ಸಿಕ್ತಾರೆ ಅನ್ನೋದು ಕಲ್ಪನೆ, ಸಿಗಬೇಕು ಎನ್ನುವುದು ಯಾತನೆ, ಇಷ್ಟ ಆಗೋದು ಆಕರ್ಷಣೆ, ಸಿಗದಿದ್ದಾಗ ಆಗುವುದು ವೇದನೆ, ಸಿಗದಿದ್ರು ಅವರು ಚೆನ್ನಾಗಿರಲಿ ಎನ್ನುವುದು ಪ್ರೀತ್ಸೋ ಹೃದಯದ ಭಾವನೆ.
ಸಂತೋಷದ ಕ್ಷಣಗಳನ್ನು ಬೇಗ ಮರೆತು ಬಿಡಬಹುದು ಆದರೆ ನೋವುತಂದು ಕೊಟ್ಟ ಕ್ಷಣಗಳನ್ನು ಮರಿಯೋದು ಕಷ್ಟ ಮಾತ್ರವಲ್ಲ ಅಸಾಧ್ಯ ಕೂಡ. ಕೆಲವು ನೋವುಗಳು ಹಂಚಿಕೊಂಡ್ರೆ ಕಡಿಮೆ ಆಗುತ್ತೆ ಆದ್ರೆ ಇನ್ನು ಕೆಲವು ನೋವು ಹೇಳಿದಷ್ಟು ಹೆಚ್ಚಾಗುತ್ತೆ, ಕೆದಕಿದಷ್ಟು ಮನಸ್ಸು ಹುಚ್ಚಾಗುತ್ತೆ. ಅತ್ತರೆ ಅವಮಾನ, ಸುಮ್ಮನಿದ್ದರೆ ಅನುಮಾನ, ಹೇಳಿಕೊಳ್ಳಲು ಬಿಗುಮಾನ. ಹೇಳಲು ಆಗದೆ, ಇತ್ತ ಸುಮ್ಮನು ಇರದೆ ಮನಸು ಒಂಟಿತನ ಬಯಸಿ, ಅತ್ತು ಅತ್ತು ಮನಸಿನ ಭಾರ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿತು. ಮಾತು ಮರೆತು ಹೋಯಿತು, ಮನಸು ಮೌನವಾಯಿತು. ಮನಸಿನ ಭಾವನೆಗೆ ಪೆಟ್ಟು ಬಿದ್ದಾಗ ಮನಸು ಅದಾಗದೆ ಮೌನಿಯಾಯಿತು. ಬಾಯಿ ಬಿಟ್ಟು ಹೇಳಿದರು ಅರ್ಥ ಮಾಡಿಕೊಳ್ಳದ ಜನಕ್ಕೆ ಇನ್ನು ಈ ಮೌನ ಎಲ್ಲಿಂದ ಅರ್ಥವಾಗುತ್ತೆ ಅಲ್ವಾ? ನಮ್ಮ ದೇಹದ ಯಾವ ಭಾಗಕ್ಕೆ ನೋವಾದರೂ ವಾಸಿಪಡಿಸಬಹುದು, ಆದರೆ ಮನಸಿನ ನೋವು ವಾಸಿಪಡೆಸುವ ಮಾತ್ರೆ ಇನ್ನು ಬಂದಿಲ್ಲ.
