ಅತಿಯಾದ ರೂಪ ಸೀತೆಗೆ ಮುಳುವಾಯಿತು, ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು, ಅತಿಯಾದ ದಾನ ಬಲಿಯನ್ನು ನಾಶ ಮಾಡಿತು ಎಂಬಂತೆ ಅತಿ ಯಾವದು ಒಳ್ಳೆಯದಲ್ಲ. Too much is too bad ಅಲ್ವಾ..? ಅವಶ್ಯಕತೆಗಿಂತ ಹೆಚ್ಚಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆ ಇಲ್ಲ. ಅತಿಯಾಗಿ ಪ್ರಾಮಾಣಿಕರಾಗಿರುವುದು ಒಳ್ಳೆಯದು ಅಲ್ಲ, ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ.
ಪ್ರೀತಿ ಒಂದು ಅದ್ಭುತ ಸಂಬಂಧ. ಪ್ರೀತಿ ಹೇಗೆ ಹುಟ್ಟುತ್ತದೆ ಅದು ಯಾರಿಗೂ ಗೊತ್ತಿಲ್ಲ. ಇದನ್ನ ತಿಳಿದು ಕೊಳ್ಳುವ ಕುತೂಹಲ ಯಾರಿಗೆ ತಾನೆ ಇರುವುದಿಲ್ಲ ಹೇಳಿ. ನಮ್ಮ ಜೀವನದಲ್ಲಿ ಪ್ರೀತಿ ಯಾವ ಸಮಯದಲ್ಲಾದರೂ ಆಗಬಹುದು, ಯಾವ ವ್ಯಕ್ತಿಯ ಜೊತೆಗಾದರೂ ಆಗಬಹುದು, ಯಾವ ಸ್ಥಳದಲ್ಲಿ ಆದರೂ ಆಗಬಹುದು. ಪ್ರೀತಿ ಎಂದರೆ ಹಾಗೆ ಅದೊಂದು ಸುಮಧುರ ಭಾವ. ಬೆಳಕಿಲ್ಲದ ದಾರಿಯಲ್ಲಿ ನಡೆಯುವೆ ಆದರೆ ಪ್ರೀತಿಯೇ ಇಲ್ಲದ ದಾರಿಯಲ್ಲಿ ನಡೆಯಲು ಆಗೋದಿಲ್ಲ. ಪ್ರೀತಿ ಅತ್ಯಂತ ಸುಂದರವಾದ ಭಾವನೆ. ಪ್ರೀತಿಯಲ್ಲಿದ್ದಾಗ, ಜಗತ್ತನ್ನೇ ಮರೆಯುತ್ತೇವೆ. ಅದೇನೋ ಅಂತಾರಲ್ಲ ಪ್ರೀತಿ ಕುರುಡು ಪ್ರೇಮಿ ಕುರುಡು ಅಂತ ಹಾಗೆ. ಪ್ರೀತಿ ಒಂಥರಾ ಮ್ಯಾಜಿಕ್ ಇದ್ದಹಾಗೆ. ನಾವು ಇಷ್ಟ ಪಟ್ಟ ಹೃದಯ ನಮ್ಮ ಜೊತೆ ಇದ್ರೆ ಅದೇ ಸ್ವರ್ಗ. ಪ್ರೀತಿ ಸುಳ್ಳು ಅಂತ ಹಲವಾರು ಡೈಲಾಗ್ಗಳು ನೀವು ಕೂಡ ಕೇಳಿರುತ್ತೀರಿ. ಪ್ರೇಮಲೋಕದಲ್ಲಿ ತೇಲಾಡುವ ಪ್ರೇಮಿಗಳನ್ನೂ ಕೂಡ ನೋಡಿರುತ್ತೀರಿ. ಮತ್ತೊಂದೆಡೆ ಪ್ರೀತಿ ಮಧುರ ತ್ಯಾಗ ಅಮರ ಎನ್ನುವ ನಿಜ ಪ್ರೇಮಿಗಳು ಕೂಡ ನಿಮ್ಮ ಕಣ್ಮುಂದೆ ಕಂಡಿರಬಹುದು. ಪ್ರೀತಿ ಸುಳ್ಳಲ್ಲ ಆದ್ರೆ ಪ್ರೀತಿಸಿದವರು ಮೋಸ ಮಾಡಿದಾಗ ಅದು ಸುಳ್ಳಾಗಿ ಕಾಣುತ್ತೆ ಅಷ್ಟೆ.
