ವರುಣ್ ವಸಿಷ್ಠ : ಮೈಸೂರಿನವನೆಂದ ಮೇಲೆ ಮತ್ತೂ ಒಳ್ಳೇ ಹುಡುಗ!

Upayuktha
0

“ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ" ಪುಸ್ತಕಕ್ಕೆ ಬೆನ್ನುಡಿ ಬರೆದ ವರುಣ್ ವಸಿಷ್ಠ ಯಾರು? ಎಂದು ಈಗಾಗಲೇ ಕೆಲವರು ಕೇಳಿದ್ದಾರೆ. ವರುಣ್ ವಸಿಷ್ಠ ನಾನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣ ಬರೆಯುತ್ತಿದ್ದಾಗ ಓದುಗನಾಗಿ ಪರಿಚಯವಾದ ಹುಡುಗ. ಮೈಸೂರಿನವನು. ಆಗ ಜೆ.ಸಿ.ಇ ಕಾಲೇಜಲ್ಲಿ ಎಂಜಿನಿಯರಿಂಗ್ ಓದುತ್ತಿದ್ದನು. ಈಗ ಬಹುರಾಷ್ಟ್ರೀಯ ಕಂಪನಿಯಲ್ಲಿ ಐಟಿ ಉದ್ಯೋಗಿ. ಸಂಕೋಚ ಸ್ವಭಾವದವನು, ಸಾಹಿತ್ಯಪ್ರೇಮಿ. ಇಲ್ಲಿತನಕ ಮಿಂಚಂಚೆಗಳ ಮೂಲಕವಷ್ಟೇ ನಮ್ಮಿಬ್ಬರ ಭೇಟಿಯಾಗಿದ್ದದ್ದು, ಮೊನ್ನೆ ನವಂಬರ್ ಮೊದಲ ವಾರದಲ್ಲಿ ನಾನು ಮೈಸೂರಿಗೆ ಹೋಗಿದ್ದಾಗ, ಅಲ್ಲಿ ಸುಬ್ರಹ್ಮಣ್ಯ (ಸಂಸ್ಕೃತಿ ಪ್ರಕಾಶನ) ಅವರ ಮನೆಯಲ್ಲಿ ನಡೆದ 'ಸಮಾನಾಸಕ್ತ ಸ್ನೇಹಿತರ ಅನೌಪಚಾರಿಕ ಸಮ್ಮಿಲನ'ದಲ್ಲಿ ಮುಖತಃ ಭೇಟಿಯಾದನು. ಪ್ರೊ.ಕೃಷ್ಣೇಗೌಡರೂ ಭಾಗವಹಿಸಿದ್ದ ಆ ಕಾರ್ಯಕ್ರಮದ ಬಗ್ಗೆ ವರುಣ್ ಬರೆದ ಈ ಕೆಳಗಿನ ಟಿಪ್ಪಣಿಯನ್ನೋದಿದರೆ ನಿಮಗೆ ವರುಣ್‌ನ ಸದಭಿರುಚಿಯ ಮತ್ತು ಸೂಕ್ಷ್ಮಗ್ರಾಹಿತನದ ಅಷ್ಟಿಷ್ಟು ಪರಿಚಯವಾಗುತ್ತದೆ. ಇಂತಹ ವರುಣ್ ಜೊತೆಗಿನ ಸ್ನೇಹ ನನಗೆ ಹೆಮ್ಮೆಯ ಸಂಗತಿ.  - ಶ್ರೀವತ್ಸ ಜೋಶಿ.’


* * *

"ನನಗೆ ಡೈರಿ ಬರೆಯುವ ಅಭ್ಯಾಸವಿಲ್ಲ. ಬಾಲ್ಯದಲ್ಲಿಯೇ ಆ ವಿಫಲಯತ್ನ ಮಾಡಿದ್ದಿದೆ. ಬರೆದಿಡುವಂತಾದ್ದೇನೂ ಜೀವನದಲ್ಲಿ ದಿನವೂ ಘಟಿಸುತ್ತಿರುವುದಿಲ್ಲವಷ್ಟೇ?  ಆದರೆ ನೆನಪಿನಲ್ಲುಳಿಯಬೇಕಾದಂತಹ ಕ್ಷಣಗಳನ್ನು ದಾಖಲಿಸದೇ ಹೋದರೆ ನಷ್ಟವಾದೀತು ಎಂಬ ಕಾರಣಕ್ಕೆ ಇಂದು ಸಂಜೆ ಕಳೆದ ಎರಡು ತಾಸುಗಳ ಬಗ್ಗೆ ಈ ಬರೆಹ:


ಕಳೆದ ಶನಿವಾರ ಬೆಂಗಳೂರಿನ ತಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಂಡಿದ್ದ ನನಗೆ, ಇಂದು ಶ್ರೀವತ್ಸ ಜೋಶಿಯವರು ಮೈಸೂರಿನಲ್ಲಿ ಸುಬ್ರಹ್ಮಣ್ಯ ಸಂಸ್ಕೃತಿಯವರ ಮನೆಯಲ್ಲಿ ಆಯೋಜಿತವಾಗಿದ್ದ 'ಸಮಾನಾಸಕ್ತ ಸ್ನೇಹಿತರ ಅನೌಪಚಾರಿಕ ಸಮ್ಮಿಲನ'ಕ್ಕೆ ಆಮಂತ್ರಣವನ್ನು ಕಳುಹಿಸಿದ್ದರು. ಮುಂಚಿತವಾಗಿಯೇ ತಿಳಿಸಿದಂತೆ, ಕಚೇರಿಯ ಕೆಲಸ ಮುಗಿಸಿಕೊಂಡು ನಿಗದಿತ ಸಮಯಕ್ಕಿಂತ ಒಂದು ಘಂಟೆ ತಡವಾಗಿ ತೆರಳಿದ ಕಾರಣ, ಆಗಷ್ಟೇ ಮುಗಿದಿದ್ದಂತೆ ತೋರುತ್ತಿದ್ದ ಬಿಸಿ ಬಿಸಿ ಉಪ್ಪಿಟ್ಟಿನ ಸಮಾರಾಧನೆಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡೆ. ಆದರೇನಂತೆ? ಜೋಶಿಯವರ 'ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪು' ಅನುಭವಕ್ಕೆ ಬರತೊಡಗಿತು. ನೆರೆದಿದ್ದ ಸನ್ಮಿತ್ರರು ತಮ್ಮ ತಮ್ಮ ಪರಿಚಯ ಹೇಳಿಕೊಳ್ಳುವುದರೊಂದಿಗೆ ಶುರುವಾದ ಮಾತುಕತೆಯಲ್ಲಿ, ವಿವಿಧ ಭಾಗಗಳಿಂದ ಬಂದಿದ್ದ, ವಿವಿಧ ಹಿನ್ನೆಲೆಯುಳ್ಳ ಶ್ರೀಸಾಮಾನ್ಯ ಮಹನೀಯರು, ತಮ್ಮದೇ ರೀತಿಯಲ್ಲಿ ಜೋಶಿಯವರ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಶಿಕ್ಷಕರು, ವೈದ್ಯರು, ಸಾಹಿತಿಗಳು, ಪುಸ್ತಕ ಪ್ರಕಾಶಕರು, ಹತ್ತಿರದ ಮತ್ತು ದೂರದ ಸಂಬಂಧಿಕರು, ಒಂದೇ ಊರಿನವರು, ಭಗವದ್ಗೀತೆ ತರಗತಿಯ ಸಹಪಾಠಿಗಳು - ಹೀಗೆ ಹಲವು ಹಿನ್ನೆಲೆಯ ಸಮಾನ ಮನಸ್ಕರರು ಮಾಡಿಕೊಂಡ ಪರಿಚಯದ ಸಾಮಾನ್ಯ ಅಂಶ, "ಇವರು ನಮ್ಮವರು" ಎಂದು  ಹೆಮ್ಮೆ ಮತ್ತು ಆತ್ಮೀಯತೆಯಿಂದ ಜೋಶಿಯವರೊಂದಿಗೆ ಗುರುತಿಸಿಕೊಳ್ಳುವುದೇ ಆಗಿತ್ತು. 


