ಯಕ್ಷಾಂಗಣ ಮಂಗಳೂರು ದಶಮಾನ ಸಡಗರ- ರಾಜ್ಯೋತ್ಸವ ಪುರಸ್ಕಾರ ಪ್ರದಾನ

Upayuktha
0

ಸಾಮಾಜಿಕ- ಸಾಂಸ್ಕೃತಿಕ ಸೇವೆಯಿಂದ ಸಾರ್ಥಕತೆ: ಐಕಳ ಹರೀಶ್ ಶೆಟ್ಟಿ



ಮಂಗಳೂರು: 'ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಗಳಿಂದ ಲಭ್ಯವಾಗುವ ಸಂತೃಪ್ತ ಭಾವ  ಮಹತ್ತರವಾದುದು. ಇದು ನಮ್ಮ ಬದುಕಿಗೆ ಸಾರ್ಥಕ್ಯವನ್ನು ತಂದು ಕೊಡುತ್ತದೆ' ಎಂದು ಮುಂಬೈ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.


ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಯಕ್ಷಗಾನ ಚಿಂತನ ಮಂಥನ  ಮತ್ತು ಪ್ರದರ್ಶನ ವೇದಿಕೆಯಾದ 'ಯಕ್ಷಾಂಗಣ ಮಂಗಳೂರು', ಮಂಗಳೂರು ವಿಶ್ವವಿದ್ಯಾನಿಲಯದ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ 'ಸಪ್ತ ವಿಜಯ' ಯಕ್ಷಗಾನ ತಾಳಮದ್ದಳೆ ಸಪ್ತಾಹ- 2022 ಹತ್ತನೇ ವರ್ಷದ ನುಡಿ ಹಬ್ಬದಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.


ರಾಜಾಶ್ರಯ ಅಗತ್ಯ:

ಸಪ್ತಾಹ ಉದ್ಘಾಟಿಸಿದ ಮುಂಬಯಿ ಉದ್ಯಮಿ- ಕಲಾಪೋಷಕರು, ಥಾಣೆ ಬಂಟ್ಸ್ ಎಸೋಸಿಯೇಷನ್ ನ ಮಾಜಿ ಅಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ ಅವರು 'ಕಲೆಗೆ ರಾಜಾಶ್ರಯ ಅಗತ್ಯ. ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಎಲ್ಲೆಡೆಯಲ್ಲಿ ಆಗಬೇಕು. ಮುಂಬಯಿ ಕಲಾಭಿಮಾನಿಗಳು ಈ ವಿಚಾರದಲ್ಲಿ ಮಾದರಿಯಾಗಿದ್ದಾರೆ' ಎಂದರು.


ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕಿನ ಮಹಾ ಪ್ರಬಂಧಕ ರಮೇಶ್ ಭಟ್ ಅವರು 'ಬ್ಯಾಂಕ್ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬರುತ್ತಿದೆ' ಎಂದರು.


ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ:

ಅಧ್ಯಕ್ಷತೆ ವಹಿಸಿದ್ದ ಕದ್ರಿ ಮಂಜುನಾಥ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಯಕ್ಷಾಂಗಣ ಮಂಗಳೂರು ಗೌರವಾಧ್ಯಕ್ಷ ಡಾ. ಎ.ಜೆ.ಶೆಟ್ಟಿ ಅವರು ಐಕಳ ಹರೀಶ್ ಶೆಟ್ಟಿ ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಿದರು.


'ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಉದಾತ್ತ ಕಾರ್ಯ. ಯಕ್ಷಾಂಗಣ 9ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಬಂದಿದೆ. ಕಲಾವಿದರ ಮಾನ- ಸಮ್ಮಾನದೊಂದಿಗೆ ಕಲಾ ಪ್ರದರ್ಶನ, ಚಿಂತನ-ಮಂಥನ ನಡೆಸುವ ಮೂಲಕ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ತಂಡದವರು ಸ್ತುತ್ಯ ಕೆಲಸ ಮಾಡುತ್ತಿದ್ದಾರೆ' ಎಂದವರು ಹೇಳಿದರು.


ಇದೇ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದ ಐಕಳ ಹರೀಶ್ ಶೆಟ್ಟಿ ಅವರ ಅಭಿನಂದನಾ ಸಂಪುಟ 'ಸಾರ್ವಭೌಮ' ಗ್ರಂಥವನ್ನು ವೇದಿಕೆಯ ಅತಿಥಿಗಳಿಗೆ ವಿತರಿಸಲಾಯಿತು. ಲೇಖಕ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ ಅವರ 'ಯಕ್ಷಗಾನ' ಕೃತಿಯನ್ನು ಬಿಡುಗಡೆಗೊಳಿಸಲಾಯಿತು.


ಕನ್ನಡದ ನುಡಿಹಬ್ಬ:

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ '2013 ರ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವ  ಕಲಾ ಸಂಭ್ರಮವಾಗಿ ಆರಂಭಿಸಿದ ತಾಳಮದ್ದಳೆ ಸಪ್ತಾಹ ಕನ್ನಡದ ನುಡಿ ಹಬ್ಬವಾಗಿ ಮುಂದುವರೆದಿದೆ. ಬೇರೆಲ್ಲ ರಂಗಪ್ರಕಾರಗಳಲ್ಲಿ ಅನ್ಯ ಭಾಷೆಗಳ ಆನುಷಂಗಿಕ ಪ್ರಯೋಗ ಆಗುತ್ತಿರುವಾಗ ಶುದ್ಧ ಕನ್ನಡ ಕೇಳಿಸುವುದು ಯಕ್ಷಗಾನ ರಂಗಸ್ಥಳದಲ್ಲಿ ಮಾತ್ರ. ಅದಕ್ಕಾಗಿಯೇ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ' ಎಂದು ನುಡಿದರು.


ಡಾ.ಜೋಶಿಗೆ ಅಭಿನಂದನೆ:

ಈಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಅರ್ಥಧಾರಿ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರನ್ನು ಯಕ್ಷಾಂಗಣ ವತಿಯಿಂದ ಶಾಲು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.


ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಉದ್ಯಮಿಗಳಾದ ವಿ. ಕರುಣಾಕರ, ಸಿ.ಎಸ್. ಭಂಡಾರಿ, ವಿ.ವಿ. ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ, ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಪತಿ ಕಲ್ಲೂರಾಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಅತಿಥಿಗಳಾಗಿದ್ದರು.


ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಸಂಚಾಲಕ ಕೆ.ರವೀಂದ್ರ ರೈ ಕಲ್ಲಿಮಾರು ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಬೆಟ್ಟಂಪಾಡಿ ಸುಂದರ ಶೆಟ್ಟಿ, ಪ್ರಧಾನ ಸಂಚಾಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜತೆ ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ;  ಸಮಿತಿ ಸದಸ್ಯರಾದ  ಕರುಣಾಕರ ಶೆಟ್ಟಿ ಪಣಿಯೂರು, ಸುಧಾಕರ ರಾವ್ ಪೇಜಾವರ, ಸುಮಾ ಪ್ರಸಾದ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು.

ಷಡಾನನ ವಿಜಯ:

ಸಮಾರಂಭದ ಬಳಿಕ 'ಸಪ್ತ ವಿಜಯ' ಸರಣಿಯಲ್ಲಿ ಪುತ್ತಿಗೆ ರಘುರಾಮ ಹೊಳ್ಳರ ಭಾಗವತಿಕೆಯಲ್ಲಿ 'ಷಡಾನನ ವಿಜಯ' ಮೊದಲ ತಾಳಮದ್ದಳೆ ಜರಗಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top