ಪ್ರೀತಿಸಿದವರೆಲ್ಲ ಕೊನೆವರೆಗೂ ಜೊತೆ ಇರ್ತಾರೆ ಅಂತ ಹೇಳೋಕಾಗುತ್ತಾ ? ಇಲ್ವಲ್ಲಾ.. ಹಾಗಂತ ಅಲ್ಲಿಗೆ ಜೀವನ ಮುಗಿಯಲ್ಲ. ಇಷ್ಟ ಪಟ್ಟಿದ್ದು ಸಿಗದಿದ್ದಾಗ ಸಿಕ್ಕಿದನ್ನೇ ಇಷ್ಟ ಪಡ್ಬೇಕು. ಜೊತೆಗಿದ್ದ ಜೀವ ನಮ್ಮ ಜೊತೆ ಇಲ್ಲ ಅಂದಾಗ ನೋವು ಸಹಜ. ಆದ್ರೆ ಅದರಲ್ಲೇ ಕುಳಿತುಕೊಂಡ್ರೆ ಜೀವನ ಮುಂದೆ ಸಾಗುವದಾದ್ರು ಹೇಗೆ. ನಾವು ವಾಸ್ತವವನ್ನು ಒಪ್ಪಿಕೊಂಡು ಅದರಿಂದ ಹೊರಬರಬೇಕು. ಬಂದೇ ಬರುತ್ತಾರೇ ಎಂಬ ಸುಳ್ಳು ಭರವಸೆಗೆ ಅಂಟಿಕೊಳ್ಳಬಾರದು. ಆದಷ್ಟು ಅದ್ರಿಂದ ಹೊರ ಬರುವ ಚಟುವಟಿಕೆಯಲ್ಲಿ ಮುಳುಗಬೇಕು.
ಅವರಿಲ್ಲ ಎಂದು ಮೂಲೆಯಲ್ಲಿ ಕುಳಿತುಕೊಳ್ಳುವ ಬದಲು ತಂದೆ, ತಾಯಿ, ಸ್ನೇಹಿತರು, ಸಂಬಂಧಿಕರ ಜೊತೆ ಆದಷ್ಟು ಬೆರೆಯಲು ನೋಡಿ. ಸಾಧ್ಯವಾದ್ರೆ ನಿಮ್ಮನ್ನು ಯಾರು ಪ್ರೀತಿಸುತ್ತಾರೋ ಅವರೊಂದಿಗೆ ಸಮಯ ಕಳೆಯಿರಿ. ಯಾಕಂದ್ರೆ ಅವರ ಮಾತು ನಿಮ್ಮ ನೋವುಗಳಿಗೆ ಔಷದಿಯಂತೆ ಕೆಲಸ ಮಾಡುತ್ತದೆ. ಅವರಿಗೆ ನೀವೇನು ಅಂತ ಗೊತ್ತಿರುತ್ತದೆ. ಅವರು ನಿಮ್ಮ ಹಳೆಯ ಘಟನೆಗಳನ್ನು ನೆನೆಪಿಸಿ ಹೀಯಾಳಿಸುವುದಿಲ್ಲ. ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ, ಸಾಧಿಸಿದ ಮೇಲೆ ವಿಶೇಷವಾಗಿ ನೋಡುತ್ತಾರೆ. ಆದ್ದರಿಂದ ನೀವು ಏನು ಅಂದುಕೊಂಡಿದ್ದೀರೊ ಅದೇ ಮಾಡಿ ಯಾರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
ಅಪಘಾತದಲ್ಲಿ ಕೈ, ಕಾಲು ಮುರಿದುಕೊಂಡವರು ನಮ್ಮ ದೇಹದ ಒಂದು ಭಾಗ ಇಲ್ಲ ಎಂದು ಯಾವತ್ತೂ ಮೂಲೆಯಲ್ಲಿ ಕೂರುವುದಿಲ್ಲ. ಇನ್ನೊಂದು ಮಾರ್ಗವನ್ನು ಹುಡುಕುತ್ತಾರೆ. ಅಂತದ್ರಲ್ಲಿ ನಿನ್ನೆ ಮೊನ್ನೆ ನಮ್ ಜೀವನದಲ್ಲಿ ಬಂದು ಹೃದಯಕ್ಕೆ ಚೂರು ಗಾಯ ಮಾಡಿದಕ್ಕೆ ಆಕಾಶವೇ ತಲೆಮೇಲೆ ಬಿದ್ದಂತೆ ಕೂಡುವುದು ಯಾವ ನ್ಯಾಯ. ಹೌದು ಹೃದಯಕ್ಕೆ ನೋವಾದರೆ ಅದು ಸರಿಹೋಗಲು ಸಾಕಷ್ಟು ಸಮಯಬೇಕು. ಹಾಗಂತ ಜೀವನಕ್ಕೆ ಫುಲ್ ಸ್ಟಾಪ್ ಹಾಕೋದಲ್ಲ. ಹಂತ ಹಂತವಾಗಿ ಸರಿ ಹೋಗಲು ಪ್ರಯತಿಸಬೇಕು. ಪ್ರಯತ್ನದಿಂದ ಎಲ್ಲಾ ಸಾಧ್ಯವಾಗುತ್ತದೆ. ಯಾರಿಲ್ಲ ಅಂದ್ರೆ ಏನಂತೆ ನಿಮ್ಮೊಂದಿಗೆ ನೀವು ಇದ್ದಿರಾ ನಿಮ್ಮನ್ನು ನಿಮ್ಮಷ್ಟು ಯಾರೂ ಪ್ರೀತಿಸಲಾರರು ಎಂದು ಖುಷಿ ಪಟ್ಟು ಮುನ್ನಡೆಯಿರಿ.
