ಡಿಜಿಟಲ್‌ ಮಾಧ್ಯಮಗಳಿಗೆ ಮಾನ್ಯತೆ: ಮೊದಲ ಹಂತದಲ್ಲಿ ಉಪಯುಕ್ತ.ಕಾಂ ಸೇರಿದಂತೆ 356 ಡಿಜಿಟಲ್ ಮಾಧ್ಯಮಗಳಿಗೆ ಸರಕಾರದ ಮಾನ್ಯತೆ

Upayuktha
0





ಮಂಗಳೂರು: ದೇಶದಲ್ಲಿನ ಡಿಜಿಟಲ್‌ ಮಾಧ್ಯಮ ಪ್ರಕಾಶಕರಿಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಮಹತ್ವದ ಹೆಜ್ಜೆ ಇರಿಸಿದ್ದು, ಉಪಯುಕ್ತ.ಕಾಂ ಸೇರಿದಂತೆ 356 ಡಿಜಿಟಲ್‌ ಮಾಧ್ಯಮಗಳಿಗೆ ಮಾನ್ಯತೆ ನೀಡಿದೆ.


ಆಧುನಿಕ ಸಂಪರ್ಕ ಕ್ರಾಂತಿಗಳಿಂದಾಗಿ ಮಾಧ್ಯಮ ರಂಗದಲ್ಲಿ ಆಗುತ್ತಿರುವ ಮಿಂಚಿನ ಬದಲಾವಣೆಗಳಿಗೆ ಅನುಗುಣವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್‌ ಮಾಧ್ಯಮಗಳಿಗೆ ಸರಕಾರದ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ರೂಪರೇಷೆಗಳನ್ನು ಸಿದ್ಧಪಡಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಕೇಂದ್ರ ಸರಕಾರ ಅಧಿಕಾರ ನೀಡಿತ್ತು.


ಅದರನ್ವಯ ಸಚಿವಾಲಯವು ಮೊದಲ ಹಂತದಲ್ಲಿ ಡಿಜಿಟಲ್ ಮಾಧ್ಯಮಗಳ ಪ್ರಕಾಶಕರಿಂದ ನಿರ್ದಿಷ್ಟ ನಮೂನೆಯಲ್ಲಿ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಿತ್ತು. ಈ ಮಾಹಿತಿಗಳನ್ನು ನಿಯಮಾನುಸಾರ ಪರಿಶೀಲಿಸಿ ಸ್ವೀಕೃತಿ ಪತ್ರಗಳನ್ನು ರವಾನಿಸಿತ್ತು.


ಡಿಜಿಟಲ್ ಮಾಧ್ಯಮಗಳ ನೋಂದಣಿಗೆ ಇರುವ ಮುಖ್ಯ ನಿಬಂಧನೆ ಎಂದರೆ, ಮಾಧ್ಯಮದ ವಿರುದ್ಧ ಅಥವಾ ಪ್ರಕಾಶಕರ ವಿರುದ್ಧ ದೂರುಗಳು ಬಂದಲ್ಲಿ ಅದನ್ನು ಬಗೆಹರಿಸುವ ಕಾರ್ಯವಿಧಾನ ಹೇಗೆ ಎಂಬುದಾಗಿತ್ತು. ಅದಕ್ಕಾಗಿ ಮೊದಲ ಹಂತದಲ್ಲಿ ಮಾಧ್ಯಮದ ಸಂಪಾದಕ ಅಥವಾ ಆಡಳಿತ ಮಂಡಳಿಯೇ ಹೊಣೆಗಾರನಾಗಿದ್ದು, ಅಲ್ಲಿ ದೂರುಗಳು ಇತ್ಯರ್ಥವಾಗದೇ ಹೋದರೆ ಅದಕ್ಕಿಂತ ಮೇಲಿನ ಹಂತದಲ್ಲಿ ಪ್ರಕಾಶಕರ ಸಂಘಟನೆಯಲ್ಲಿ ಅದು ಇತ್ಯರ್ಥವಾಗಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಂದು ಡಿಜಿಟಲ್ ಮಾಧ್ಯಮವೂ ದೂರು ಪರಿಹಾರ ಸಂಸ್ಥೆಯ ಸದಸ್ಯನಾಗಿರಬೇಕು ಎಂಬುದು ನಿಯಮ. ಅಲ್ಲಿಯೂ ದೂರುಗಳು ಇತ್ಯರ್ಥವಾಗದಿದ್ದರೆ ನ್ಯಾಯಾಲಯದ ಹಂತ ಹೇಗೂ ಇದ್ದೇ ಇರುತ್ತದೆ. ಇದು ಡಿಜಿಟಲ್ ಮಾಧ್ಯಮಗಳ ನೋಂದಣಿಗೆ ಇರುವ ಪ್ರಮುಖ ನಿಬಂಧನೆಯ ಸ್ಥೂಲ ಚಿತ್ರಣ.


