ಶಿಸ್ತು, ಸಂಯಮವಿದ್ದರೆ ಏಡ್ಸ್‌ ದೂರ

Upayuktha
0

ಹಿಂದಿನ ಕಾಲದಿಂದ ಇಂದಿನ ವರೆಗೂ ಅನೇಕ ಸಾಂಕ್ರಾಮಿಕ ರೋಗಗಳು ಮನುಕುಲವನ್ನು ಕಾಡುತ್ತಿದೆ. ವರ್ಷಕೊದಂತೆ ಹೊಸ ಹೊಸ ರೋಗಗಳು ಮಾನವ ಕುಲಕ್ಕೆ ಸಾವಲಾಗಿ ಬರುತ್ತಿರಿವದು ಎಲ್ರಿಗೂ ಗೊತ್ತಿದೆ. ಪ್ಲೇಗ್, ಸಿಡುಬು, ಕಾಲರಾ, ಕ್ಷಯ, ಕ್ಯಾನ್ಸರ್, ಮಲೇರಿಯಾ, ಡೆಂಗಿ ಹಾಗೂ ಇತ್ತೀಚೆಗೆ ಭಯ ಹುಟ್ಟಿಸುತ್ತಿರುವ, ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದ ಕೊರೋನಾ ಮಹಾಮಾರಿ ಸೇರಿ ಇತ್ಯಾದಿ ಕಾಯಿಲೆಗಳು ನಮ್ಮನ್ನ ಬೆಚ್ಚಿ ಬೀಳಿಸಿ ಜೀವನದ ಜೊತೆ ಆಟವಾಡುತ್ತಿವೆ. ಈ ಕಾಯಿಲೆಗಳು ಮಾನವನ ಅಸ್ಥಿತ್ವಕ್ಕೆ ದೊಡ್ಡ ಪೆಟ್ಟು ನೀಡುವಂತವು. ಇವೆಲ್ಲದರ ಜೊತೆಗೆ ಇವುಗಳಲ್ಲಿ ತುಂಬಾ ಹೃದಯ ವಿದ್ರಾವಕ ಮತ್ತು ಮಾರಕ ರೋಗವೆಂದರೆ ಏಡ್ಸ್. ಹೆಸರು ಕೇಳಿದರೇ ಬೆಚ್ಚಿ ಬೀಳುವ ಏಡ್ಸ್ ಅಷ್ಟು ಸುಲಭವಾಗಿ ಎಲ್ರಿಗೂ ಗುಣವಾಗದು. ಮಾರಣಾಂತಿಕ ಕಾಯಿಲೆ ಎಂದೇ ಇದನ್ನು ಸಮಾಜ ಕಾಣುತ್ತದೆ. 


ಆಧುನಿ ಶೈಲಿಗೆ ಸಿಲುಕಿ ಈಗಿನ ಯುವಪೀಳಿಗೆ ಜೀವನಮೌಲ್ಯಗಳನ್ನು ಗಾಳಿಗೆ ತೂರುತಿದ್ದಾರೆ. ತಮ್ಮ ಮುಂದಿನ ಉಜ್ವಲ ಭವಿಷ್ಯಕಿಂತ ಕ್ಷಣಿಕ ಸುಖಕ್ಕೆ ಮನುಷ್ಯರು ಮಾರು ಹೋಗುತ್ತಿದ್ದಾರೆ. ಬಾಳಿ ಬದುಕಬೇಕಾದ ಜೀವನವನ್ನು ಕೈಯ್ಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬದುಕಿರಿ, ಬದುಕಲು ಬಿಡಿ ಎಂಬ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ. ತಾನು ಬದುಕುವುದಲ್ಲದೆ ಇನ್ನೊಬ್ಬರನ್ನೂ ಬದುಕಲು ಬಿಡುವುದು ಮಾನವೀಯತೆಯ ಜೊತೆಗೆ ಕರ್ತವ್ಯವನ್ನೂ ಸೂಚಿಸುತ್ತದೆ. ಆದರೆ ಕೆಲವರು ತಮ್ಮ ಆರೋಗ್ಯಕ್ಕೆ ಸಂಚಕಾರ ತಂದುಕೊಳ್ಳುವುದಲ್ಲದೆ ತಮ್ಮನ್ನು ನಂಬಿದವರನ್ನು ಅಭದ್ರತೆ ಭಾವ ಉಂಟಾಗುವಂತೆ ಮಾಡುತ್ತಾರೆ. ತಮ್ಮ ಕೆಟ್ಟ ಚಟಕ್ಕೆ ತಾವು ಅನುಭವಿಸುವದಲ್ಲದೆ ತಮ್ಮನ್ನು ನಂಬಿದವರಿಗೆ, ಹೆಂಡತಿ ಮತ್ತು ಕರುಳ ಬಳ್ಳಿಗಳಿಗೂ ರೋಗ ಹರಡುಸುತಿದ್ದಾರೆ. ಮಾನವನ ನಡವಳಿಕೆಗೆ ಸಂಬಂಧಪಟ್ಟ ಕಾಯಿಲೆ ಎಂದರೆ ಅದು ಏಡ್ಸ್. ಇದು ಹರಡುವಿಕೆಗೆ ಹಲವಾರು ಕಾರಣಗಳಿದ್ದರು ಸಂಯಮದಿಂದ ಇದ್ದಲ್ಲಿ ಏಡ್ಸ್ ಹತ್ತಿರ ಸುಳಿಯುವುದಿಲ್ಲ.


