ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸ್ನಾತಕೋತ್ತರ ವಿಭಾಗ ಮತ್ತು ಬಿ.ವೋಕ್ ವಿಭಾಗಗಳ ಆಶ್ರಯದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿ ದಿ. ಡಾ. ಬಿ. ಯಶೋವರ್ಮ ಅವರ 68ನೇ ಹುಟ್ಟು ಹಬ್ಬದ ಅಂಗವಾಗಿ 'ಯಶೋ ಸಂಕಲ್ಪ' ಕಾರ್ಯಕ್ರಮವು ಉಜಿರೆಯ ಎಸ್.ಡಿ.ಎಂ. ಸ್ನಾತ್ತಕೋತ್ತರ ಕೇಂದ್ರದ ಆವರಣದಲ್ಲಿ ಡಿಸೆಂಬರ್ 5 ರಂದು ನಡೆಯಿತು.
ಈ ಸಂದರ್ಭದಲ್ಲಿ ದಿ. ಡಾ. ಬಿ. ಯಶೋವರ್ಮ ಅವರು ಪ್ರತಿಪಾದಿಸಿದ ಉತ್ತಮ ಅಭ್ಯಾಸಗಳನ್ನು ಸೂಚಿಸುವ ಅಂಶಗಳ ಪ್ರತಿಜ್ಞಾವಿಧಿಯನ್ನು ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ ವಿದ್ಯಾರ್ಥಿಗಳಿಗೆ, ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿಯವರಿಗೆ ಬೋಧಿಸಿದರು.
ದಿ. ಡಾ. ಬಿ. ಯಶೋವರ್ಮ ಅವರು ತತ್ವಾದರ್ಶಗಳ ವ್ಯಕ್ತಿಯಾಗಿದ್ದರು. ಸರಳ ಬದುಕಿನ ಬಗ್ಗೆ ಪರಿಣಾಮಕಾರಿ ತತ್ವಗಳನ್ನು ಪ್ರತಿಪಾದಿಸುತ್ತ ನಮ್ಮನ್ನು ಮುನ್ನಡೆಸುತ್ತಿದ್ದ ವ್ಯಕ್ತಿತ್ವ ಅವರದ್ದು ಎಂದು ಕಾಲೇಜಿನ ಡೀನ್ ಡಾ.ವಿಶ್ವನಾಥ್.ಪಿ ಹೇಳಿದರು. ಯಶೋವರ್ಮರವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಅವರು ಪ್ರತಿಪಾದಿಸಿದ ಉತ್ತಮ ಅಭ್ಯಾಸಗಳನ್ನು ಪ್ರಮಾಣ ರೂಪದಲ್ಲಿ ಸ್ವೀಕರಿಸೋಣ ಎಂದು ಅಭಿಪ್ರಾಯಟ್ಟರು.
ಪ್ರತಿಜ್ಞಾವಿಧಿಯ ಅಂಶಗಳು ಪರಿಸರದ ಸಂರಕ್ಷಣೆಯ ಪರವಾಗಿ ನಿಲ್ಲುವಂತೆ ಪ್ರೇರಣೆ ನೀಡಿದವು. ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದವು. ಆಹಾರ ಮತ್ತು ನೀರಿನ ಉಳಿತಾಯದ ಪರಿಕಲ್ಪನೆಯನ್ನು ಮೂಡಿಸಿದವು. ಅನಗತ್ಯವಾಗಿ ವಿದ್ಯುತ್ ಬಳಕೆಯನ್ನು ತಡೆಗಟ್ಟುವ ಸಂಕಲ್ಪ ಸೂಚಿಸಿದವು. ಪರಿಸರ ಹಾಗೂ ಸಮಾಜ ಪರನಿಲುವುಗಳನ್ನು ವಿದ್ಯಾರ್ಥಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಮಾರ್ಗಸೂಚನೆ ನೀಡಿದವು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಬಿ.ವೊಕ್ ವಿಭಾಗದ ಸಂಯೋಜಕ ಹಾಗೂ ಎಂ.ಎಸ್. ಡಬ್ಲ್ಯೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುವೀರ್‍ಜೈನ್ ಮಾತನಾಡಿದರು. ಪ್ರತಿಜ್ಞಾವಿಧಿ ಬಳಿಕ ಸ್ನಾತಕೋತ್ತರ ಕೇಂದ್ರದ ಹೊರ ಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಂದ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ನಡೆಯಿತು.