ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾ ವಿಭಾಗವು ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿ ಡಿ.5 ರಂದು ಉದ್ಘಾಟನೆಗೊಂಡಿತು.
ಈ ಚೆಸ್ ಪಂದ್ಯಾವಳಿಯನ್ನು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪ ಪರೀಕ್ಷಾ ನಿಯಂತ್ರಕ ಡಾ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. 'ನಿಟ್ಟೆ ಸಂಸ್ಥೆಯು ಕ್ರೀಡೆಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂತಹ ಯಾವುದೇ ರಾಜ್ಯ ಅಥವಾ ರಾಷ್ಟ್ರಮಟ್ಟದ ಪಂದ್ಯಾವಳಿಯನ್ನೂ ಸಮರ್ಥವಾಗಿ ಪೂರ್ಣಗೊಳಿಸುವ ಶಕ್ತಿ ನಿಟ್ಟೆ ಸಂಸ್ಥೆಯ ಕ್ರೀಡಾ ವಿಭಾಗಕ್ಕಿದೆ. ವಿಶ್ವನಾಥನ್ ಆನಂದ್ ರಂಥಹ ಶೇಷ್ಟ ಚೆಸ್ ಆಟಗಾರರನ್ನು ಜಗತ್ತಿಗೆ ಪರಿಚಯಿಸಲು ಇಂತಹ ವೇದಿಕೆಗಳು ಬಹುಮುಖ್ಯವಾಗುತ್ತದೆ' ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ಚೆಸ್ ಎಂಬುದು ನಮ್ಮ ಮೆದುಳಿಗೆ ಕೆಲಸ ನೀಡುವ ಆಟವಾಗಿದ್ದು ಇಂತಹ ಆಟಗಳು ವಿದ್ಯಾರ್ಥಿಗಳಲ್ಲಿ ತಮ್ಮ ಶೈಕ್ಷಣಿಕ ಬೆಳವಣಿಗೆಯನ್ನು ಕಾಣಲು ಸಹಕಾರಿಯಾಗಲಿದೆ' ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಪರೀಕ್ಷಾಂಗ ವಿಭಾಗದ ದೀಪಕ್ ಪೈ ಅವರು ಬರೆದ ಚೆಸ್ ಆಟದ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಪಂದ್ಯಾವಳಿಯ ಸಂಯೋಜಕರಾದ ಸೌಜನ್ಯ್ ಹಾಗೂ ಗಂಗಾಧರ್ ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಕ್ರೀಡಾ ನಿರ್ದೇಶಕ ಡಾ.ಗಣೇಶ್ ಪೂಜಾರಿ ಸ್ವಾಗತಿಸಿದರು. ಅಲಂಪು ಪ್ರಾರ್ಥಿಸಿದರು. ವಿದ್ಯಾರ್ಥಿನಿ ನಿಧಿ ವಂದಿಸಿದರು. ನಿಟ್ಟೆ ಕ್ಯಾಂಪಸ್ ನ ಕ್ರೀಡಾಧಿಕಾರಿ ಶ್ಯಾಮ್ ಸುಂದರ್ ಮುಳಿಯ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