ಪಾಶ್ಚಿಮಾತ್ಯ ನಾಗರೀಕತೆಯು ನಮ್ಮ ದೇಶವನ್ನು ಹೇಗೆ ತನ್ನತ್ತ ಆಕರ್ಷಿಸಿತು ಎಂದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ದೇಶದ ಯುವಕರು ಅದರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ ಮತ್ತು ತಮ್ಮ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯ ಹಿಂದೆ ಓಡುತ್ತಾರೆ. ಮನುಷ್ಯನು ಸಾಮಾನ್ಯವಾಗಿ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ. ಇಲ್ಲಿ ಚಟ ಎಂದರೆ ಇಷ್ಟು ದೊರಕಿದರೆ ಅಷ್ಟು ಬೇಕೆಂಬ ಆಸೆ. ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ. ಆ ವಸ್ತುವಿನ ಸೇವನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆಲ್ಲಾ ಒಗ್ಗಿ ಹೋಗಿರುತ್ತವೆ. ಇಂದು ಇಂಥ ಅನೇಕ ಚಟಗಳಿಗೆ ನಮ್ಮ ಸಮಾಜವು ಬಲಿಯಾಗಿದೆ. ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹಾಗಾಗಿ ಈ ಮಾದಕ ವಸ್ತುಗಳಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.


