ಮೂಡುಬಿದಿರೆ : ಅಕ್ಟೋಬರ್ 2022 ರಲ್ಲಿ ನಡೆದ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಎಕೌಂಟೆಟ್ (ಯು.ಎಸ್) ಪಾರ್ಟ್ 1 ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಉತ್ತೀರ್ಣರಾಗಿದ್ದಾರೆ.
ಅಂತರಾಷ್ಟ್ರೀಯ ಕೋರ್ಸ್‍ಗಳಾದ ಎ.ಸಿ.ಸಿ.ಎ (ಯು.ಕೆ) ಮತ್ತು ಸಿ.ಎಂ.ಎ (ಯು.ಎಸ್) ತರಗತಿಗಳನ್ನು 2019-2020 ರಿಂದ ಆಳ್ವಾಸ್ ಕಾಲೇಜಿನಲ್ಲಿ ಪ್ರಾರಂಭಿಸಿದ್ದು, ವೃತ್ತಿಪರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕೀರ್ತಿ ಶಂಕರ್ 400/500 (80%) ಅಂಕ ಪಡೆದು ಈ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಗೊಳಿಸಿದ್ದಾರೆ.
ಸಿ.ಎಂ.ಎ (ಯು.ಎಸ್) ಪಾರ್ಟ್-2 ಪರೀಕ್ಷೆಯನ್ನು 360/500 (72%) ಫಲಿತಾಂಶದೊಂದಿಗೆ ಕಳೆದ 2021 ರ ಸೆಪ್ಟೆಂಬರ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಸಿ.ಎಂ.ಎ (ಯು.ಎಸ್) ಎರಡು ವರ್ಷಗಳ ತರಬೇತಿಯ ಕೋರ್ಸ್ ಆಗಿದ್ದು, ಆಳ್ವಾಸ್ ಕಾಲೇಜಿನಿಂದ ಎರಡೂ ಪತ್ರಿಕೆಗಳನ್ನು ಒಂದೇ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಸಿ.ಎಂ.ಎ (ಯು.ಎಸ್) ಪದವಿಯನ್ನು ಯು.ಎಸ್.ಎ.ಯಿಂದ ತಗೊಳುತ್ತಿರುವ ಮೊದಲ ವಿದ್ಯಾರ್ಥಿನಿಯೆಂಬ ಹೆಮ್ಮೆಗೆ ಕೀರ್ತಿ ಶಂಕರ್ ಪಾತ್ರರಾಗಿದ್ದಾರೆ.
ಒಟ್ಟು 50 ವಿದ್ಯಾರ್ಥಿಗಳು ಸಿ.ಎಂ.ಎ (ಯು.ಎಸ್) ಕೋರ್ಸ್ ತರಬೇತಿ ಪಡೆಯುತ್ತಿದ್ದು, 45 ವಿದ್ಯಾರ್ಥಿಗಳು ಬಿ.ಕಾಂ. ಜತೆಗೆ ಸಿ.ಎಂ.ಎ ಮತ್ತು 5 ವಿದ್ಯಾರ್ಥಿಗಳು ಬಿ.ಬಿ.ಎ. ಜತೆಗೆ ಸಿ.ಎಂ.ಎ ಅಧ್ಯಯನ ಮಾಡುತ್ತಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ್ ಕೆ.ಜಿ. ಹಾಗೂ ಸಿ.ಎಂ.ಎ (ಯು.ಎಸ್) ಕೋರ್ಸ್ ಸಂಯೋಜಕಿ ಶಿಲ್ಪಾ ಭಟ್ ಎನ್.ಹೆಚ್. ಅಭಿನಂದಿಸಿದ್ದಾರೆ.