ಈ ದಿಸೆಯಲ್ಲಿ ಸಚಿವಾಲಯದ ಕರೆಗೆ ಸ್ಪಂದಿಸಿ ನೂರಾರು ಡಿಜಿಟಲ್ ಮಾಧ್ಯಮ ಪ್ರಕಾಶಕರು ತಮ್ಮ ಮಾಹಿತಿಗಳನ್ನು ಇಲಾಖೆಗೆ ಸಲ್ಲಿಸಿದ್ದರು. ಅವುಗಳನ್ನೆಲ್ಲ ಪರಿಶೀಲಿಸಿ, ದೂರು ದುಮ್ಮಾನ ಪರಿಹಾರ ಸಂಸ್ಥೆಗಳ ಅರ್ಜಿಗಳನ್ನೂ ಪರಿಶೀಲಿಸಿ, ಅಂತಹ ಸಂಸ್ಥೆಗಳಿಗೆ ಅವುಗಳ ಸದಸ್ಯ ಪ್ರಕಾಶಕರ ಸಹಿತ ಇದೀಗ ಮಾನ್ಯತೆ ನೀಡಿರುವುದಾಗಿ ಪ್ರಕಟಿಸಲಾಗಿದೆ.


ವಾರ್ತಾ ಮತ್ತ ಪ್ರಸಾರ ಸಚಿವಾಲಯದ ಅಧಿಕೃತ ಪೋರ್ಟಲ್‌ನಲ್ಲಿ ಈ ವಿವರಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿವೆ.


ಮೇಲ್ನೋಟಕ್ಕೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಹಲವು ಸಾವಿರಗಳ ಲೆಕ್ಕದಲ್ಲಿ ಮಾಧ್ಯಮಗಳಿವೆ. ಅಲ್ಲದೆ ದಿನಕ್ಕೊಂದರಂತೆ ಹೊಸದು ಹುಟ್ಟಿಕೊಳ್ಳುತ್ತಲೂ ಇವೆ. ಅದರೆ ಇವ್ಯಾವುದನ್ನೂ ನಿರ್ವಹಿಸಲು (ಗವರ್ನಿಂಗ್‌ ಕೋಡ್‌) ಯಾವುದೇ ನಿಯಮಗಳು ಇಲ್ಲದ ಕಾರಣ ಯಾರು ಬೇಕಾದರೂ ಡಿಜಿಟಲ್ ಮಾಧ್ಯಮಗಳನ್ನು ಆರಂಭಿಸಬಹುದಾಗಿತ್ತು. ಸುಳ್ಳು ಸುದ್ದಿಗಳು, ವೈಯಕ್ತಿಕ ಮಾನಹಾನಿಕರ ಪ್ರಕಟಣೆಗಳು, ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಚಾರಗಳು ಇಂತಹ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು, ಜನಸಾಮಾನ್ಯ ಓದುಗರಿಗೆ ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಯಲಾಗದ ಗೊಂದಲದ ಪರಿಸ್ಥಿತಿ ಉದ್ಭವವಾಗಿತ್ತು. ಇಂಥವನ್ನೆಲ್ಲ ನಿವಾರಿಸಿ, ಜೊಳ್ಳು ಮತ್ತು ಕಾಳುಗಳನ್ನು ಪ್ರತ್ಯೇಕಿಸುವ ಸಲುವಾಗಿ ಸಚಿವಾಲಯ ಡಿಜಿಟಲ್ ಮಾಧ್ಯಮಗಳಿಗೆ ನೀತಿ ಸಂಹಿತೆ ಬಿಡುಗಡೆ ಮಾಡಿತ್ತು.


ನೀತಿ ಸಂಹಿತೆಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಲು ಬದ್ಧತೆ ವ್ಯಕ್ತಪಡಿಸಿರುವ ಮಾಧ್ಯಮಗಳಿಗಷ್ಟೇ ಮಾನ್ಯತೆ ನೀಡಲಾಗಿದೆ. 


ದೇಶದಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಳಜಿಯಿಂದ ಕಾರ್ಯನಿರ್ವಹಿಸುವ ನೂರಾರು ಡಿಜಿಟಲ್‌ ಮಾಧ್ಯಮಗಳಿದ್ದರೂ ಎಲ್ಲದಕ್ಕೂ ಅತೀತರೆಂಬಂತೆ ವರ್ತಿಸುತ್ತಿದ್ದ ಬಹುಸಂಖ್ಯೆಯ ಡಿಜಿಟಲ್ ಮಾಧ್ಯಮಗಳಿಂದಾಗಿ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿತ್ತು. ಅವುಗಲಳಿಗೆಲ್ಲ ಪರಿಹಾರವೆಂಬಂತೆ ಸರಕಾರ ಈಗ ನೀಡಿರುವ ಮಾನ್ಯತೆ ಮತ್ತು ಮಾನ್ಯತೆ ನೀಡಲು ವಿಧಿಸಿರುವ ಪ್ರಕ್ರಿಯೆಗಳು ಡಿಜಿಟಲ್ ಮಾದ್ಯಮಗಳ ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆಯಾಗಿದೆ.


ಪ್ರಸ್ತುತ ಸನ್ನಿವೇಶದಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿರುವ ಮತ್ತು ಕ್ಷಿಪ್ರ ತಲುಪುವಿಕೆ (ರೀಚ್‌) ಇರುವ ಡಿಜಿಟಲ್ ಮಾಧ್ಯಮಗಳಿಗೆ ಜಾಹೀರಾತು ಆದಾಯ ಅತ್ಯಲ್ಪ ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯವಾಗಿದೆ. ಅದಕ್ಕೆಲ್ಲ ವಿಶ್ವಾಸಾರ್ಹತೆಯ ಕೊರತೆ ಕಾರಣವಾಗಿತ್ತು. ಆದರೀಗ ಸರಕಾರದ ಮಾನ್ಯತೆ ಪಡೆದಿರುವ ಮಾಧ್ಯಮಗಳಿಗೆ ವಿಶ್ವಾಸಾರ್ಹತೆಯ ವಿಚಾರದಲ್ಲಿ ಅಧಿಕೃತ ಮುದ್ರೆ ದೊರೆತಿದ್ದು, ಜಾಹೀರಾತುದಾರರು ಕಡಿಮೆ ವೆಚ್ಚದಲ್ಲಿ ಅತಿಹೆಚ್ಚು ಜನರನ್ನು ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವ (ಮಾನ್ಯತೆ ಪಡೆದ) ಡಿಜಿಟಲ್ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.