ಇಂದಿನ ಯುವ ಪೀಳಿಗೆ ಮೋಜು ಮಾಸ್ತಿಗೆ ಎಂದೇ ಅಲ್ಲಿ ಇಲ್ಲಿ ಸುತ್ತಾಡುತ್ತಾ ಇರುತ್ತಾರೆ. ಹೆಚ್ಚಾಗಿ ಹೋಗುವ ಸ್ಥಳ ಎಂದರೆ ಅದುವೇ ಗೋವಾ. ಸಮುದ್ರ ತೀರ ಹಾಗೂ ಮದ್ಯದ ವ್ಯಾಪಾರದಿಂದಲೇ ಗೋವಾ ರಾಜ್ಯ ಪ್ರವಾಸೋದ್ಯಮದಲ್ಲಿ ಮುಂದೆ ಸಾಗಿದೆ. ಗೋವಾ ಪ್ರವಾಸ ಮಾಡುವದೆಂದರೆ ಈಗಿನ ಯುವಪೀಳಿಗೆಗೆ ಒಂದು ಪ್ಯಾಷನ್ ಆಗಿದೆ. ಅಲ್ಲಿಯ ಅದ್ಬುತ ಬೀಚ್‌ಗಳು, ಓಪನ್ ಪ್ಲೇಸ್ ಅಲ್ಲಿ ತುಂಡು ಬಟ್ಟೆ ಹಾಕಿ ಸಮುದ್ರದ ದಂಡೆಯಲ್ಲಿ ಉರಳಾಡುತ್ತಿರುವ ವಿದೇಶಿ ಹುಡುಗಿಯರು, ಎಲ್ಲಿಬೇಕಲ್ಲಿ ಮದ್ಯ ಸೇವನೆ ಮಾಡಿ ಬಿಸಾಡಿರುವ ಬಾಟಲಿಗಳು, ಮಾದಕ ವಸ್ತುಗಳು ಗೋವಾ ಎಂದಕ್ಷಣ ಕಣ್ಣು ಮುಂದೆ ಬರುವುದೇ ಇದೆಲ್ಲ. ಸಮುದ್ರದ ದಂಡೆಯಲ್ಲಿ ಮೋಜು ಮಸ್ತಿ ಮಾಡಲೆಂದೆ ಗೋವಕ್ಕೆ ಹೋಗುವ ಇಂದಿನ ಯುವ ಜನತೆ ಅಲ್ಲಿಯ ಸಂಸ್ಕೃತಿಗೆ, ಅಲ್ಲಿಯ ಜನರ ಜೀವನ ಶೈಲಿಯನ್ನು ತಾವು ಅಳವಡಿಸಿಕೊಂಡು, ಅಲ್ಲಿಯ ಹೆಣ್ಣು ಮಕ್ಕಳಿಗೆ ಆಕರ್ಷತವಾಗಿ, ಅಲ್ಲಿಯ ಹೈಟೆಕ್ ವೇಶ್ಯವಾಟಿಕೆ ಚಟಕ್ಕೆ ಬಲಿಯಾಗಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿ ಏಡ್ಸ್ ಎಂಬ ಮಹಾಮಾರಿ ರೋಗವನ್ನು ಹೊತ್ತುಕೊಂಡು ತಮ್ಮ ಊರುಗಳಿಗೆ ಹಿಂತಿರುಗುತ್ತಾರೆ. ನಂತರ ತಮ್ಮ ಹೆಂಡತಿ ಮಕ್ಕಳಿಗೂ ಈ ರೋಗ ಹರಡಿಸುತ್ತಾರೆ. ನಂತರ ಸಮಾಜದಲ್ಲಿ ತಲೆ ಎತ್ತಿ ಓಡಾಡಲಾರದೆ ಅದೆಷ್ಟೋ ಜನ ಆತ್ಮಹತ್ತೆ ಮಾಡಿಕೊಳ್ಳುತ್ತಾರೆ. ಇದೆಲ್ಲ ಗೋವಾ ಸರ್ಕಾರಕ್ಕೆ ತಿಳಿದಿದ್ದರೂ ಕೂಡ ನೋಡಿ ನೋಡದಂತೆ ಕೂತಿದೆ. ಏಕೆಂದರೆ ಇದರಿಂದ ಅನೇಕ ರೀತಿಯ ಲಾಭ ಗೋವಾ ಸರ್ಕಾರ ಪಡೆಯುತ್ತಿದೆ. ಈಗ ಇದರ ನಿಯಂತ್ರಣ ಸರ್ಕಾರದಿಂದಲೂ ತಪ್ಪಿ ಹೋಗಿದೆ. ಈಗ ಮೊದಲಿನಂತೆ ಎಲ್ಲಿಬೇಕಲ್ಲಿ ಮದ್ಯ ಸೇವನೆ ಮಾಡುವಂತಿಲ್ಲ ಮಾಡಿದವರಿಗೆ ದಂಡ ಕೂಡ ವಿಧಿಸಲಾಗುತ್ತೆ ಆದರೆ ಇನ್ನು ಯಾವ ನಿಯಂತ್ರಣವೂ ಸರ್ಕಾರದಿಂದಲೂ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ಮದ್ಯದ ಬೆಲೆ ಗೋವಾದಲ್ಲಿ ತುಂಬಾ ಕಡಿಮೆ. ಅದಕ್ಕಾಗಿ ಗೋವಾದಿಂದ ಅಕ್ರಮವಾಗಿ ಕರ್ನಾಟಕಕ್ಕೆ ಸರಬರಾಜಾ ಮಾಡಿಕೊಳ್ಳುತ್ತಾರೆ. ಆದರೆ ಕೆಲ ಅಪಾಯಕರ ಬ್ರ್ಯಾಂಡ್‌ಗಳ ಮದ್ಯ ಸೇವನೆಯಿಂದ, ಮದ್ಯಗಳಲ್ಲಿ ಕೆಟ್ಟ, ಕಲ್ಮಶ ಪದಾರ್ಥಗಳು ಸೇರಿದ ಮದ್ಯ ಸೇವನೆ ಇಂದ ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಗೋವಾದಿಂದ ಪ್ರತಿದಿನ ಅದೆಷ್ಟೋ ಮದ್ಯ ಅಕ್ರಮವಾಗಿ ಕರ್ನಾಟಕಕ್ಕೆ ಸೇರುತ್ತದೆ. ಅಬಕಾರಿ ಇಲಾಖೆ ಇದನ್ನು ತಡೆಗಟ್ಟಲು ಅದೆಷ್ಟೇ ಪ್ರಯತ್ನ ಪಡುತ್ತಿದ್ದರೂ ಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ.