ನಂತರ ಜೋಶಿಯವರು ತಮ್ಮ ಬಗ್ಗೆ ಕಿರು ಪರಿಚಯ ಮಾಡಿಕೊಂಡರು. ದಾವಣಗೆರೆಯ ತಮ್ಮ ಕಾಲೇಜು ದಿನಗಳಲ್ಲಿ ಹೊಸದಾಗಿ ಆರಂಭಗೊಂಡಿದ್ದ ಕಂಪ್ಯೂಟರ್ ಸೈನ್ಸ್ ಕೋರ್ಸಿನಲ್ಲಿ ಶಿಕ್ಷಕರ ಕೊರತೆಯಿಂದಾಗಿ ಏಕಲವ್ಯನಂತೆ ತಾವೇ ನೋಟ್ಸ್ ತಯಾರಿಸಿಕೊಳ್ಳುತ್ತಿದ್ದುದನ್ನೂ, ಅದು ನಂತರದ ೩-೪ ವರ್ಷಗಳ ಕಾಲ 'ಜೋಶಿ ನೋಟ್ಸ್' ಎಂದು ಜನಪ್ರಿಯವಾಗಿ ಚಲಾವಣೆಯಲ್ಲಿದುದ್ದನ್ನೂ ನೆನೆದು, ಆ ಪ್ರಕ್ರಿಯೆಯೇ ತಮಗೆ ಕಠಿಣ ವಿಷಯಗಳನ್ನು ತಾರ್ಕಿಕವಾಗಿ ಕ್ರಮಬದ್ಧವಾಗಿ ಕ್ಯಾಪ್ಸೂಲ್ ರೀತಿಯಲ್ಲಿ ಮಂಡಿಸುವ ಕಲೆಯನ್ನು ಕರಗತಗೊಳಿಸಿಕೊಳ್ಳಲು ನೆರವಾಯಿತೆಂಬುದನ್ನು ತಿಳಿಸಿದರು. ನಂತರ ಹೈದರಾಬಾದಿನಲ್ಲಿ ಕೆಲಸದ ನಿಮಿತ್ತ ಇದ್ದಷ್ಟು ವರ್ಷ ಸ್ವಯಂ ಆಸಕ್ತಿಯಿಂದ ವೃತ್ತಪತ್ರಿಕೆಯಲ್ಲಿನ ಪದಬಂಧ ಬಿಡಿಸುವಷ್ಟರ ಮಟ್ಟಿಗೆ ತೆಲುಗು ಕಲಿತದ್ದನ್ನು, ತದನಂತರ ಅಮೆರಿಕೆಗೆ ತೆರಳಿದ ಆರಂಭದಲ್ಲಿ ಅಲ್ಲಿನ ಸ್ಥಳೀಯ ವಿದ್ಯಮಾನಗಳನ್ನು ಇಂಗ್ಲೀಷಿನಲ್ಲಿ ಬರೆಯುತ್ತಿದ್ದುದನ್ನು, ದಟ್ಸ್ ಕನ್ನಡ ಡಾಟ್ ಕಾಮಿನ ಶಾಮಸುಂದರ್ ರ ಸಲಹೆಯ ಮೇರೆಗೆ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದನ್ನು, ಹಾಗೂ ವಿಶ್ವೇಶ್ವರ ಭಟ್ಟರ ಕೋರಿಕೆಯ ಮೇರೆಗೆ ವಿಜಯ ಕರ್ನಾಟಕದಲ್ಲಿ 'ವಿಚಿತ್ರಾನ್ನ' ಅಂಕಣ ಬರೆಯಲು ಆರಂಭಿಸಿದ್ದನ್ನು ನೆನಪಿಸಿಕೊಂಡರು. 


ದೂರದ ಅಮೆರಿಕೆಯಲ್ಲಿದ್ದರೂ ಇಲ್ಲಿಯೇ ಎಲ್ಲೋ ಕುಳಿತು ಬರೆಯುತ್ತಿರುವರೇನೋ ಎಂಬಷ್ಟು ಭಾರತದೊಂದಿಗೆ ಮತ್ತು ಇಲ್ಲಿನ ಆಗುಹೋಗುಗಳ ಬಗೆಗೆ ಜೋಶಿಯವರು ಅದು ಹೇಗೆ ಅಪ್ಡೇಟ್ ಆಗಿರುತ್ತಾರೆ ಎಂದು ಸಭಿಕರು ಆಶ್ಚರ್ಯ ವ್ಯಕ್ತಪಡಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ದೋಷಪೂರಿತ ಕನ್ನಡ ಫಲಕಗಳನ್ನು ಕಂಡಾಗ ಜೋಶಿಯವರನ್ನೂ ಮತ್ತವರ ಸ್ವಚ್ಛ ಭಾಷೆ ಅಭಿಯಾನವನ್ನು ನೆನೆಯುತ್ತೇವೆಂದು ಒಬ್ಬರು ಹೇಳಿದರೆ, ಇಲ್ಲಿರುವ ತಮಗಿಂತ, ಹೊರದೇಶದಲ್ಲಿರುವ ಜೋಶಿಯವರು ಹೆಚ್ಚು ಕನ್ನಡ ಸೇವೆ ಮಾಡುತ್ತಿದ್ದಾರೆ ಎಂದು ಮತ್ತೋರ್ವರು ಪ್ರಶಂಸಿಸಿದರು. ತಮ್ಮನ್ನು ಬರೆಯಲು ಪ್ರೋತ್ಸಾಹಿಡಿದ ಜೋಶಿಯವರ ಬಗ್ಗೆ ಅನೇಕ ಉದಯೋನ್ಮುಖ ಲೇಖಕರು ಕೃತಜ್ಞತೆ ವ್ಯಕ್ತ ಪಡಿಸಿದರು. ಒಬ್ಬರಂತೂ ತಾವು ಕಳೆದ ಎರಡು ವರ್ಷಗಳಲ್ಲಿ ಮೂರು ಪುಸ್ತಕಗಳನ್ನು ಬರೆಯಲು ಜೋಶಿಯವರೇ ಪ್ರೇರಣೆ ಎಂದು ಧನ್ಯವಾದಗಳನ್ನು ಸಮರ್ಪಿಸಿದರು.  ಮಧ್ಯೆ ಮಧ್ಯೆ ಎಲ್ಲರಿಂದಲೂ ಹೊರಹೊಮ್ಮುತ್ತಿದ್ದ ಹಾಸ್ಯ pun-ಡಿತ್ಯ, ಸನ್ನಿವೇಶವನ್ನು ತಿಳಿಯಾಗಿಯೂ ಅನೌಪಚಾರಿಕವಾಗಿಯೂ ಇರಿಸಲು ಸಹಾಯಮಾಡುತ್ತಿತ್ತು. ಸಭಿಕರೊಬ್ಬರು 'ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕ ಕೊಂಡೋದಿರಿ' ಎಂದು ಡುಂಡಿರಾಜರ ಚುಟುಕವನ್ನು ಉಲ್ಲೇಖಿಸಿದರು. ಬೆಕ್ಕು ಮರಿ ಹಾಕಿದಂತೆ ಒಟ್ಟೊಟ್ಟಿಗೇ ಐದಾರು ಪುಸ್ತಕಗಳನ್ನು ಬಿಡುಗಡೆ ಮಾಡುತ್ತೇನಾದ್ದರಿಂದ ಇತ್ತೀಚಿಗೆ ತಮಗೆ ಅಭಿಮಾನಿಯೋರ್ವರು 'ಅಂತರ್ಜಾಲದ ಮಾರ್ಜಾಲ' ಎಂಬ ಬಿರುದನ್ನು ನೀಡಿರುವುದಾಗಿ ಜೋಶಿಯವರೇ ತಮಾಷೆ ಮಾಡಿಕೊಂಡರು. 


