ಶ್ರೀನಿವಾಸ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ "ಸರಳ ಮಾನಕ ಸಂಸ್ಕೃತ" ಕಾರ್ಯಾಗಾರ

Upayuktha
0



ಮಂಗಳೂರು: ಅತ್ಯಂತ ಪುರಾತನವಾಗಿದ್ದು ಆಧುನಿಕ ಕಾಲಕ್ಕೂ ಸಲ್ಲುವ ಭಾಷೆ ಸಂಸ್ಕೃತ ಭಾಷೆ. ನಮ್ಮ ದೇಶದ ಜ್ಞಾನ ಭಂಡಾರವೆಲ್ಲವೂ ಸಂಸ್ಕೃತದಲ್ಲಿ ನಿಹಿತವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ವೇದೋಪನಿಷತ್ತುಗಳೂ, ಪುರಾಣಗಳೂ ಮಾತ್ರವಲ್ಲದೆ ಆಯುರ್ವೇದ, ಖಗೋಳ ಶಾಸ್ತ್ರ, ಯೋಗ ಶಾಸ್ತ್ರ ಮೊದಲಾದ ಅನೇಕ ಶಾಸ್ತ್ರಗಳು ಈ ಭಾಷೆಯಲ್ಲಿಯೇ ಮೊದಲಿಗೆ ಪ್ರಕಟಗೊಂಡವು ಎಂಬುದನ್ನು ಎಲ್ಲರೂ ಅಂಗೀಕರಿಸುತ್ತಾರೆ ಹಾಗಾಗಿ ಭಾರತೀಯರಿಗೆ ಸಂಸ್ಕೃತದ ಮಹತ್ವದ ಬಗ್ಗೆ ಮತ್ತೆ ಹೇಳಬೇಕಾದ ಅಗತ್ಯವೇ ಇರುವುದಿಲ್ಲ. ಆದರೆ ಇಷ್ಟೊಂದು ಮಹತ್ವಪೂರ್ಣವಾದ ಸಂಸ್ಕೃತ ಭಾಷೆ ಕಬ್ಬಿಣದ ಕಡಲೆ. ಸಾಮಾನ್ಯರಿಗೆ ಅದು ನಿಲುಕುವಂತದ್ದಲ್ಲ ಎಂಬ ಭಾವನೆ ಅನೇಕರಲ್ಲಿದೆ. ಅದು ಸುಳ್ಳು. ಸಂಸ್ಕೃತ ಇತರ ಭಾಷೆಗಳಷ್ಟೇ ಸರಳವೂ ಹೌದು. ಆ ಭಾಷೆಯಲ್ಲಿ ಮಾತನಾಡುವುದೂ ಸಾಧ್ಯ. ಇದು ಸರಳ ಮಾನಕ ಸಂಸ್ಕೃತದ ಬಳಕೆಯಿಂದ ಸಾಧ್ಯ. ಹಾಗಿದ್ದರೆ ಸರಳ ಮಾನಕ ಸಂಸ್ಕೃತ ಎಂದರೇನು? ಎಂಬ ವಿಷಯದ ಬಗ್ಗೆ ವಿಚಾರ ಮಾಡಲು, ಅದರ ಸ್ವರೂಪವನ್ನು ನಿರ್ಧರಿಸಲು ಕೇಂದ್ರ ಸರಕಾರವು ಭಾರತ ಸರ್ಕಾರದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರಾದ ನೀ. ಗೋಪಾಲಸ್ವಾಮಿಯವರ ಅಧ್ಯಕ್ಷತೆಯಲ್ಲಿ ಉಚ್ಚ ಸ್ತರದ ಸಮಿತಿಯೊಂದನ್ನು ರಚಿಸಿತ್ತು. ಸಂಸ್ಕೃತ ವಿಶ್ವವಿದ್ಯಾಲಯಗಳ ಕುಲಪತಿಗಳೂ, ಅನೇಕ ಶಿಕ್ಷಣ ತಜ್ಞರೂ ಸಮಿತಿಯ ಸದಸ್ಯರಾಗಿದ್ದರು. ಆ ಸಮಿತಿಯು ಈ ವಿಷಯದಲ್ಲಿ ಗಂಭೀರ ಅಧ್ಯಯನವನ್ನು ನಡೆಸಿ ಸರಳ ಮಾನಕ ಸಂಸ್ಕೃತದ ಸ್ವರೂಪವನ್ನು ನಿರ್ಧರಿಸಿ, ವರದಿಯೊಂದನ್ನು ಸಿದ್ಧಪಡಿಸಿ ಭಾರತ ಸರ್ಕಾರಕ್ಕೆ ಸಮರ್ಪಿಸಿತು. 