ಅನಾದಿ ಕಾಲದಿಂದಲೂ ಮಾದಕ ವಸ್ತುಗಳನ್ನು ಜನರು ಬಳಸುತ್ತಿಬಹುದು ಅವು ಕೇವಲ ಮೋಜು ಅಥವಾ ಸಾಮಾಜಿಕ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದವು ಆದರೆ ಈಗ ಗೋವಕ್ಕೆ ಹೋಗುವದೇ ಇಂತ ಚಟುವಟಿಕೆ ನಡೆಸಲು.


ಇನ್ನು ಗೋವಾದಲ್ಲಿ ಸುಲಭವಾಗಿ ಸಿಗುವ ಹಲವು ವಿಧದ ಅಮಲುಗಳಾದ ಮದ್ಯ, ಸಿಗರೇಟ್, ಅಫೀಮು, ಗಂಜಾ, ಹೆರಾಯಿನ್, ಕೊಕೇನ್, ಚರಸ್ ಇವು ಎಂತವರನ್ನು ದಾರಿ ತಪ್ಪಿಸುತ್ತದೆ. ಒಬ್ಬ ವ್ಯಕ್ತಿಯು ಇಂತಹ ಕೆಟ್ಟ ಚಟಗಳಲ್ಲಿ ಬಿದ್ದರೆ ಅದು ಅವನನ್ನು ಗೆದ್ದಲಿನಂತೆ ಒಳಗಿನಿಂದ ಟೊಳ್ಳು ಮಾಡುತ್ತದೆ. ಇದು ಅವನನ್ನು ದೈಹಿಕವಾಗಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ. ವಿಷಕಾರಿ ಮತ್ತು ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯನ್ನು ವಿನಾಶದತ್ತ ಕೊಂಡೊಯ್ಯುತ್ತದೆ. ಇತ್ತೀಚಿನ ದಿನಗಳಲ್ಲಿ, ಚಿಕ್ಕ ಮಕ್ಕಳು ಕೂಡ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ, ಯುವಕರ ಜೊತೆಗೆ ಹಿರಿಯರು ಕೂಡ ಅದರ ಹಿಡಿತದಲ್ಲಿದ್ದಾರೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಇದು ಯುವ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತಿದೆ. ಗೋವಕ್ಕೆ ಕೇವಲ ಯುವ ಪೀಳಿಗೆಯ ಹುಡುಗರು ಮಾತ್ರವಲ್ಲ ಹುಡುಗಿಯರು ಕೂಡ ಹೋಗುತ್ತಾರೆ. ಹೀಗೆ ಮಾದಕ ವಸ್ತುಗಳ ಸೇವನೆ ಮಾಡಿ ಮಾಡಬಾರದನ್ನು ಮಾಡಿ ಬರಬಾರದ ರೋಗಗಳನ್ನು ಬರೆಸಿಕೊಂಡು ಬರುತ್ತಾರೆ.


ಆರೋಗ್ಯ ಭಾಗ್ಯ ಎಂಬ ಹಿರಿಯರು ಹೇಳಿದ ಹಳೆ ಮಾತು ಮರಿಯೋ ಹಾಗಿಲ್ಲ. ಆರೋಗ್ಯದ ಮುಂದೆ ಇನ್ಯಾವ ಭಾಗ್ಯ ದೊಡ್ಡದಲ್ಲ. ಕೆಲವು ರೋಗಗಳು, ಅಪಘಾತಗಳ ನಮ್ಮ ಗಮನಕ್ಕೆ ಬಾರದೆ ಹರಾಡುತ್ತವೆ. ಅವುಗಳ ಕೈಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗದಿರಬಹುದು. ಆದರೆ ಕೆಲವು ರೋಗಗಳನ್ನು ತಡೆಯಲು ಖಂಡಿತ ಸಾಧ್ಯವಿದೆ. ಅದರಲ್ಲಿ ಮುಖ್ಯವಾದದ್ದು ಏಡ್ಸ್. ಈ ಸೋಂಕನ್ನು ಪಡೆದುಕೊಳ್ಳದೇ ಇರಲು ಹಲವಾರು ರೀತಿಯ ದಾರಿಗಳಿವೆ. ಇದು ನಮ್ಮ ಕೈಯಲ್ಲೇ ಇರುವಂತ ರೋಗ, ಇದನ್ನು ತಡೆಗಟ್ಟುವದು ನಮ್ಮ ನಿಯಂತ್ರಣದಲ್ಲೇ ಇದೆ. ನಡತೆ, ಸಂಯಮ, ಅನೈತಿಕ ಸಂಬಂಧ ದಿಂದ ದೂರ, ಕೆಟ್ಟ ಚಟದಿಂದ ದೂರ ಇರುವುದು ಇವೆಲ್ಲ ಸುಲಭ ಮಾರ್ಗಗಳು. ಒಮ್ಮೆ ಏಡ್ಸ್ ರೋಗಕ್ಕೆ ಬಲಿಯಾದವರು ತಮ್ಮ ಮುಂದಿನ ಬದುಕಿನ ಕನಸಿಗೆ ಫುಲ್ ಸ್ಟಾಪ್ ಇಡಬೇಕಾಗುತ್ತೆ. ತಮ್ಮ ಕುಟುಂಬದವರಿಗಾಗಿ ಜೀವನದುದ್ದಕ್ಕೂ ನಡೆಸುವ ಹೋರಾಟದ ಯಶಸ್ಸಿಗೆ ನಾಂದಿ ಹಾಡಬೇಕಾಗುತ್ತೆ.