ಇಲ್ಲಿಯವರೆಗೂ ಮೌನವಾಗಿ ಕುಳಿತಿದ್ದ ಪ್ರೊಫೆಸರ್ ಕೃಷ್ಣೇಗೌಡರನ್ನು ಮಾತನಾಡುವಂತೆ ಕೋರಿಕೊಳ್ಳಲಾಯಿತು. ಆಗ ಜೋಶಿಯವರು 'ಕೃಷ್ಣೇಗೌಡರನ್ನು ನಿಲ್ಲಿಸಿ ಮಾತನಾಡಿಸಬೇಡಿ; ಕೂರಿಸಿ ಮಾತಾಡಿಸಿ ನೋಡಿ ಎಂದು ನಾನು ಎಲ್ಲೆಡೆ ಹೇಳುತ್ತಿರುತ್ತೇನೆ. ಏಕೆಂದರೆ ಅವರನ್ನು ಸ್ಟ್ಯಾಂಡ್ ಅಪ್ ಕಾಮಿಡಿಗೆ ಸೀಮಿತಗೊಳಿಸದೇ ಹೋದರೆ, ಅವರಿಂದ ಇನ್ನೂ ಮೇಲ್ಮಟ್ಟದ ವಿಚಾರಗಳು ನಮಗೆ ದೊರೆಯುವುದರಿಂದ ನಾವು ವಂಚಿತರಾಗುವುದಿಲ್ಲ' ಎಂದು ಸಭೆಯ expectation ಅನ್ನು ಸೆಟ್ ಮಾಡಿದರು. ನಂತರ ನಡೆದದ್ದು ತರಗತಿಗೆ ಒಂದು ತಾಸಿನ ಪಾಠ. ಒಂದೆರಡು ತಲೆಮಾರುಗಳಿಂದ ಶಾಲಾ ಕಾಲೇಜುಗಳಲ್ಲಿ ದುರ್ಲಭವಾಗಿರುವ ಜೀವನ ಪಾಠ. ಸಮಯೋಚಿತವಾಗಿ, ಸತ್ವಯುತವಾಗಿ, ಅರ್ಥಪೂರ್ಣವಾಗಿ ಮಾತನಾಡಿದ ಕೃಷ್ಣೇಗೌಡರದು, ದಶಕಗಳ ಪರಿಶ್ರಮದಿಂದ, ಪ್ರಜ್ಞಾಪೂರ್ವಕವಾಗಿ ಕಡೆದಿಟ್ಟ  ವಾಕ್ಶಿಲ್ಪ. ನಡು-ನಡುವೆ ವಿಷಯಾಂತರ ಮಾಡುತ್ತಿದ್ದೇನೆಂದು ಅವರಿಗೇ ಅನ್ನಿಸಿದರೂ, ಅದು ಅವರಿಗೇ ತಿಳಿಯದಂತೆ ಮುಂದೆ ಹೇಳಬೇಕಾದ ವಿಷಯಕ್ಕೆ ಅವರು ಹಾಕಿಕೊಳ್ಳುತ್ತಿದ್ದ ಅಡಿಪಾಯ. ಸಂಗೀತ ಕಚೇರಿಯಲ್ಲಿ ಹೊಸ ಶ್ರೋತೃವೊಬ್ಬ, ಗಾಯಕನು ಮುಂದೆ ಏನನ್ನು ಹಾಡುತ್ತಾನೆಂಬುದು ಗೊತ್ತಿಲ್ಲದಿದ್ದರೂ, ಆ ಕ್ಷಣದಲ್ಲಿ ಕಿವಿಗೆ ಬೀಳುವ ಸ್ವರಗಳಿಗೆ ಮಾತ್ರ ತಲೆದೂಗುತ್ತಾ ಆಸ್ವಾದಿಸುವಂತೆ, ಎಲ್ಲರೂ ಕೃಷ್ಣೇಗೌಡರು ಹೇಳುವ ಕಥೆಗಳನ್ನು ಕೇಳಿ ಆಸ್ವಾದಿಸಬಹುದು. ಆದರೆ ಕಡೆಯಲ್ಲಿ ಅವರು ಕಥೆ ಹೇಳಿದ್ದು ತಾವು ಹೇಳಬೇಕಾಗಿದ್ದ ಮೌಲ್ಯಗಳನ್ನು ಸುಲಭಗ್ರಾಹ್ಯವಾಗಿಸಲು ಎಂಬುದು ಅರಿವಾದಾಗ, ಅವರ ಮಾತುಗಳು ಹೆಚ್ಚು ಆಪ್ತವಾಗುತ್ತವೆ. 


