ಗಾನಕಲಾ ಕಣ್ಮಣಿ ಭಾಗವತ- ಬಾಯಾರು ಗೋಪಾಲಕೃಷ್ಣ ಮಯ್ಯ

Upayuktha
0


ನಮ್ಮ ನೆರೆಯ ಕಾಸರಗೋಡು ಜಿಲ್ಲೆಯ ಬಾಯಾರಿನ ಪೆಲತ್ತಡ್ಕ ಮನೆಯ ದಿ.ಶಂಕರನಾರಾಯಣ ಮಯ್ಯ ಮತ್ತು ಸರಸ್ವತಿ ಮಯ್ಯ ದಂಪತಿಯ ಹಿರಿಯ ಮಗನಾಗಿ 14.12.1971ರಂದು ಗೋಪಾಲಕೃಷ್ಣ ಮಯ್ಯ ಅವರ ಜನನ. ಚಿಕ್ಕಂದಿನಿಂದಲೂ ಯಕ್ಷಗಾನದ ಬಗ್ಗೆ ವಿಶೇಷವಾದ ಒಲವು. ಬಾಲ್ಯದಲ್ಲಿ ಬಾಯಾರು ರಮೇಶ್ ಶೆಟ್ಟಿಯವರಲ್ಲಿ ನಾಟ್ಯ ಅಭ್ಯಾಸ ಮಾಡಿ ಸಣ್ಣ ಪುಟ್ಟ ವೇಷಗಳನ್ನು ಮಾಡಿ, ಮುಂದೆ ಭಾಗವತಿಕೆಯಲ್ಲಿ ವಿಶೇಷವಾಗಿ ಆಕರ್ಷಿತರಾಗಿ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರಲ್ಲಿ ಯಕ್ಷಗಾನದ ಭಾಗವತಿಕೆಯನ್ನು ಕಲಿತರು. ಇವರ ತಂದೆಯವರ ಆಸೆ ಹಾಗೂ ಪ್ರೇರಣೆಯಂತೆ ಕಟೀಲು ಮೇಳಕ್ಕೆ ಸೇರಿದರು.


1990-91ನೇ ಇಸವಿಯಲ್ಲಿ ಕಟೀಲು ಮೇಳಕ್ಕೆ ಸಂಗೀತಗಾರನಾಗಿ ಸೇರಿ ಮೂರು ವರ್ಷಗಳ ಕಾಲ ಬಲಿಪ ನಾರಾಯಣ ಭಾಗವತರೊಂದಿಗೆ ಎರಡನೇ ಮೇಳದಲ್ಲಿ ತಿರುಗಾಟ ಮಾಡಿ ನಂತರದ ತಿರುಗಾಟವನ್ನು ಸಹ ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿಗಳ ಜೊತೆಗೆ ಮೂರನೇ ಮೇಳದಲ್ಲಿ ೧೮ ವರ್ಷ ತಿರುಗಾಟ ಮಾಡಿ ನಂತರದಲ್ಲಿ ಅದೇ ಮೂರನೇ ಮೇಳದಲ್ಲಿ ಎಂಟು ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಸೇವೆಯನ್ನು ಸಲ್ಲಿಸಿ ಪ್ರಸ್ತುತ ಹವ್ಯಾಸಿ ಭಾಗವತರಾಗಿ ಯಕ್ಷ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ, ಪ್ರತಿ ಶನಿವಾರದಂದು ಸರಣಿ ತಾಳಮದ್ದಳೆಯನ್ನು ಹವ್ಯಾಸಿ ಕಲಾವಿದರೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ.

ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಲಲಿತೋಪಾಖ್ಯಾನ, ಮಾನಿಷಾದ, ಮೇಘ ಮಯೂರಿ, ಕಾಯಕಲ್ಪ ಹಾಗೂ ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.

ಯಕ್ಷಗಾನ ರಂಗದಲ್ಲಿ ಇರುವ ಎಲ್ಲಾ ಭಾಗವತರು, ಚೆಂಡೆ ಮದ್ದಳೆ ವಾದಕರು, ವೇಷದವರು ಇವರ ನೆಚ್ಚಿನವರು.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-

ಯಕ್ಷಗಾನ ಇಂದಿನ ಸ್ಥಿತಿ ಉತ್ತಮವಾಗಿದೆ ಆದರೆ ಬೇಸರವಿದೆ, ಅವಕಾಶಗಳು ವಿಪುಲವಾಗಿದ್ದರೂ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಬಹಳ ಬೇಸರವಿದೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-

ವ್ಯಕ್ತಿನಿಷ್ಠರಾಗಿಯೇ (ಕೆಲವು ಕಲಾವಿದರನ್ನು ಮಾತ್ರ ಬೆಂಬಲಿಸಿ) ಯಕ್ಷಗಾನವನ್ನು ನೋಡುತ್ತಾರೆಯೇ ಹೊರತು ವಸ್ತುನಿಷ್ಠರಾಗಿಲ್ಲ.

"ಗಾನಕಲಾ ಕಣ್ಮಣಿ ಭಾಗವತ" ಬಿರುದು, ನಾಗ ರಕ್ತೇಶ್ವರಿ ಗುಳಿಗ ಸನ್ನಿಧಿ ಭಕ್ತ ವೃಂದ ಜಲ್ಲಿಗುಡ್ಡೆ, ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗ ಸಂಸ್ಥೆ, ಕುಲಶೇಖರ ಹತ್ತು ಸಮಸ್ತರ ಯಕ್ಷಗಾನ ಸೇವಾ ಸಮಿತಿ ಹಾಗೂ ಸುವರ್ಣ ಮಹೋತ್ಸವ ಸಮಿತಿ, ಸುವರ್ಣ ಪ್ರತಿಷ್ಠಾನ ಕರ್ನಿರೆ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನ ಹಾಗೂ ಪುರಸ್ಕಾರ ನೀಡಿ ಗೌರವಿಸಿದ್ದಾರೆ.


ಗೋಪಾಲಕೃಷ್ಣ ಮಯ್ಯ ಅವರು ಶಕುಂತಳಾ ಇವರನ್ನು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ತಾಯಿ ದುರ್ಗಾಪರಮೇಶ್ವರಿಯ ಅನುಗ್ರಹ, ಆಸ್ರಣ್ಣ ಬಂಧುಗಳ ಆಶೀರ್ವಾದ ಹಾಗೂ ಕಟೀಲು ಮೇಳದ ಯಜಮಾನರಾಗಿದ್ದ ಕಲ್ಲಾಡಿ ವಿಠಲ ಶೆಟ್ಟಿ, ಯಜಮಾನರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಮೇಳದ ಸಹ ಕಲಾವಿದರ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಮಯ್ಯರು.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top