ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ 66 ನೇ ಮಹಾ ಪರಿನಿರ್ವಾಣ ದಿನವಾದ ಡಿಸೆಂಬರ್ 6 (ಮಂಗಳವಾರ) ರಂದು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ರಾಜ್ಯಪಾಲ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಪ್ರತಿಮೆ ಅನಾವರಣ ಮಾಡಲಿದ್ದಾರೆ.
ಈ ಕುರಿತು ಸೋಮವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಮಂಗಳೂರು ವಿಶ್ವವಿದ್ಯಾನಿಲಯದ ಬಹುಕಾಲದ ಕನಸಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ರವರ ಪ್ರತಿಮೆ ಅನಾವರಣ ಕಾರ್ಯ ಅವರ 66 ನೇ ಮಹಾ ಪರಿನಿರ್ವಾಣ ದಿನದಂದೇ, ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೂಲಕ ಕೈಗೂಡುತ್ತಿದೆ. ಸುಮಾರು 9 ಅಡಿ ಎತ್ತರದ ಕಂಚಿನ ಪ್ರತಿಮೆ 600 ಕೆಜಿಗೂ ಹೆಚ್ಚು ತೂಕವಿರಲಿದೆ. ಸುಮಾರು 14. 30 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರತಿಮೆಯನ್ನು ಕ್ಯಾಂಪಸ್‌ನ ವಿಜ್ಞಾನ ಸಂಕೀರ್ಣದ ಮುಂಭಾಗದಲ್ಲಿರುವ ಹೂದೋಟದ ಬಳಿ ಸ್ಥಾಪಿಸಲಾಗಿದೆ, ಎಂದರು.
ಮಂಗಳವಾರ ಸಾಯಂಕಾಲ 5.00 ಗಂಟೆಗೆ ಪ್ರತಿಮೆಯ ಅನಾವರಣ ಕಾರ್ಯ ನೆರವೇರಲಿದ್ದು ನಂತರ ಡಾ. ಬಿ.ಆರ್. ಅಂಬೇಡ್ಕರ್ರವರ 66ನೇ ಮಹಾ ಪರಿನಿರ್ವಾಣ ಕಾರ್ಯಕ್ರಮವನ್ನು ಕ್ಯಾಂಪಸ್ನ ಮಂಗಳಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರ,ಮದ ಅಧ್ಯಕ್ಷತೆಯನ್ನು ಗೌರವಾನ್ವಿತ ರಾಜ್ಯಪಾಲರು ವಹಿಸಲಿದ್ದು, ಮಹಾತ್ಮ ಗಾಂಧಿ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾನಿಲಯ, ದುರ್ಗ್, ಛತ್ತೀಸ್ಘರ್ ಕುಲಪತಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯ ಸಮಾಜ ವಿಜ್ಞಾನಗಳು, ಮಾಹೊ ಇಲ್ಲಿನ ಸಂಸ್ಥಾಪಕ ಕುಲಪತಿ ಪ್ರೊ. ಆರ್. ಎಸ್. ಕುರೀಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಪರಿನಿರ್ವಾಣ ದಿನದ ಬಗ್ಗೆ ಮಾತನಾಡಲಿದ್ದಾರೆ, ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಉಪಸ್ಥಿತರಿರಲಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿ, ಪ್ರತಿಮೆ ಅನಾವರಣ ಕಾರ್ಯ ನಿಯಮ ಪ್ರಕಾರವೇ ನಡೆಯುತ್ತಿದ್ದು ಯಾವುದೇ ಅಸಮಾಧಾನಕ್ಕೆ ಕಾರಣವಿಲ್ಲ. ಸಂಬಂಧಪಟ್ಟವರಿಗೂ ಈ ವಿಷಯವನ್ನು ಮನದಟ್ಟು ಮಾಡಿದ್ದು ವಿಷಯ ಮನವರಿಕೆಯಾಗಿದೆ, ಎಂದರು.
ಸ್ವಾಮಿ ವಿವೇಕಾನಂದರ ಪ್ರತಿಮೆ, ಸಂಸ್ಕೃತಿಕ ನೀತಿ ಸದ್ಯದಲ್ಲೇ:
“ಜನವರಿ 12, 2023 ರಂದು ವಿವಿಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಮೂಲಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡುವ ಉದ್ದೇಶವಿದೆ. ಮುಂದಿನ ಫೆಬ್ರವರಿಯಲ್ಲಿ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿಯನ್ನು ಬಿಡುಗಡೆ ಮಾಡಲಾಗುವುದು. ಒಂದೆರಡು ದಿನಗಳಲ್ಲಿ ನೀತಿಯ ಕುರಿತು ಮಾಹಿತಿಯನ್ನು ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಕ್ರೀಡಾ ನೀತಿಯಂತೆಯೇ, ಕರಾವಳಿ ಭಾಗದ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿಹಿಡಿಯಲು ಹಾಗೂ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ನೆರವಾಗಲಿದೆ,” ಎಂದು ಕುಲಪತಿ ತಿಳಿಸಿದರು:
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಸಿ.ಕೆ. ಕಿಶೋರ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ವಿಶ್ವನಾಥ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಪಿ. ಉಮೇಶ್ ಚಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