'ಮನುಷ್ಯ ಹುಟ್ಟಿದ ಮೇಲೆ ಮಾತು ಕಲಿಯಲು ಎರಡು ವರ್ಷ ಬೇಕಾಗುತ್ತದೆ;  ಸರಿಯಾಗಿ ಮಾತನಾಡುವುದನ್ನು ಕಲಿಯಲು ಇಪ್ಪತ್ತು ವರ್ಷ ಬೇಕಾಗಬಹುದು; ಆದರೆ (ಔಚಿತ್ಯ ಅರಿತು) ಬಾಯಿ ಮುಚ್ಚಿ ಕುಳಿತುಕೊಳ್ಳೋದನ್ನು ಕಲಿಯಲು ಇಡೀ ಜೀವಮಾನವೂ ಸಾಕಾಗದೇ ಹೋಗಬಹುದು.. Don't speak if you cannot improve upon silence' ಎಂದು ಮೌನ ಮುರಿದ ಕೃಷ್ಣೇಗೌಡರು, ಮುಂದುವರೆದು "never sing if you cannot improve upon speech" ಎಂದು ಸೇರಿಸಿದರು. ಸಂಸ್ಕೃತಿ ಸುಬ್ರಮಣ್ಯರ ಆತಿಥ್ಯದ ಋಣವನ್ನು ನೆನೆಯುತ್ತಾ, ಇಂದು ನಮ್ಮ ಮೇಲಿರುವ ಸಮಾಜದ ಅನೇಕ ವಿಧವಾದ ಋಣವನ್ನು ಗೌರವಿಸದೇ, ನಾವು ತೋರಿಸುತ್ತಿರುವ ಅಹಂಕಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಅನೇಕ ಮಹನೀಯರು ಬಾಳಿ ಬದುಕಿದ ಜೀವನ ಮೌಲ್ಯಗಳನ್ನು, ದುಡ್ಡಿನ ಅಹಂಕಾರದಲ್ಲಿ ತೇಲುತ್ತಿರುವ ಇಂದಿನ ತಲೆಮಾರು ತ್ಯಜಿಸಿ, ಸಂಸ್ಕೃತಿ ವಿಹೀನರಾಗಿ ಬದುಕುತ್ತಿರುವುದರ ಬಗ್ಗೆ ವಿಷಾದಿಸಿದರು. 'ದೇವರಂತಾ ಮನುಷ್ಯ'ರಾಗಿ ಬಾಳಿದ ತಳುಕಿನ ವೆಂಕಣ್ಣಯ್ಯನವರಿಂದ, ಎ ಏನ್ ಮೂರ್ತಿರಾಯರಿಗೆ ತಮ್ಮ ಜೀವನದ ಕಷ್ಟಕಾಲವೊಂದರಲ್ಲಿ ಸಾಂತ್ವನ ದೊರಕಿದ ಪ್ರಸಂಗವೊಂದನ್ನು ಹೇಳುತ್ತಾ 'ತೀರಿಸಲಾಗದ ಋಣ'ವೇನೆಂಬುದನ್ನು ಹೃದಯಂಗಮವಾಗಿ ವಿವರಿಸಿದರು. ಸ್ವಾಮಿ ವಿವೇಕಾನಂದರು ಎಚ್ಚರಿಸಿದ್ದ 'ವ್ಯಕ್ತಿತ್ವ ನಿರ್ಮಾಣ ಮಾಡದ ಶಿಕ್ಷಣ'ದ ಅಪಾಯವನ್ನು ನಾವು ಕಡೆಗಣಿಸಿದುದರಿಂದ, ಇಂದು ಓದಿ ಅಕ್ಷರಸ್ಥರಾದವವರ ವ್ಯಕ್ತಿತ್ವ, ಸಾಂಸ್ಕೃತಿಕವಾಗಿ ಟೊಳ್ಳಾಗಿರುವುದಕ್ಕೆ ಅನೇಕ ಉದಾಹರಣೆಗಳ ಮೂಲಕ ಕನ್ನಡಿ ಹಿಡಿದರು.


