ವಿಫಲವಾಗುತ್ತಿರುವ ವಾಟ್ಸಪ್‌ ಕಮ್ಯುನಿಟಿ ವೈಶಿಷ್ಟ್ಯ; ಪೇಮೆಂಟ್‌ ಫೀಚರ್‌ ವೈಫಲ್ಯದ ಬಳಿಕ ಎರಡನೆಯ ಹಿನ್ನಡೆ

Upayuktha
0


ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್‌ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ವೈಶಿಷ್ಟ್ಯದ (ಫೀಚರ್‌) ಹೆಸರು  Community. ಇದು ವಾಟ್ಸಪ್‌ ಗ್ರೂಪ್‌ಗಳಿಗಿಂತ ಹೇಗೆ ಭಿನ್ನ ಮತ್ತು ಏನಿದರ ಅಡ್ವಾಂಟೇಜ್‌ ಎಂಬುದು ಸ್ವತಃ ವಾಟ್ಸಪ್‌ಗೂ ಸ್ಪಷ್ಟ ಕಲ್ಪನೆಯಿಲ್ಲ ಎಂದೇ ತೋರುತ್ತದೆ. ವಾಟ್ಸಪ್‌ನ ಪ್ರಮುಖ ಪ್ರತಿಸ್ಪರ್ಧಿ ಟೆಲಿಗ್ರಾಂನಲ್ಲಿ Channel ಅನ್ನುವ ವೈಶಿಷ್ಟ್ಯವಿದೆ. ಅಲ್ಲದೆ ಅದರಲ್ಲಿ ಗ್ರೂಪ್‌ಗಳ ಸದಸ್ಯರ ಸಂಖ್ಯಾ ಮಿತಿಯೂ ವಾಟ್ಸಪ್‌ಗೆ ಹೋಲಿಸಿದರೆ ಬಹಳಷ್ಟು ದೊಡ್ಡದಿದೆ. ಜೊತೆಗೆ ಟೆಲಿಗ್ರಾಂನ ಡೆಸ್ಕ್‌ಟಾಪ್‌ ಆವೃತ್ತಿ ಅತ್ಯಂತ ಕ್ಷಿಪ್ರವಾಗಿ ಕೆಲಸ ಮಾಡುತ್ತದೆ. ಅಲ್ಲದೆ ಮೊಬೈಲ್‌ನಲ್ಲಿ ಟೆಲಿಗ್ರಾಂ ಆಪ್‌ ಹಾಕಿಕೊಳ್ಳಲೇಬೇಕೆಂಬ ಅನಿವಾರ್ಯತೆಯೂ ಇಲ್ಲ. ಒಂದೊಮ್ಮೆ ಯಾವಾಗಲೋ ಹಾಕಿಕೊಂಡಿದ್ದು ಅನಂತರ ಅನ್‌ಇನ್‌ಸ್ಟಾಲ್‌ ಮಾಡಿದ್ದರೂ ಡೆಸ್ಕ್‌ಟಾಪ್‌ ಆವೃತ್ತಿ ಅಬಾಧಿತವಾಗಿ ಕೆಲಸ ಮಾಡುತ್ತದೆ.


ಆದರೆ ಇದೇ ವಾಟ್ಸಪ್‌ನ ಡೆಸ್ಕ್‌ ಟಾಪ್ ಆವೃತ್ತಿ ಮೊದಲಿನಿಂದಲೂ ಅಷ್ಟೊಂದು ಬಳಕೆದಾರ ಸ್ನೇಹಿಯಾಗಿಲ್ಲ. ಇತ್ತೀಚೆಗಂತೂ ಹೊಸ ಅಪ್‌ಡೇಟ್‌ಗಳ ಬಂದ ಬಳಿಕ ಒಂದು ವಾಟ್ಸಪ್‌ ಖಾತೆಯನ್ನು ನಾಲ್ಕು ಸಾಧನಗಳಿಗೆ (ವಿಶೇಷವಾಗಿ ಒಂದು ಮೊಬೈಲ್‌ ಮತ್ತು ಮೂರು ಕಂಪ್ಯೂಟರ್‌ಗಳಲ್ಲಿ ಏಕಕಾಲಕ್ಕೆ ಬಳಸುವ ಆಯ್ಕೆ) ಅನುವು ಮಾಡಿಕೊಟ್ಟ ಬಳಿಕ ಸಂದೇಶಗಳ Synching ಸಮಸ್ಯೆ ತೀವ್ರವಾಗಿದೆ. ಮೊಬೈಲ್‌ ವಾಟ್ಸಪ್‌ನಲ್ಲಿ ತಕ್ಷಣವೇ ಬರುವ ಸಂದೇಶಗಳು ಕಂಪ್ಯೂಟರ್‌ ಆವೃತ್ತಿಯಲ್ಲಿ ಕೆಲವೊಮ್ಮೆ ತಡವಾಗುತ್ತವೆ. ಅಥವಾ ಮೊಬೈಲ್‌ಗೆ ನಿನ್ನೆಯೇ ಬಂದಿರುವ ಸಂದೇಶಗಳು ಕಂಪ್ಯೂಟರ್‌ಗೆ ಇವತ್ತು ಲಾಗಿನ್‌ ಆದರೂ ಕಾಣಿಸುವುದಿಲ್ಲ. ಕಂಪ್ಯೂಟರ್‌ ಆವೃತ್ತಿಯಲ್ಲೂ ವಾಟ್ಸಪ್‌ ಎರಡು ಆಯ್ಕೆಗಳನ್ನು ಕೊಟ್ಟಿದೆ. ಮೊದಲನೆಯದು ಬ್ರೌಸರ್‌ ಮೂಲಕವೇ  ಬಳಸಬಹುದಾದ https://web.whatsapp.com/ ಮತ್ತು ಇನ್ನೊಂದು ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದಾದ .exe ಎಕ್ಸ್‌ಟೆನ್ಷನ್‌ ಇರುವ ಸಾಫ್ಟ್‌ವೇರ್‌ ಆವೃತ್ತಿ. ಬ್ರೌಸರ್‌ ಆವೃತ್ತಿಯ ಮೂಲಕ ಲಿಂಕ್‌ಗಳನ್ನು ಹಂಚಿಕೊಂಡರೆ ಆ ಲಿಂಕ್‌ನಲ್ಲಿ ಇರಬಹುದಾದ ಚಿತ್ರದ ಪ್ರಿವ್ಯೂ ಬರುವುದೇ ಇಲ್ಲ. 


