ಮಂಗಳೂರು ವಿವಿ: 'ಅಭಿಜಾತ ಕನ್ನಡ ಸಾಹಿತ್ಯದ ಇಂದ್ರಚಾಪ' ಐದು ಸಂಪುಟಗಳ ಅನಾವರಣ
ಮಂಗಳಗಂಗೋತ್ರಿ: ಕನ್ನಡದ ಅಭಿಜಾತ ಪರಂಪರೆ ಐತಿಹಾಸಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಮೌಲ್ಯಾತ್ಮಕವಾಗಿ ಮಹತ್ವದ ವಿಚಾರಗಳನ್ನು ಹೊಂದಿವೆ. ಇವುಗಳ ಅಧ್ಯಯನದ ಬಗ್ಗೆ ಉನ್ನತ ಶಿಕ್ಷಣ ಸಂದರ್ಭದಲ್ಲಿ ಅಸಡ್ಡೆ ಸಲ್ಲದು ಎಂದು ಹಿರಿಯ ವಿದ್ವಾಂಸ ಪ್ರೊ. ಹಂಪ ನಾಗರಾಜಯ್ಯ ಹೇಳಿದರು
ಅವರು ಮಂಗಳೂರು ವಿಶ್ವವಿದ್ಯಾನಿಲಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸಪ್ನ ಬುಕ್ ಹೌಸ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿವಿಯ ಸೆನೆಟ್ ಸಭಾಂಗಣದಲ್ಲಿ ನಡೆದ ಆಚಾರ್ಯ ಹಂಪನಾ ವಿರಚಿತ ಇಂಗ್ಲಿಷ್ ಗ್ರಂಥ 'ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ' ಕರ್ನಾಟಕದ ಅಭಿಜಾತ ಸಾಹಿತ್ಯದ ಇಂದ್ರ ಚಾಪ ಕೃತಿಯ ಐದು ಸಂಪುಟಗಳ ಬಿಡುಗಡೆ ಮತ್ತು ಅನುಸಂಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಕೃತಿಯಲ್ಲಿ ಆರು ಶತಮಾನಗಳ ಪಾಕೃತ ಕವಿಗಳ, ಕಾವ್ಯಗಳ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನಪಟ್ಟಿದ್ದೇನೆ. ಶತಮಾನದಿಂದ ಶತಮಾನಕ್ಕೆ ವಿಕಸನವನ್ನು ತೋರಿಸುವ ಶಾಸನಗಳ ಬಗೆಗೆ ವಿವರಿಸಲಾಗಿದೆ. ಯುವ ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಇದು ತಲುಪಬೇಕು. ಕನ್ನಡಕ್ಕೆ ಜಗತ್ತಿನ ಶ್ರೇಷ್ಠ ಭಂಡಾರಗಳಲ್ಲಿ ಸ್ಥಾನವಿಲ್ಲ. ನಮ್ಮದೇ ಸಮಸ್ಯೆ ಯಾಕೆಂದರೆ ಜಗತ್ತಿಗೆ ವಿಸ್ತರಿಸುವಲ್ಲಿ ವಿಫಲವಾಗಿದೆ. ಕನ್ನಡಕ್ಕೆ ಸಾರ್ವಕಾಲಿಕ ಮೌಲ್ಯವನ್ನು ಒದಗಿಸಿಕೊಡುವುದು ನಮ್ಮೆಲ್ಲರ ನೈತಿಕ ಜವಾಬ್ಧಾರಿಯಾಗಿದೆ. ಹೊಸಗನ್ನಡಕ್ಕೆ ಹಳೆಗನ್ನಡವು ಸ್ಪೂರ್ತಿಯಾಗಿದೆ. ಬೇರು ಗಟ್ಟಿಯಾಗಿದ್ದರೆ ಹೊಸ ಚಿಗುರು ಕೂಡಾ ಫಲಪ್ರದವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಬಿ.ಎ ವಿವೇಕ ರೈ ಅವರು ಮಾತನಾಡಿ, ಕನ್ನಡದ ಅಭಿಜಾತ ಪರಂಪರೆಯು ಅನ್ಯಭಾಷೆಗಳಿಗೆ ಹೋಗಿಲ್ಲ. ಈವರೆಗೆ ಪಂಪಭಾರತ ಒಂದು ಭಾಷೆಗೂ ಅನುವಾದವಾಗಿಲ್ಲ. ಹಂಪನಾ ಅವರ ಈ ಐದು ಸಂಪುಟಗಳು ಜಾಗತಿಕ ಮಟ್ಟದಲ್ಲಿ ಕನ್ನಡ ಬಗ್ಗೆ ಗೌರವ ಹುಟ್ಟುವಂತೆ ಮಾಡಬಲ್ಲುದು ಎಂದರು.
ಉದ್ಘಾಟನೆ ನೆರವೇರಿಸಿ ಸಂದೇಶ ನೀಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರು ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ, ಇದೊಂದು ಸಾಂಸ್ಕೃತಿಕ ಸೇತುವೆಯಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇರುವುದನ್ನು ಜಾಗತಿಕ ಮಟ್ಟಕ್ಕೆ ತೋರಿಸಿದೆ. ಕನ್ನಡದ ಶಕ್ತಿ, ಸತ್ವವನ್ನು ಇಡೀ ಜಗತ್ತಿಗೆ ತೋರಿಸಿಕೊಡುವಲ್ಲಿ ಈ ಕೃತಿಯು ಪ್ರಮುಖವಾಗಿದೆ ಎಂದರು.
ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಹಿ.ಚಿ ಬೋರಲಿಂಗಯ್ಯ, ಮುಂಬೈ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕಿ ಡಾ. ಪೂರ್ಣಿಮಾ ಶೆಟ್ಟಿ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಸಿ ನಾಗಣ್ಣ, ಮೈಸೂರು ವಿಶ್ವವಿದ್ಯಾನಿಲಯದ ಡಾ. ಎಚ್.ವಿ ನಾಗರಾಜ್ ರಾವ್, ಡಾ. ಎಂ ಜಿ ಮಂಜುನಾಥ್ ಮಾತನಾಡಿದರು.
ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ವಿಭಾಗದ ಪ್ರೊ.ಅಭಯ ಕುಮಾರ್, ಡಾ.ನಾಗಪ್ಪ ಗೌಡ ಅತಿಥಿಗಳನ್ನು ಗೌರವಿಸಿದರು. ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ.ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