'ನಾನು ಒಳ್ಳೆಯ ಶಿಕ್ಷಕನಾಗಲಿಲ್ಲ ಎಂಬುದು ನಿವೃತ್ತಿಯ ನಂತರ ನನಗೆ ತಿಳಿಯಿತು; ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಮಗೆ ತಿಳಿದದ್ದಷ್ಟನ್ನೇ ಸತ್ಯ ಎಂದು ಮಕ್ಕಳಿಗೆ ಹೇಳಿಕೊಟ್ಟು, ಅದನ್ನೇ ಬರೆಸಿ ಅಂಕಗಳನ್ನು ನೀಡುತ್ತಿದ್ದೇವೆಯೇ ಹೊರತು, ನಮಗೆ ತಿಳಿಯದ್ದೂ ಇದೆ, ಅದನ್ನು ಹುಡುಕುವುದು ಹೇಗೆ ಎಂದು ಮಕ್ಕಳಿಗೆ ಹೇಳಿಕೊಡುತ್ತಿಲ್ಲ' ಎಂದು ಇಂದಿನ ಶಿಕ್ಷಣ ಪದ್ದತಿಯ ನ್ಯೂನ್ಯತೆ-ಮಿತಿಗಳನ್ನು ಉದಾಹರಣೆಗಳ ಮೂಲಕ ತೆರೆದಿಟ್ಟರು. ಇದೆ ಸಂದರ್ಭದಲ್ಲಿ ವಿಭಿನ್ನ ಕೋನದಿಂದ ವಿಷಯವನ್ನು ಗ್ರಹಿಸುವ ಶ್ರೀವತ್ಸ ಜೋಶಿಯವರ ವೈಶಿಷ್ಟ್ಯವನ್ನು ಪ್ರಶಂಸಿಸಿದರು. ನಂತರ 'ತಪಸ್ಸು' ಎಂದರೆ ಏನು ಎನ್ನುವುದು ಇಂದು ನಮಗೆ ಮರೆತೇ ಹೋಗಿದೆ, ಹಿಂದಿನವರ ತಪಸ್ಸಿನಂತಹಾ ಜೀವನ ಸಾಧನೆಯನ್ನು ನಾವು ಬಿಟ್ಟುಕೊಟ್ಟು ಸುಲಭವಾದದ್ದನ್ನು ಮಾತ್ರ ಉಳಿಸಿಕೊಂಡೆವು ಎಂದರು. ಇದು ದಶಕಗಳಿಂದ ತಪಸ್ಸಿನಂತೆ ನಿರಂತರವಾಗಿ-ನಿಯಮಿತವಾಗಿ ಅಂಕಣಗಳನ್ನು ಬರೆಯುತ್ತಾ ಅಕ್ಷರ ಸೇವೆ ಮಾಡುತ್ತಿರುವ ಶ್ರೀವತ್ಸ ಜೋಶಿಯವರ ಶಿಸ್ತು ಮತ್ತು ಬದ್ಧತೆಗಳನ್ನು ಕುರಿತು ಬಂದ ಪರೋಕ್ಷ ಪ್ರಶಂಸೆಯಂತೆ ತೋರಿತು.