ಇತ್ತೀಚಿನ ಅಪ್‌ಡೇಟ್‌ನಲ್ಲಿ ಬಂದ Community feature ಅನ್ನು ಪ್ರಾಯೋಗಿಕವಾಗಿ ಬಳಸಲು ಹೊರಟವರೆಲ್ಲರೂ ಬಹುತೇಕ ತಮ್ಮ ಪ್ರಯೋಗದಿಂದ ಹಿಂದೆ ಸರಿದಿದ್ದಾರೆ. ಕಾರಣವಿಷ್ಟೆ, ಬಳಕೆದಾರರನ್ನು Convince ಮಾಡುವಲ್ಲಿ ವಾಟ್ಸಪ್‌ನ ಈ ಫೀಚರ್‌ ಸೋತಿದೆ. ವಾಟ್ಸಪ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳ ಮಾಲೀಕತ್ವ ಹೊಂದಿರುವ Meta ಸಂಸ್ಥೆಯಲ್ಲಿ ಇತ್ತೀಚೆಗೆ ವ್ಯಾಪಕ ಬದಲಾವಣೆಗಳು ಆಗುತ್ತಿರುವುದು ಸಾಮಾನ್ಯ ಓದುಗರಿಗೂ (ಸಾಮಾನ್ಯ ಬಳಕೆದಾರರಿಗಲ್ಲ...!) ಗಮನಕ್ಕೆ ಬಂದಿದೆ. ಈ ಬದಲಾವಣೆಗಳು ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವುದೋ ಅಥವಾ ಕಾಲಕ್ರಮೇಣ ಕೆಳಕ್ಕೆ ಬೀಳಿಸುವುದೋ ಕಾದುನೋಡಬೇಕಿದೆ.


ಪ್ರಾಯೋಗಿಕ ನೆಲೆಯಲ್ಲಿ ಕಮ್ಯನಿಟಿ ಫೀಚರ್‌ ಬಳಸಲು ಹೊರಟವರು ಕಂಡುಕೊಂಡು ಅನುಕೂಲತೆಗಳು ಏನೆಂದರೆ:

ಹತ್ತಾರು ಗ್ರೂಪ್‌ಗಳನ್ನು ಒಂದೇ ಕಡೆ, ಒಂದೇ ವೇದಿಕೆಗೆ ತರಬಹುದಾದ ಸಾಧ್ಯತೆ.

ಹತ್ತಾರು ಗ್ರೂಪ್‌ಗಳಿಗೆ ಲಿಂಕ್‌ ಅಥವಾ ಸಂದೇಶಗಳನ್ನು ಹಂಚಿಕೊಳ್ಳುವ ಬದಲು ತಾವು ಸೃಷ್ಟಿಸಿಕೊಂಡ ಸಮುದಾಯಕ್ಕೆ ಮಾತ್ರ ಹಂಚುವ ಅನುಕೂಲ.