ನಮ್ಮ ನಿರ್ಧಾರ ಯಾವಾಗಲು ಸರಿಯಾಗೇ ಇರುತ್ತೆ ಅಂತ ಹೇಳೋಕಾಗಲ್ಲ. ಕೆಲವೊಮ್ಮೆ ನಾವು ತಪ್ಪಾದ ಹೃದಯನ್ನು ಆಯ್ಕೆಮಾಡಿಕೊಂಡು ಅದೇ ನಮ್ಮದು ಅಂತ ಬಲವಾಗಿ ನಂಬಿ ಮೋಸ ಹೋಗುತ್ತೇವೆ. ನಾವು ಎಷ್ಟೇ ಪ್ರೀತಿ ಮಾಡಿದ್ರೂ ಸಹ ಅವರು ಅದನ್ನ ಟೈಮ್ ಪಾಸ್ ಆಗಿಯೇ ತೆಗೆದುಕೊಳ್ಳುತ್ತಾರೆ. ಪ್ರೀತಿಯಲ್ಲಿ ಹೆಚ್ಚು ಕಡಿಮೆ ಎನ್ನುವುದೇ ಇಲ್ಲ. ಪ್ರೀತಿ ಸಮುದ್ರದಷ್ಟಿರಬೇಕು ಅದರಲ್ಲಿ ನಂಬಿಕೆ ಉಪ್ಪಿನಂತಿರಬೇಕು. ಏಕಂದ್ರೆ ಯಾವತ್ತೂ ಸಮುದ್ರದಿಂದ ಉಪ್ಪನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರೀತಿ ನಿಜವಾಗಿದ್ರೆ ಅದನ್ನ ಯಾರು ದೂರ ಮಾಡಲು ಸದ್ಯವಿಲ್ಲ. ನಿಮ್ಮ ಪ್ರೀತಿ ದೂರ ಆಗಿದೆ ಅಂದ್ರೆ ಅದರ ಅರ್ಥ ನಿಮಗೆ ಸಿಕ್ಕ ಪ್ರೀತಿ ಸುಳ್ಳು. ಬಿಟ್ಟಾಕಿ ಅಂತವರನ್ನ. ಎಷ್ಟೋ ವರ್ಷಗಳಿಂದ ಪ್ರೀತಿಸಿದ ವ್ಯಕ್ತಿಯನ್ನು ಮರಿಯುವದು ಸುಲಭವಲ್ಲ. ಆ ನೋವು ಬರೀ ಆ ನೋವನ್ನು ಅನುಭವಿಸಿದ ವ್ಯಕ್ತಿಗಷ್ಟೇ ಗೊತ್ತಿರುತ್ತದೆ. ಆ ವ್ಯಕ್ತಿಯ ಭಾವನಾತ್ಮಕ ಮತ್ತು ಮಾನಸಿಕ ನೋವು ಹಿಂಸೆ ಹೇಳ ತೀರದು. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರೀತಿ ಪಾತ್ರರಿಂದ ದೂರವಾಗಿರುತ್ತಾರೆ. ಆದರೆ ಪ್ರೀತಿಸಿದವರು ದೂರ ಆದಾಗ ಆಗುವ ನೋವು ಶತ್ರುವಿಗೂ ಬೇಡ. ಅಷ್ಟು ಕೆಟ್ಟ ನೋವು ಅದು ಅಲ್ವಾ?
ಸಮಯಕ್ಕೆ ಎಲ್ಲಾ ಗಾಯಗಳನ್ನು ಗುಣಪಡಿಸುವ ಶಕ್ತಿ ಇದೆ. ಸಮಯ ಕಳೆದಂತೆ ಹಳೆ ಗಾಯಗಳು ಹೇಗೆ ಮಾಸುತ್ತವೆಯೋ, ಹಾಗೆಯೇ ಮನಸ್ಸಿಗಾಗಿರುವ ಗಾಯವೂ ಮಾಸುತ್ತದೆ. ನಿಮಗೆ ಈ ಘಟನೆಯು ಒಂದು ಪಾಠವನ್ನು ಕಲಿಸಿಕೊಡುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