ಮನುಷ್ಯನಿಗೆ ಬುದ್ಧಿ ಬೆಳೆದರೆ ಸಾಲದು, ಭಾವವೂ ಬೆಳೆಯಬೇಕು ಎಂದು ಅವರು ಹೇಳುವಾಗ, ಜೋಶಿಯವರ ಬಗ್ಗೆ ನಾನು ಹೇಳಬೇಕೆಂದಿದ್ದ ಬಹುತೇಕ ಅಂಶಗಳನ್ನು ಕೃಷ್ಣೇಗೌಡರು cover ಮಾಡಿ ಆಯಿತು ಎಂದೆನಿಸಿತು. ಉದಾಹರಣೆಗೆ, ಜೋಶಿಯವರ ಲೇಖನದ ನನ್ನ ಓದು ಆರಂಭವಾದದ್ದು, ನಾನು ಇಂಜಿನಿಯರಿಂಗ್ ಓದುವಾಗ ಪರಾಗ ಸ್ಪರ್ಶ ಅಂಕಣದಲ್ಲಿ ಅವರು ಬರೆದಿದ್ದ Knight's tour ಎಂಬ ಗಣಿತೀಯ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಹದಿನಾಲ್ಕನೆಯ ಶತಮಾನದಲ್ಲೇ ಶ್ರೀವೈಷ್ಣವ ಪಂಥದ ಸಂತ, ಪಂಡಿತ ಶಿಖಾಮಣಿ ವೇದಾಂತ ದೇಶಿಕರ್ ತಾವು ಸಂಸ್ಕೃತದಲ್ಲಿ ರಚಿಸಿದ ಚಿತ್ರಕಾವ್ಯವೊಂದರಲ್ಲಿ ನೀಡಿದ್ದನ್ನು ಓದುತ್ತಾ ವಿಸ್ಮಯಗೊಳ್ಳುವ ಮೂಲಕ. ನಂತರವೂ, ಕಂಪ್ಯೂಟರಿನಲ್ಲಿ ಬಳಸುವ ಬೈನರಿ ಸಂಖ್ಯಾ ಪದ್ದತಿಗೂ, ಬಾಲ್ಯದಲ್ಲಿ ಕಲಿತ, ಆದಿ ಶಂಕರಾಚಾರ್ಯರಿಂದ ರಚಿತವಾದ ಗಣೇಶ ಪಂಚರತ್ನದಲ್ಲಿ ಬಳಸಿರುವ ಅಷ್ಟಾಕ್ಷರಿ ಛಂದಸ್ಸಿನ ಪ್ರಾಮಾಣಿಕಾ/ಪಂಚಚಾಮರ ವೃತ್ತಕ್ಕೂ ಇರುವ ಸಂಬಂಧವನ್ನು ಜೋಶಿಯವರ ಲೇಖನ ವಿವರಿಸುವುದನ್ನು ಓದುವಾಗ, ಬೆರಗಿನಿಂದ ಅವರ ಕುರಿತು ಅಭಿಮಾನ ಬೆಳೆಯದೇ ಇರಲು ಸಾಧ್ಯವಿರಲಿಲ್ಲ. ಜೋಶಿಯವರೇ ಹಾಗೆ. ಅವರ ಕುತೂಹಲಕರ ಕಣ್ಣಿಗೆ ಎಲ್ಲೆಲ್ಲೂ ಸ್ವಾರಸ್ಯಗಳು ಕಾಣುತ್ತವೆ, ಮತ್ತು ಹಾಗೆ ಕಂಡದ್ದೆಲ್ಲವನ್ನೂ ಅವರು ಹಂಚಿಕೊಂಡು ಸಮಾಧಾನ ಪಡುತ್ತಾರೆ. ಆದ್ದರಿಂದ ಇವರನ್ನು ಆಧುನಿಕ 'ಪಾವೆಂ' ಎನ್ನಬಹುದೇನೋ!


