ಜೀವನವೊಂದು ಪಯಣವಿದ್ದಂತೆ. ಜೀವನದ ಹಾದಿ ಕರೆದುಕೊಂಡು ಹೋಗುತ್ತಾ ಮಾನವ ನಡೆಯುತ್ತಲೇ ಇರಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದ ಗುರಿ, ಹಾದಿ ಬೇರೆ ಬೇರೆಯಾಗಿರುತ್ತದೆ. ಆ ಗುರಿಯನ್ನು ಸೇರಲು ಸತತ ಪರಿಶ್ರಮದ ಅಗತ್ಯವಿರುತ್ತದೆ.
ಪಯಣ ಎಂದಾಗ ನೆನಪಾಗುವು ದೇನೆಂದರೆ ಕಣ್ಮನ ಸೆಳೆಯುವ ಪ್ರಕೃತಿಯ ವೈಚಿತ್ರ್ಯ, ಜೋರಾಗಿ ಓಡಾಡುವ ವಾಹನ, ವೈವಿಧ್ಯಮಯ ಜೀವ ಸಂಕುಲ ಇತ್ಯಾದಿ. ಅದರಲ್ಲೂ ಮಾನವ ಬಯಸುವುದು ಆರಾಮ ದಾಯಕ ಜೀವನ ಹಾಗಾಗಿ ಆತ ನಡೆ ಯುವ ಪಯಣಕ್ಕಿಂತ ವಾಹನದಲ್ಲಿ ಆರಾಮವಾಗಿ ಕುಳಿತು ಹೋಗುವ ವೈಭವವನ್ನೇ ಇಷ್ಟಪಡುವವನು.
ಈ ಕಾರು-ಜೀಪಿನಲ್ಲಿ ಹೋಗುವು ದಕ್ಕಿಂತ ಬಸ್ಸಿನಲ್ಲಿ ಹೋಗುವ ಅನುಭವವೇ ಬೇರೆ ಅದರಲ್ಲೂ ಮುಂದಿನ ಡ್ರೈವರ್ ನ ಪಕ್ಕದ ಸೀಟಿನಲ್ಲಿ ಕುಳಿತು ಹೋಗುವುದೇ ಒಂದು ಮೋಜು. ಆ ವಿಸ್ತಾರವಾದ ಕನ್ನಡಿಯ ಮೂಲಕ ಮುಂದಿನಿಂದ ಬರುತ್ತಿರುವ ಹಾಗೂ ಹಿಂದಕ್ಕೆ ಹೋಗುತ್ತಿರುವ ಗಾಡಿಗಳನ್ನು ನೋಡುತ್ತಾ ಲೆಕ್ಕ ಹಾಕುವ ಖುಷಿ ಪದಗಳಲ್ಲಿ ವಿವರಿಸುವುದು ಅಷ್ಟು ಸುಲಭದ ಮಾತಲ್ಲ. ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ಹೋಗುವುದಕ್ಕೂ ಮುಂದಿನ ಸೀಟಿನಲ್ಲಿ ಕುಳಿತು ಹೋಗುವುದಕ್ಕೂ ಅಜಗಜಾಂತರವಂತೂ ಖಂಡಿತ ಇದೆ. ಹಿಂದೆ ಸೀಟಿನಲ್ಲಿ ಕುಳಿತುಕೊಂಡರೆ ಸಣ್ಣ ಕಿಟಕಿಯ ಮೂಲಕ ಪರಿಸರವು ಹಾಗೂ ಸುತ್ತ ಕುಳಿತ ಜನ ಅವರ ನಡವಳಿಕೆ ಹಾವಭಾವ ಕಾಣಿಸಿಕೊಂಡರೆ, ಮುಂದೆ ಕುಳಿತರೆ ವಿಸ್ತಾರ ಕಿಟಕಿಯ ಮೂಲಕ ಮಾತ್ರವಲ್ಲದೆ ಮುಂಭಾಗದ ಕನ್ನಡಿಯ ಮೂಲಕ ಹೊರ ಜಗತ್ತು ಚೆನ್ನಾಗಿ ಕಾಣಿಸುತ್ತದೆ.
