ಮೂಡುಬಿದಿರೆ: ಇಂದು ಸಂಪೂರ್ಣ ಜಗತ್ತು ಡಿಜಿಟಲೀಕರಣದ ತೆಕ್ಕೆಯಲ್ಲಿದೆ. ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಲಿಚ್ಚಿಸುವವರು ಸತ್ಯ, ನಿಖರ ಸುದ್ದಿಯನ್ನು ನೀಡುವ ಜವಾಬ್ದಾರಿ ಅಗತ್ಯವಾಗಿ ಹೊಂದಿರಬೇಕು ಎಂದು ಚರಿತ್ರೆ ಯೂಟ್ಯೂಬ್ ಚಾನೆಲ್‌ನ ನಿತೇಶ್ ಪೂಜಾರಿ ಹೇಳಿದರು.
ಅವರು ಆಳ್ವಾಸ್ ಪದವಿ ಕಾಲೇಜಿನ ಅನಿಮೇಷನ್ ಹಾಗೂ ವಿಷುವಲ್ ಎಫೆಕ್ಟ್ ವಿಭಾಗ ಆಯೋಜಿಸಿದ್ದ ಕಾರ್ಯಾಗಾರ-‘ಡಿಜಿಟಲ್ ಕಂಟೆಂಟ್ ಕ್ರಿಯೇಷನ್' ನಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನವಮಾಧ್ಯಮ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲಿ ಒಂದು. ಪ್ರಸ್ತುತ ಕಾಲಘಟ್ಟದಲ್ಲಿ ಅತೀ ವೇಗವಾಗಿ, ಕಡಿಮೆ ಸಮಯದಲ್ಲಿ ದೊರಕುವ ಸುದ್ದಿಗೆ ಮಾನ್ಯತೆ ಹೆಚ್ಚು. ಈ ಕೆಲಸ ಸಾಮಾಜಿಕ ಜಾಲತಾಣದಿಂದ ಸಾಧ್ಯವಾಗುತ್ತಿದೆ. ಆದರೆ ಚುರುಕಾಗಿ ಸುದ್ದಿ ನೀಡುವ ತವಕದಲ್ಲಿ ಶಿಷ್ಟಾಚಾರವನ್ನು ಮರೆಯಬಾರದು ಎಂದರು.
ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವುದರ ಕುರಿತು ಮಾಹಿತಿ ನೀಡಿದ ಅವರು ಯಾವುದೇ ನಿರೀಕ್ಷೆ ಇಲ್ಲದೆ ಚಾನೆಲ್ ಪ್ರಾರಂಭಿಸುವುದು ಮುಖ್ಯ. ಒಳ್ಳೆಯ ಆಲೋಚನೆ, ಸತತ ಪರಿಶ್ರಮ ಇದ್ದರೆ ಪ್ರತಿಫಲ ಖಂಡಿತವಾಗಿ ದೊರಕುತ್ತದೆ. ಸಾಲು ಸಾಲು ಸೋಲುಂಡವನೇ ಇಂದು ಸಾಧಕರ ಪಟ್ಟಿಯಲ್ಲಿ ಇರುವುದು ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು ಎಂದರು. ನಂತರ ತನ್ನ ಯೂಟ್ಯೂಬ್ ಚಾನೆಲ್‌ಗೆ 1 ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ ಹೊಂದಿದ ಬಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ ಡಿಜಿಟಲೀಕರಣ ಮಾಧ್ಯಮ ಲೋಕದಲ್ಲಿ ಕ್ರಾಂತಿ ಸೃಷ್ಟಿಸುತ್ತಿದೆ. ಗೌಪ್ಯತೆಗೆ ಇಲ್ಲಿ ಜಾಗವಿಲ್ಲ. ಹಾಗಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವ ಮಾಧ್ಯಮದಿಂದ ಅನೇಕ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಯೋಜನಗಳಿವೆ. ಇದನ್ನು ಅರಿತು ಜವಾಬ್ದಾರಿಯಿಂದ ಬಳಕೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಅನಿಮೇಷನ್ ವಿಭಾಗದ ಮುಖ್ಯಸ್ಥ ರವಿ ಮೂಡುಕೊಣಾಜೆ, ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಬಿಎಸ್ಸಿ ಅನಿಮೇಶನ್ ವಿದ್ಯಾರ್ಥಿನಿ ಅಪೂರ್ವ ನಿರೂಪಿಸಿ, ನಂದನ ಸ್ವಾಗತಿಸಿದರು. ಬಿಎಸ್ಸಿ ಅನಿಮೇಶನ್ ಸಹಾಯಕ ಉಪನ್ಯಾಸಕಿ ಪ್ರಜ್ಞಾ ವಂದಿಸಿದರು.
ಇಂದು ನವಮಾಧ್ಯಮ ಪ್ರಪಂಚವನ್ನೇ ಆಳುತ್ತಿದೆ. ಅಂತೆಯೇ ಯೂಟ್ಯೂಬ್ ಕೂಡ. ಹೊಸ ಪ್ರತಿಭೆಗಳು ತಮ್ಮಲ್ಲಿರುವ ಕೌಶಲ್ಯವನ್ನು ಇಲ್ಲಿ ತೋರ್ಪಡಿಸಿ ಉನ್ನತವಾದದನ್ನು ಸಾಧಿಸಬಹುದು ಜತೆಗೆ ಇನ್ನೊಬ್ಬರನ್ನು ಅನುಕರಣೆ ಮಾಡದೇ ವಿಭಿನ್ನ ಪ್ರಯತ್ನದ ಮುಖೇನ ಚರಿತ್ರೆ ಸೃಷ್ಟಿಸಬಹುದು
- ನಿತೀಶ್ ಪೂಜಾರಿ (ಚರಿತ್ರೆ ಯೂಟ್ಯೂಬ್ ಚಾನೆಲ್ ಮುಖ್ಯಸ್ಥ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