ಆದರೆ ಇವರ ಅಂಕಣಗಳು ಬುದ್ಧಿ ಪ್ರಚೋದಕ ಮಾತ್ರವಲ್ಲ, ಭಾವಪ್ರಚೋದಕವೂ ಹೌದು. ಒಂದು ಉದಾಹರಣೆಯೆಂದರೆ, ಜೋಶಿಯವರು ಶತಾವಧಾನಿ ಗಣೇಶರ ಮನೆಗೆ ಭೇಟಿಯಿತ್ತ ಸಂದರ್ಭವನ್ನು 'ಪರಾಗಸ್ಪರ್ಶ' ಅಂಕಣವಾಗಿಸಿದಾಗ ಅದಕ್ಕೆ ಅವರು ಕೊಟ್ಟ ಶೀರ್ಷಿಕೆ 'ಅನುರಾಗದ ರಂಧನ - ಸಂಭ್ರಮಿಸಿದ ಹೃನ್ಮನ'. ಜೋಶಿಯವರಿಗೆ ಗಣೇಶರಲ್ಲಿ ಕೇವಲ ವಿದ್ವತ್ತು, ಕವಿತ್ವ, ಬಹುಭಾಷಾ ಪಾಂಡಿತ್ಯ, ಅಗಾಧ ಸಾಹಿತ್ಯ ಸ್ಪುರಣೆ ಇವಷ್ಟೇ ಕಾಣಲಿಲ್ಲ. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಮ್ಮ ತಾಯಿಯ ಆರೈಕೆ ಮಾಡುತ್ತಿದ್ದ, ತಾವೇ ಅಡುಗೆ ಮಾಡಿ ತಾಯಿಗೆ ತುತ್ತು ಕೊಟ್ಟು ತಿನ್ನಿಸುತ್ತಿದ್ದ ಗಣೇಶರಲ್ಲಿ ಜೋಶಿಯವರು ಒಬ್ಬ ತಾಯಿಯನ್ನು ಕಂಡಿದ್ದಾರೆ. ಅವರು ಅದನ್ನು ಒಂದೇ ಸಾಲಿನಲ್ಲಿ ಹೇಳಿದ್ದು ಹೀಗೆ: "ಪಾತ್ರೆಗಳು ಅದೇ ಇವೆ, ಪಾತ್ರಗಳು ಬದಲಾಗಿವೆ" ಮುಂದೆ ಶತಾವಧಾನಿಗಳು ತಮ್ಮ ಸಾವಿರದ ಅವಧಾನವನ್ನು, ಕೆಲ ದಿನಗಳ ಹಿಂದಷ್ಟೇ ಅಗಲಿದ್ದ ತಮ್ಮ ತಾಯಿಗೆ ಸಮರ್ಪಿಸುತ್ತಾ ಭಾವುಕರಾಗಿ, ತಾನು ಇದುವರೆಗೂ ಎಷ್ಟು ಸಹಸ್ರ ಪದ್ಯಗಳನ್ನು ರಚಿಸಿದ್ದರೇನು, ಇಲ್ಲಿಯವರೆಗೂ ತಾಯಿಯ ಕುರಿತು ಒಂದೂ ಪದ್ಯ ರಚಿಸಲಿಲ್ಲವಲ್ಲ! ಎಂಬ ದುಃಖ ಉಮ್ಮಳಿಸಿ ಕಣ್ಣೀರಾದರು.. ಒಡನೆಯೇ "ಸೂರ್ಯ ಚಂದ್ರರಾದಿಯಾಗಿ ಎಲ್ಲ ವಸ್ತು ವಿಷಯಗಳ ಮೇಲೂ ಪದ್ಯ ಬರೆಯಬಹುದು.. ಕಡೆಗೆ ಆ ದೇವರ ಮೇಲೂ ಸಹಸ್ರಾಷ್ಟಕ ಇತ್ಯಾದಿಗಳನ್ನು ರಚಿಸಬಹುದು.. ಆದರೆ ತಾಯಿಯ ಕುರಿತು ಏನೆಂದು ಬರೆಯಲು ಸಾಧ್ಯ? ತಾಯಿ ಎಂದರೆ ಆನಂದ.. ಅದ್ವೈತಿಯಾದ ನನ್ನಂತವರಿಗೆ ಆನಂದವನ್ನು ಯಾವ ಶಬ್ದಗಳಲ್ಲಿ ಹಿಡಿದಿಡಲು ತಾನೇ ಸಾಧ್ಯ? ಅಶ್ರುಧಾರೆಯಲ್ಲಿ ತೊಯ್ದ ನನ್ನೀ ಚಕ್ಶುಗಳನ್ನೇ ನಿನಗೆ ಕಾವ್ಯವಾಗಿ ಅರ್ಪಿಸುತ್ತೇನೆ ಅಮ್ಮಾ.." ಎಂಬರ್ಥದ ಕಾವ್ಯವನ್ನು ವಾಚಿಸುವಷ್ಟರಲ್ಲಿ ಸಭಿಕರ ಹೃದಯಗಳೂ ಭಾರವಾಗಿ, ಕಣ್ಣುಗಳು ತೋಯ್ದಿದ್ದವು. ಕಾರ್ಯಕ್ರಮದ ನಡುವೆ ಹಸುಗೂಸೊಂದು ಜೋರಾಗಿ ಅಳಲು ಪ್ರಾರಂಭಿಸಿದಾಗ, ಸಭೆಯ ನಡುವೆ ಕಸಿವಿಸಿಗೊಂಡ ಅದರ ತಾಯಿ ಅದನ್ನೆತ್ತಿಕೊಂಡು ಹೊರನಡೆಯುತ್ತಿದ್ದಂತೆ, ಆ ಕೂಸಿನ ಅಳು-ತಾಯಿಯ ವಾತ್ಸಲ್ಯ, ಕ್ಷಣಕಾಲ ಶತಾವಧಾನಿಗಳ ಗಂಟಲನ್ನು ಕಟ್ಟುವಂತೆ ಮಾಡಿ, ಅವರ ಕಾವ್ಯಸೃಷ್ಟಿಯ ಓಘವನ್ನು ಕುಂದಿಸಿತ್ತು. ಆಗ ನನಗೆ ಜೋಶಿಯವರ 'ಅನುರಾಗದ ರಂಧನ' ನೆನಪಾಯಿತು. 

ಇಷ್ಟನ್ನು ಬರೆದ ಮೇಲೆ ’’ಎನಿತು ಜೀವದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ. ಅರಿತು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ" ಎಂಬ ಶಿವರುದ್ರಪ್ಪನವರ ಸಾಲುಗಳನ್ನು ಕೃಷ್ಣೇಗೌಡರು ನೆನಪಿಸಿದ್ದು ಅತ್ಯಂತ ಸೂಕ್ತವಾಗಿ ಕಂಡಿತು.

ಕೃಷ್ಣೇಗೌಡರಿಗೆ ನಮಸ್ಕಾರಗಳನ್ನು ತಿಳಿಸಿ, ಜೋಶಿಯವರೊಂದಿಗೆ ಒಂದು ಸೆಲ್ಫೀ ಕ್ಲಿಕ್ಕಿಸಿಕೊಂಡು, ಧನ್ಯತೆಯೊಂದನ್ನು ಅನುಭವಿಸುತ್ತಾ ಮನೆಯ ಹಾದಿ ಹಿಡಿದೆ.

- ವರುಣ್ ವಿ. ಮೈಸೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top