ಈ ವಿಸ್ತಾರ ಕಿಟಕಿಯು ಒಂದು ಸಿನಿಮಾ ಪರದೆಯಂತೆ ಎಂದರೆ ತಪ್ಪಲ್ಲ, ಆದರೆ ಇದಕ್ಕೂ ಅದಕ್ಕೂ ಇರುವ ವ್ಯತ್ಯಾಸವೇನೆಂದರೆ ಆ ಸಿನಿಮಾ ಪರದೆಯಲ್ಲಿ ಒಂದು ಸನ್ನಿವೇಶ, ಒಬ್ಬನ ಜೀವನ ಕಥೆ ಮೂಡಿ ಬಂದರೆ ಈ ಪಾರದರ್ಶಕ ಪರದೆಯು ಒಂದೇ ಕ್ಷಣದಲ್ಲಿ 10 ಹಲವು ಸನ್ನಿವೇಶ ನೂರಾರು ಜೀವನ ಕಥೆಗಳನ್ನು ಕಣ್ಮುಂದೆ ತರುತ್ತದೆ.ಆ ಸಿನಿಮಾ ಪರದೇ ಸ್ವಚ್ಛಂದವಾಗಿ ಶುಭ್ರವಾಗಿ ಬಿಳಿಯಾಗಿದ್ದರೆ ಇದು ಪಾರದರ್ಶಕವಾಗಿ ವಿಸ್ತಾರವಾಗಿರುತ್ತದೆ. ನೈಜ ಸಿನಿಮಾ ಪರದೆಯು ನಾವು ಹಾಕಿಕೊಟ್ಟ ಚಿತ್ರಣಗಳನ್ನು ತೋರಿದರೆ ಈ ಕಾಲ್ಪನಿಕ ಸಿನಿ ಪರದೆ ತನ್ನಿಂದ ತಾನಾಗಿಯೇ ಚಿತ್ರಣಗಳನ್ನು ಹುಟ್ಟುಹಾಕುತ್ತಾ ಹೋಗುತ್ತದೆ. ಆದರೆ ಚಿತ್ರರಂಗ ಮಂದಿರದಲ್ಲಿ ಎಲ್ಲರೂ ಸಿನಿಮಾ ನೋಡುವುದಕ್ಕೆಂದೇ ಬಂದವರು ಆದರೆ ಈ ಬಸ್ಸಿನಲ್ಲಿ ಪ್ರತಿಯೊಬ್ಬರ ಜೀವನ ಕಥೆಯು ಒಂದೊಂದು ಸಿನಿಮಾ. ಅಲ್ಲಿ ಕಾಸು ಕೊಟ್ಟು ಸಿನಿಮಾ ನೋಡಲು ಹೋಗುತ್ತೇವೆ ಆದರೆ ಸಿನಿಮಾ ಒಂದನ್ನು ಬೆನ್ನಟ್ಟಿ ಹೋಗಲು ಕಾಸು ನೀಡಿ ಪಯಣಿಸುತ್ತಿರುತ್ತೇವೆ. ಚಿತ್ರರಂಗ ಮಂದಿರದಲ್ಲಿ ಕುರ್ಚಿ ಮೇಲೆ ಭಾರ ಹಾಕಿಕೊಳ್ಳುತ್ತಿರುತ್ತೇವೆ. ಆದರೆ ಈ ಬಸ್ಸಿನಲ್ಲಿ ಬಸ್ ಡ್ರೈವರ್ ನ ಮೇಲೆ ನಂಬಿಕೆ ಇಟ್ಟು ಕುಳಿತಿರುತ್ತೇವೆ. ಹಾಗಾಗಿ ಜೀವನದಲ್ಲಿ ಯಾವುದೇ ಕಾರ್ಯ ಆರಂಭಿಸಿದರೂ ಅದರಲ್ಲಿ ನಂಬಿಕೆ ಎನ್ನುವುದು ಬಹುಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಮೇಲೆ ನಮಗೆ ಭರವಸೆ ಇದ್ದರೆ ಮಾತ್ರ ನಾವು ನಮ್ಮ ಜೀವನದ ಹಾದಿಯಲ್ಲಿ ಚಲಿಸಿ, ಗುರಿ ಸೇರಲು ಸಾಧ್ಯ.
- ಚೈತನ್ಯ ಲಕ್ಷ್ಮೀ
ದ್ವಿತೀಯ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಮಹಾವಿದ್ಯಾಲಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