ಗ್ರೂಪ್‌ಗಳಲ್ಲಿ ಯಾರ್ಯಾರು ಸದಸ್ಯರು ಇದ್ದಾರೆ, ಅವರ ಮೊಬೈಲ್‌ ಸಂಖ್ಯೆ, ಹೆಸರು ಇತ್ಯಾದಿ ಇತರ ಸದಸ್ಯರಿಗೆ ತಿಳಿಯುತ್ತದೆ. ಆದರೆ ಕಮ್ಯುನಿಟಿ ಫೀಚರ್‌ನಲ್ಲಿ ಪ್ರತಿಯೊಬ್ಬ ಸದಸ್ಯನಿಗೆ ತಾನು ಮತ್ತು ಕಮ್ಯನಿಟಿಯ ಅಡ್ಮಿನ್‌ ಮಾತ್ರ ಕಾಣಿಸುತ್ತಾರೆ. ಇದೇ ಅಂಶ  ಅನುಕೂಲ ಮತ್ತು ಅನಾನುಕೂಲ ಎರಡೂ ಆಗಿ ಪರಿಣಮಿಸಿದ್ದು ವಾಟ್ಸಪ್‌ ಪಾಲಿಗೆ ಹಿನ್ನಡೆ. ಅನುಕೂಲ ಅಂತ ತಿಳಿಯುವವರು ಪ್ರೈವೆಸಿಯ (ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿತನದ)  ಬಗ್ಗೆ ಹೆಚ್ಚಿನ ಜ್ಞಾನ ಮತ್ತು ಕಾಳಜಿ ಹೊಂದಿದವರು. ಅನನುಕೂಲ ಅಂತ ತಿಳಿದುಕೊಳ್ಳುವವರು ಈ ದಿಸೆಯಲ್ಲಿ ಅಷ್ಟೊಂದು ಯೋಚಿಸುವವರಲ್ಲ. ಪ್ರೈವೆಸಿಗಾಗಿ ಇಟ್ಟಿರುವ ಈ ಅವಕಾಶವನ್ನು (ಬೇರೆ ಸದಸ್ಯರು ಕಾಣಿಸದಿರುವುದು)  ಅನುಕೂಲ ಎಂದು ಭಾವಿಸಿದವರಿಗಿಂತಲೂ ಅನನುಕೂಲ ಎಂದು ಭಾವಿಸಿದವರ ಸಂಖ್ಯೆಯೇ ದೊಡ್ಡದಾಗಿರುವುದರಿಂದ Community Feature ವಿಫಲವಾಗುತ್ತಿದೆ.


ವಾಟ್ಸಪ್‌ನ ವಿಫಲವಾದ ಫೀಚರ್‌ಗಳಲ್ಲಿ Payment ವೈಶಿಷ್ಟ್ಯ ಕೂಡ ಒಂದು. ಇತರ ಎಲ್ಲಾ fintech ಕಂಪನಿಗಳು ಭಾರತ ಸರಕಾರದ ನಿಯಮಗಳಿಗೆ ಬದ್ಧರಾಗಿ ನ್ಯಾಷನಲ್‌ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ (NCPI) ಅಭಿವೃದ್ಧಿಪಡಿಸಿದ ಯುಪಿಐ ವೇದಿಕೆಯನ್ನು ತಮ್ಮಲ್ಲಿ Integrate ಮಾಡಿಕೊಂಡು ಸೇವೆ ನೀಡುತ್ತಿದ್ದರೆ, ಈ ವಾಟ್ಸಪ್‌ ಮಾತ್ರ ಭಾರತ ಸರಕಾರದ ನಿಯಮಗಳಿಗೆ ಬಾಧ್ಯತೆ ಹೊಂದಲು ಬಹಳಷ್ಟು ತಕರಾರು ಮಾಡಿ, ಕೊನೆಗೂ ಅನಿವಾರ್ಯತೆಯಿಂದ ಭದ್ರತಾ ನಿಯಮಗಳನ್ನು ಒಪ್ಪಿಕೊಂಡಿದೆ. ಹೀಗೆ ಒಲ್ಲದ ಮನಸ್ಸಿನಿಂದ ಅದು ಎಲ್ಲರಿಗಿಂತ ತಡವಾಗಿ ಆರಂಭಿಸಿದ Payment Option ಬಹುದೊಡ್ಡ Failure ಎಂದು ಎಕನಾಮಿಕ್ ಟೈಮ್ಸ್‌ ಸೇರಿದಂತೆ ದೇಶದ ಬಹುತೇಕ ದೊಡ್ಡ ಮಾಧ್ಯಮಗಳು ವರದಿ ಮಾಡಿವೆ.


ಬಹುಶಃ ಅದೇ ಹಾದಿಯಲ್ಲಿ Community ಫೀಚರ್ ಕೂಡ ಸಾಗಿದೆ ಅನಿಸುತ್ತದೆ.  ಕೇವಲ ಸಂದೇಶಗಳ ವಿನಿಮಯದ ವಿಚಾರದಲ್ಲಿ ತಕ್ಷಣದ ಸ್ಪಂದನೆ, ಪರಿಣಾಮಗಳಲ್ಲಿ ಮಾತ್ರ ವಾಟ್ಸಪ್‌ನ ಯಶಸ್ಸು ನಿಂತಿದೆ.  ಸರಿಯಾದ ಪರ್ಯಾಯ ಆಯ್ಕೆ (ಟೆಲಿಗ್ರಾಂ ಹೊರತುಪಡಿಸಿ) ಇಲ್ಲದಿರುವುದೇ ಈ ಒಂದು ವಿಚಾರದಲ್ಲಿ ಮಾತ್ರ ವಾಟ್ಸಪ್‌ನ ಮೇಲುಗೈಗೆ ಕಾರಣವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top