ವಿಶ್ವಾಸಾರ್ಹವಾದ ಡಿಜಿಟಲ್ ಮಾಧ್ಯಮಗಳು ಬೆಳೆಯಬೇಕಾದರೆ ಆರ್ಥಿಕವಾಗಿ ಬೆಂಬಲ ಮತ್ತು ಭದ್ರತೆ ಬೇಕೇಬೇಕು.  ಇದುವರೆಗೂ ಹೇಗೇಗೋ ಹುಟ್ಟಿಕೊಂಡು ನಾಲ್ಕುದಿನ ಗದ್ದಲವೆಬ್ಬಿಸಿ ಮರೆಯಾಗುತ್ತಿದ್ದ ಮಾದರಿಯ ಡಿಜಿಟಲ್ ಮಾಧ್ಯಮಗಳು ಇನ್ನು ಮುಂದಕ್ಕೆ ಹುಟ್ಟಿಕೊಳ್ಳುವುದು ಸುಲಭವಲ್ಲ. ಆ ಮಾದರಿಯವು ಈಗಲೂ ಕಣದಲ್ಲಿ ಉಳಿದಿದ್ದರೆ ಸರಕಾರದ ನಿಯಮಗಳಿಗೆ ಬದ್ಧರಾಗಿ ನೋಂದಣಿ ಮೂಲಕ ಮಾನ್ಯತೆ ಪಡೆದುಕೊಂಡು ಕಾರ್ಯ ನಿರ್ವಹಿಸಬೇಕು, ಇಲ್ಲವೇ ಸ್ಥಗಿತಗೊಳ್ಳಬೇಕು. 


ಡಿಜಿಟಲ್‌ ಮಾಧ್ಯಮಗಳಿಗೆ ಜಾಹೀರಾತುದಾರರು ಸುಲಭವಾಗಿ ಬರುವಂತಾಗಲು ಮತ್ತು ಸರಕಾರೀ ಜಾಹೀರಾತು ಬೆಂಬಲ ಕೂಡ ಲಭ್ಯವಾಗುವ ನಿಟ್ಟಿನಲ್ಲಿ ಈ ನೋಂದಣಿ ಮತ್ತು ಮಾನ್ಯತೆಯ ಪ್ರಕ್ರಿಯೆ ಸ್ವಾಗತಾರ್ಹ ಬೆಳವಣಿಗೆ.


ಪ್ರಸ್ತುತ ಸರಕಾರ ನಿಗದಿಪಡಿಸಿದ ಗ್ರಿವೆನ್ಸ್‌ ರಿಡ್ರೆಸಲ್‌ (ದೂರು ಪರಿಹಾರ) ವ್ಯವಸ್ಥೆಯಡಿ 9 ಡಿಜಿಟಲ್‌ ಮಾಧ್ಯಮ ಸಂಘಟನೆಗಳು ನೋಂದಣಿಯಾಗಿವೆ. 

ಅವುಗಳೆಂದರೆ:


1. Print and Digital Media Association (SRB for News Publishers)


2. Digital Media Publishers & News Portal Grievance Council of India (SRB for News Publishers)


3. Working Journalist Media Council (SRB for News Publishers)


4. DIGIPUB News India Foundation (SRB for News Publishers)


5. Registration of Media9 Digital Media Federation as self-regulatory body under Information Technology (Intermediary Guidelines and Digital Media Ethics Code) Rules, 2021


6. Confederation of Online Media (lndia) - Indian Digital Publishers Content Grievance Council (SRB for News Publishers)


7. WJAI- Web Journalists Standards Authority (SRB for News Publishers)


8. NBF- Professional News Broadcasting Standards Authority (SRB for News Publishers)


9.IAMAI- Digital Publisher Content Grievances Council (SRB for OTT Platforms)


ಇವುಗಳ ಪೈಕಿ PADMA ಸಂಘಟನೆಯ ಸದಸ್ಯನಾಗಿ ಉಪಯುಕ್ತ.ಕಾಂ (ಉಪಯುಕ್ತ ನ್ಯೂಸ್‌) ಬಳಗಕ್ಕೆ ಮಾನ್ಯತೆ ದೊರೆತಿದೆ ಎಂದು ನಮ್ಮ ಎಲ್ಲ ಓದುಗರು, ಹಿತೈಷಿಗಳಿಗೆ ತಿಳಿಸಲು ಸಂತೋಷಪಡುತ್ತೇವೆ. ಇದಕ್ಕೂ ಮೊದಲೇ MSME ಅಡಿಯಲ್ಲಿ ಉಪಯುಕ್ತ ನ್ಯೂಸ್‌ ಬಳಗ ನೋಂದಣಿಯಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top