ನಾವು ಬಳಕೆ ಮಾಡಬೇಕಾಗಿರುವ ಸಂಸ್ಕೃತ ತುಂಬಾ ಸರಳವಾಗಿರಬೇಕು. ಅದು ವ್ಯಾಕರಣ ಶುದ್ಧವಾಗಿರಬೇಕು ಎಂಬ ತತ್ವವನ್ನು ಮುಖ್ಯವಾಗಿ ತಿಳಿಸುವ ಈ ವರದಿಯನ್ನು ಮೊದಲು ಸಂಸ್ಕೃತ ಬಲ್ಲವರ ನಡುವೆ ಪ್ರಚಾರಪಡಿಸಬೇಕಾದ ಅಗತ್ಯವಿದೆ. ಅದಕ್ಕೆಂದೇ ದಿನಾಂಕ ೦೯.೧೨.೨೦೨೨ ರಂದು ಮಂಗಳೂರಿನ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಸಾಫ್ರೋನ್ ಹೊಟೇಲ್‌ನಲ್ಲಿ "ಸರಳ ಮಾನಕ ಸಂಸ್ಕೃತ" ಎಂಬ ಶೀರ್ಷಿಕೆಯಡಿ ಒಂದು ದಿನದ ಕಾರ್ಯಾಗಾರವೊಂದನ್ನು ಏರ್ಪಡಿಸಲಾಗಿದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಾಗಾರವನ್ನು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ಅವರು ಉದ್ಘಾಟಿಸಲಿದ್ದಾರೆ. ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾದ ಡಾ. ಹೆಚ್. ಆರ್. ವಿಶ್ವಾಸ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಶೃಂಗೇರಿಯ ರಾಜೀವ ಗಾಂಧಿ ಪರಿಸರದ ಹಿರಿಯ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ ಮೂರ್ತಿ, ಸಂಸ್ಕೃತ ಭಾರತಿಯ ಅಖಿಲ ಭಾರತೀಯ ಕಾರ್ಯದರ್ಶಿ ಡಾ. ನಂದಕುಮಾರ್ ಅವರೂ ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.  ಜಿಲ್ಲೆಯ ಎಲ್ಲ ಸಂಸ್ಕೃತ ಶಿಕ್ಷಕರೂ, ಪ್ರೌಢ ಶಾಲಾ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸಿ ಲಾಭಾನ್ವಿತರಾಗಬೇಕೆಂದು ನಿವೇದಿಸಲಾಗಿದೆ. 


ಶ್ರೀನಿವಾಸ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಪಿ. ಎಸ್. ಐತಾಳ್, ಕುಲ ಸಚಿವರಾದ ಡಾ. ಅನಿಲ್ ಕುಮಾರ್, ಅಭಿವೃದ್ಧಿ ಕುಲಸಚಿವರಾದ ಡಾ. ಅಜಯ್ ಕುಮಾರ್, ಸಂಸ್ಕೃತ ಭಾರತಿ ಮಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀ ಸತ್ಯನಾರಾಯಣ, ಹಾಗೂ ಕಾರ್ಯಾಗಾರದ ಸಂಯೋಜಕರಾದ ಡಾ. ಶಾಂತಲಾ ವಿಶ್ವಾಸ ಇವರುಗಳು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


 web counter


🗞️📲 ಉಪಾಯುಕ್ತ ನ್ಯೂಸ್ ವಾಟ್ಸಾಪ್ ಗುಂಪಿಗೆ ಸೇರಲು ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top