ಈ ರೋಗ ತಡೆಯುವ ಒಳ್ಳೆಯ ಮಾರ್ಗವೆಂದರೆ ಜನರಲ್ಲಿ ಏಡ್ಸ್ ಬರದಂತೆ, ತಡೆಯುವಂತೆ, ಅದರಿಂದಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವದು ಮಾತ್ರ. ಸ್ವಂತ ತಾವೇ ಅರಿವು ಮತ್ತು ನಂಬಿಕೆಗಳಿಂದಲೇ ಮನಸ್ಸನ್ನು ಬದಲಾಯಿಸಿ ಕೊಳ್ಳುವಂತೆ ಮಾಡುವದರಿಂದ ತುಂಬಾ ಸುಲಭವಾಗಿ ಈ ರೋಗವನ್ನು ತಡೆಯಲು ಸಾಧ್ಯ. ಹಾಗೆ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆ, ಮೂಢನಂಬಿಕೆ ಮತ್ತು ಆತಂಕಗಳು ನಿವಾರಣೆಯಾಗಬೇಕು. ಏಡ್ಸ್‌ ರೋಗದ ಬಗ್ಗೆ ಮಾಹಿತಿ ನೀಡುವುದರ ಮೂಲಕ ರೋಗ ಹರಡುವುದನ್ನು ಹೇಗೆ ತಡೆಗಟ್ಟಬಹುದು ಎಂಬ ಮಾಹಿತಿಯನ್ನು ನೀಡುವದು ತುಂಬಾ ಮುಖ್ಯ. ಇದು ಒಂದು ದೃಷ್ಟಿಯಲ್ಲಿ ರೋಗವನ್ನು ನಿರ್ಮೂಲ ಮಾಡುವ ಪರಿಣಾಮಕಾರಿ ಪ್ರಯತ್ನವಾಗಿರುತ್ತದೆ. ನಾವೆಲ್ಲ ನಿಮ್ಮೊಟ್ಟಿಗಿದ್ದೇವೆ ಎಂಬ ಸಂಕಲ್ಪವನ್ನು ಮಾಡುವಂತಹ ಮಹತ್ವದ ದಿನ ಡಿಸೇಂಬರ್ ಒಂದು. ಈ ದಿನದ ಮಹತ್ವ ಸಮಾಜದಲ್ಲಿ ಎಚ್‌.ಐ.ವಿ. ಪೀಡಿತರಿಗೆ ಇತರರಂತೆ ಸಾಮಾನ್ಯ ಬದುಕನ್ನು ನಡೆಸಲು ಅವಕಾಶ ಕಲ್ಪಿಸಿಕೊಡುವುದಲ್ಲದೆ ಹೊಸ ಸೊಂಕಿಗೊಳಗಾಗುವುದನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಪ್ರಯತ್ನ ಪಡಬೇಕು. ಏಡ್ಸ್‌ ದಿನಾಚರಣೆ ದಿನ ರೋಗಿಗಳಿಗೆ ಮಾನಸಿಕ ಸ್ಥೈರ್ಯ, ದೈಹಿಕ ಬಲ ತುಂಬಿ ಜಾಗೃತಿ ಮೂಡಿಸಿ ಜನರ ಮೌಡ್ಯತೆಯನ್ನು ಮಟ್ಟ ಹಾಕುವ ದಿನ ಇದಾಗಬೇಕು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top