ನಮ್ಮ ಮನಸಿಗೆ ತುಂಬಾ ನೋವಾಗಿದೆ ಅಂದ್ರೆ ಆ ನೋವಿಗೆ ಕಾರಣ ಖಂಡಿತ ನಾವು ತುಂಬಾ ಇಷ್ಟ ಪಟ್ಟ ವ್ಯಕ್ತಿನೇ ಆಗಿರ್ತಾರೆ. ಯಾಕೆಂದ್ರೆ ನಮ್ಮ ಮನಸಿನ ಹತ್ರ ಬರುವಷ್ಟು ಧೈರ್ಯ ಅವರಿಗೆ ಬಿಟ್ಟು ಮತ್ಯಾರಿಗೆ ಇರುತ್ತೆ ಹೇಳಿ. ಅವರ ಪ್ರೀತಿಯಲಿ ನಾವೆಷ್ಟು ಮುಳಗಿರ್ತಿವಿ ಅಂದ್ರೆ ಅವರನ್ನ ಬಿಟ್ಟು ಬೇರೆಯವರ ಮಾತು ಮನಸಿಗೆ ತಗೋಣಲ್ಲ, ಅವರನ್ನ ಬಿಟ್ಟು ಬೇರೇನೂ ಕಾಣಲ್ಲ, ನಮ್ಮ ಇಂದಿನ ದಿನ ಹೇಗಿರುತ್ತೆ ಅನ್ನೋದು ಅವರಾಡುವ ಮಾತುಗಳ ಮೇಲೆ. ಕಣ್ ತಗೆದು ಅವರ ಗುಡ್ ಮಾರ್ನಿಂಗ್ ಸಂದೇಶ ನೋಡಿದಾಗಲೇ ನಮಗೆ ಬೆಳಗಾಗೋದು. ಅಕಸ್ಮಾತ್ ಒಂದು ದಿನ ಬರದಿದ್ರೂ ಆ ದಿನ ಶೂನ್ಯ. ಕತ್ತಲು, ಮನಸಲ್ಲಿ ನೂರೆಂಟು ಗೊಂದಲು. ನಾನು ಬೇಸರವಾದ್ನ ? ನನ್ನ ಮೇಲೆ ಪ್ರೀತಿ ಕಡಿಮೆ ಆಯ್ತಾ? ನಾನಿನ್ನು ಬೇಡ್ವಾ ಅವರಿಗೆ? ನಾನಿಲ್ಲದಿದ್ದರೂ ಅವರು ಆರಾಮಾಗೆ ಇರ್ತಾರ ಅನ್ನೋ ನೂರೆಂಟು ಪ್ರಶ್ನೆ. ಕೇವಲ ಒಂದು ಸಂದೇಶ ತಪ್ಪಿದರೆ ಎಷ್ಟೊಂದು ಹದಗೆಡುವ ಈ ಮನಸಿಗೆ ಮುಖ ಮುಖಿ ಬಂದು ನೀನು ನನಗಿನ್ನೂ ಬೇಡ, ನನ್ನ ದಾರಿ ಬೇರೆ ನಿನ್ನದು ಬೇರೆ ಎಂದಾಗ ಈ ಹೃಯದ ಬಡಿತ ಅದೆಷ್ಟು ಜೋರಾಗಿರಬೇಕು ನೀವೇ ಯೋಚಿಸಿ. ಬಾಡಿಗೆ ಮನೆಯನ್ನು ಎಷ್ಟು ಸಿಂಗರಿಸಿದರು ಅದು ನಮದಾಗಲ್ಲ, ಒಂದಲ್ಲ ಒಂದು ದಿನ ನಾವು ಅಲ್ಲಿಂದ ಹೋಗಲೇ ಬೇಕು, ಹಾಗೆ ನಮ್ಮವರಲ್ಲದವರನ್ನ ನಾವೆಷ್ಟು ಪ್ರೀತಿಸಿದರು ಅಷ್ಟೇ ಒಂದಲ್ಲ ಒಂದು ದಿನ ದೂರ ಆಗಲೇ ಬೇಕು.
ಅದೆಷ್ಟು ಚಂದ ಇತ್ತು ಆ ದಿನ. ನಾ ಉಂಡರೆ ನಿನ್ನ ಊಟ, ನಾ ಮಲಗಿದ ಮೇಲೆ ನಿನ್ನ ನಿದ್ದೆ, ನಿಂಗೆ ಬೇಜಾರ್ ಆದ್ರೆ ನಿಂಗೆ ನೋವು, ನನಗೆ ದುಃಖ ಆದ್ರೆ ನಿಂಗೆ ಕಣ್ಣೀರು. ನಿನ್ನ ಜೊತೆ ಕಳೆದ ಪ್ರತಿಯೊಂದು ಕ್ಷಣ ಖುಷಿ ನೀಡುತಿತ್ತು, ಆ ನಿನ್ನ ಕಾಳಜಿ, ಪ್ರೀತಿಗೆ ನನ್ನ ತಲೆ ಬಾಗುತಿತ್ತು, ಆದರೆ ತುಂಬಾ ದಿನ ಅಷ್ಟು ಅದೃಷ್ಟ ನಾನು ಹೊತ್ತು ತಂದಿರಲಿಲ್ಲ. ಆ ದೇವರು ಲೈಫ್ ಟೈಮ್ ಆಫರ್ ಕೊಡ್ಲಿಲ್ಲ ನನಗೆ ಸ್ವಲ್ಪ ದಿನಕ್ಕೆ ಮಾತ್ರ ಕೊಟ್ಟಿದ್ದ ಅನ್ಸುತ್ತೆ.
