆನಿಸಿದೆ. ಸೆಪ್ಟಂಬರ್‌ನಲ್ಲಿ ಪ್ರಥಮ ಸುತ್ತಿನಲ್ಲಿ 92 ದೇಶಗಳ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದ್ದವು. ಬೆಸ್ಟ್ ಇಂಟರ್‌ನ್ಯಾಶನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ 92 ಚಿತ್ರಗಳನ್ನು ವಿಶ್ಲೇಷಿಸಿದ ಅಕಾಡೆಮಿಯು ಲಾಸ್ಟ್ ಫಿಲ್ಮ್ ಶೋ (ಛೆಲ್ಲೋ ಶೋ) ವನ್ನು 15ರ ಪಟ್ಟಿಯಲ್ಲಿ ಆಯ್ಕೆ ಮಾಡಿದೆ.
ಕಳೆದ 21 ವರ್ಷಗಳಲ್ಲಿ ಭಾರತೀಯ ಚಿತ್ರವೊಂದು ಈ ಪಟ್ಟಿಗೇರಿರಲಿಲ್ಲ! ಮತ್ತು ಭಾರತೀಯ ಚಿತ್ರಗಳಲ್ಲಿ ಈ ಸ್ಥಾನಕ್ಕೇರಿದ ನಾಲ್ಕನೇ ಚಿತ್ರ ಇದಾಗಿದೆ. ಮದರ್ ಇಂಡಿಯ, ಸಲಾಮ್ ಬಾಂಬೆ ಮತ್ತು ಲಗಾನ್ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಇದೀಗ ಛೆಲ್ಲೋ ಶೋ ಕೂಡಾ ಆ ಹಾದಿಯಲ್ಲಿದೆ. 5 ಚಿತ್ರಗಳ ಪಟ್ಟಿಯು 2024ರ ಜ. 24ರಂದು ಹೊರಬೀಳಲಿದೆ ಮತ್ತು 2023ರ ಮಾರ್ಚ್ 12ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. 15ರ ಶಾರ್ಟ್ ಲಿಸ್ಟ್ ನಲ್ಲಿ ಛೆಲ್ಲೋ ಶೋ ಸ್ಥಾನ ಪಡೆದ ಬಗ್ಗೆ ಚಿತ್ರದ ನಿರ್ಮಾಪಕ ಸಿದ್ಧಾರ್ಥ್ ರಾಯ್, ಧೀರ್ ಮೊಮಾಯ, ನಿರ್ದೇಶಕ ಪಾನ್ ನಳಿನ್ ಮತ್ತು ಪವನ್ ಭಟ್ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.
ಪವನ್ ಭಟ್ ಮತ್ತು ಬೆಳ್ತಂಗಡಿ ಮೂಲದ ಪ್ರಸ್ತುತ ನ್ಯೂಜಿಲೆಂಡ್ ನಲ್ಲಿರುವ ಶ್ರೇಯಸ್ ಕೂಡಾ ಈ ಚಿತ್ರದ ಎಡಿಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ ಕನ್ನಡಿಗರು. ಪವನ್ ಭಟ್ ಅವರು 22 ಸಿನಿಮಾಗಳನ್ನು ಎಡಿಟ್ ಮಾಡಿದ್ದು ಚಿತ್ರರಂಗ ಪ್ರವೇಶಿಸಿದ ಸಾಫ್ಟ್‌ವೇರ್ ಎಂಜಿನಿಯರ್. ಮುಂಬಯಿಯಲ್ಲಿ ಸಿನಿಮಾ ಎಡಿಟಿಂಗ್ ಡಿಪ್ಲೊಮಾ ಪೂರೈಸಿದ ಪ್ರತಿಭಾವಂತ ಯುವಕ. ಸಿನಿಮಾ ನಿರ್ದೇಶನ ಮತ್ತು ಆಧುನಿಕ ತಂತ್ರಜ್ಞಾನಗಳ ಚಿತ್ರಗಳನ್ನು ಹೊರತರಲು ತೀವ್ರ ಆಸಕ್ತಿ ಹೊಂದಿದ್ದಾರೆ. ಪವನ್ ಭಟ್ ಇವರು ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಮೂಲದ, ಬೆಂಗಳೂರು ನಿವಾಸಿಗಳಾದ ಗೋಪಾಲಕೃಷ್ಣ ಭಟ್ ಮತ್ತು ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಪುತ್ರಿ ಸರೋಜಾ ಜಿ.ಭಟ್ ದಂಪತಿಯ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