ನೀ ಕೊಟ್ಟ ಸಂತೋಷ ಮಾಯವಾಯಿತು ಆದ್ರೆ ನೀ ಕೊಟ್ಟ ನೋವು ಮಾತ್ರ ನನ್ನ ಮನದಲಿ ನೆನಪಾಗಿ ಹಾಗೆ ಉಳಿಯಿತು.
ಕಳೆದು ಹೋದ ವಸ್ತು ಅಥವಾ ವ್ಯಕ್ತಿನಾ ಹಿಡುಕಬಹುದು ಆದ್ರೆ ಉದ್ದೇಶಪೂರಕವಾಗಿ ಬಿಟ್ಟು ಹೋದ್ರೆ ಹುಡುಕಲು ಸಾಧ್ಯವೇ? ನನ್ನ ಪ್ರೀತಿ ಭಾರವಾಯಿತಾ ಅಥವಾ ಹಿಂಸೆ ನೀಡಿತಾ ಗೊತ್ತಿಲ್ಲ ಬರುತ್ತೀನಿ ಅಂದು ಹೋದವರು ಹಿಂದಿರುಗಿ ಬರಲೇ ಇಲ್ಲ. ನನ್ನ ಹೃದಯದಲಿ ಬರುವಾಗ ಒಳಗೆ ಬರಲೇ ಎಂದು ಕೇಳದೆ ಬಂದೇ, ಹೋಗುವಾಗಲಾದ್ರೂ ಒಂದು ಮಾತು ಹೇಳಿ ಹೋಗಬಹುದಿತ್ತಲ್ಲ. ಪ್ರೀತಿನಾ ಹೃದಯದಿಂದ ಮಾಡು ಅದೆಷ್ಟೇ ನೋವು ಕೊಟ್ರು ಮರಳಿ ಬರುವೆ, ಅಧಿಕಾರದಿಂದ ಮಾಡಿದರೆ ನನ್ನ ಪ್ರೀತಿ ಶಾಶ್ವತವಾಗಿ ನೀ ಕಳೆದು ಕೊಳ್ಳುವೆ. ಈಗ್ಲೂ ಒಮ್ಮೆ ನನ್ನ ಹೆಸರಿಟ್ಟು ಕರಿ, ನೀ ಇದ್ದಲ್ಲೇ ಓಡಿ ಬರುವೆ.
ರಾತ್ರಿ ಮಲಗಿದರೆ ಬೆಳಗ್ಗೆ ಎಳುತ್ತೇವೆ ಎನ್ನುವ ಗ್ಯಾರಂಟಿ ಇಲ್ಲದ ಬದುಕುಗಳು ನಮ್ಮವು ಪ್ರಾಣ ಇದ್ದರೇನು, ಹೋದರೇನು ನಿಯತ್ತಾಗಿ ಒಂದು ದಿನ ಪ್ರೀತಿ ಇಂದ ಇದ್ದು ಬಿಡು ಸಾಕು. ಯಾರೋ ಹೇಳಿದ್ರು ಜೀವಕ್ಕೆ ಜೀವಾ ಕೋಡೋ ಪ್ರೀತಿನಾ ಕಳ್ಕೊಬೇಡಿ, ಅವರೊಟ್ಟಿಗೆ ಕೊನೆವರೆಗೂ ಇರಿ ಅಂತ, ಅದಕ್ಕೆ ನಾನು ನಿಮ್ಮನ್ನು ಆಯ್ಕೆ ಮಾಡಿಕೊಂಡೆ ಸೋ ಜೀವಾ ಇರುವವರೆಗೂ ನಾ ನಿನ್ನ ಬಿಟ್ಟು ಕೊಡಲ್ಲ, ಮರೆಯದಿರಿ ಈ ನನ್ನ ಪ್ರೀತಿನಾ. ಉಸಿರು ಇರೋವರೆಗೂ, ಎದೆಯ ಬಡಿತದ ಸದ್ದು ಸುಮ್ಮನಾಗುವರೆಗೂ, ಕಣ್ಣು ರೆಪ್ಪೆ ಮುಚ್ಚುವರೆಗೂ ನಿಮ್ಮ ಜೊತೆಗಿರುವೆ ಪ್ರಾಮಿಸ್ ಬಂಗಾರ.
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