ಕೊಣಾಜೆ: ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ರಿ. ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಮಂಗಳ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ಕೊಣಾಜೆ ವಿಶ್ವ ಮಂಗಳ ಕಾಲೇಜಿನ ಸಭಾಂಗಣದಲ್ಲಿ 'ತೌಳವರಾಣಿ- ಕನ್ನಡ ಧ್ವನಿ, ಇತಿಹಾಸ ಚಿಂತನ - ಗೀತ ಗಾಯನ' ಕನ್ನಡ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಶನಿವಾರ ಜರಗಿತು. ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
'ಉಳ್ಳಾಲ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಪ್ರತಿಷ್ಠಾನ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದ ಅಬ್ಬಕ್ಕನ ಸ್ವಾತಂತ್ರ್ಯ ಹೋರಾಟದ ಕೆಚ್ಚು ಮತ್ತು ತ್ಯಾಗ ಬಲಿದಾನಗಳು ಜನ ಮಾನಸಕ್ಕೆ ಮುಟ್ಟುವಂತಾಗಲಿ'ಎಂದವರು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಫ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ 'ಬ್ರಿಟಿಷರು, ಡಚ್ಚರು - ಫ್ರೆಂಚರು ಬರುವ ಮೊದಲೇ ಇಲ್ಲಿಗೆ ಬಂದ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದವಳು, ವೀರರಾಣಿ ಅಬ್ಬಕ್ಕ.ಹಾಗಾಗಿ ಅವಳು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ. ಆದರೆ ಅವಳ ಹೆಸರು ಯಾವ ಪಠ್ಯದಲ್ಲಿಯೂ ಮಹತ್ವ ಪಡೆಯಲಿಲ್ಲ. ಅಬ್ಬಕ್ಕನ ಹೆಸರು ರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ಬರಬೇಕು.ಅದಕ್ಕಾಗಿ ಪ್ರತಿಷ್ಠಾನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ' ಎಂದು ತಿಳಿಸಿದರು.
ಅಬ್ಬಕ್ಕ ನಮ್ಮವಳು:
'ಅಬ್ಬಕ್ಕನ ಹೆಸರು ದೂರದ ಸ್ಪೈನ್ ನಲ್ಲಿದೆ, ಪೋರ್ಚುಗಲ್ ನಲ್ಲಿದೆ. ಆದರೆ ಯಾಕೆ ನಮ್ಮಲ್ಲಿ ಅವಗಣಿಸಲ್ಪಟ್ಟಿದೆ ಎನ್ನುವುದನ್ನು ಆಲೋಚಿಸಬೇಕು. ನಮ್ಮವರು ಎಂಬ ಭಾವ ಮೂಡಿದಾಗ, ಆ ಅಭಿಮಾನದಿಂದ ಆಗುವ ಕೆಲಸಗಳು ಮಹತ್ವ ಪಡೆಯುತ್ತವೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ತೌಳವ ರಾಣಿ ಅಬ್ಬಕ್ಕನ ಹೆಸರಿನ ಕಾರ್ಯಕ್ರಮದಲ್ಲಿ ತುಳು, ಕನ್ನಡ ಎರಡೂ ಇರುವುದು ನಿಜಕ್ಕೂ ಅರ್ಥಪೂರ್ಣ' ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಪನ್ಯಾಸಕಿ ಡಾ. ಸುಧಾರಾಣಿ ಹೇಳಿದರು. 'ನಾಡು - ನುಡಿ ರಕ್ಷಣೆಗೆ ರಾಣಿ ಅಬ್ಬಕ್ಕ ಸ್ಪೂರ್ತಿ' ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ವಿಶ್ವಮಂಗಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಪೂರ್ಣಿಮಾ ಡಿ. ಶೆಟ್ಟಿ, ಮಂಗಳೂರು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಪ್ರತಿಷ್ಠಾನದ ಕಾರ್ಯಕಾರಿಣಿ ಸದಸ್ಯೆ ವಿನುತ ಮಂಗಳೂರು, ಕ್ರೀಡಾ ಕಾರ್ಯದರ್ಶಿಗಳು ಲೋಕನಾಥ ರೈ, ತುಕಾರಾಮ್ ಉಳ್ಳಾಲ, ಸದಸ್ಯರಾದ ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ್, ಪುರುಷೋತ್ತಮ ಅಂಚನ್ ಉಪಸ್ಥಿತರಿದ್ದರು.
ವಿಶ್ವಮಂಗಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಪ್ರತಿಷ್ಠಾನದ ಕೋಶಾಧಿಕಾರಿ ಪಿ. ಡಿ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ತೋನ್ಸೆ ಪುಷ್ಕಳ್ ಕುಮಾರ್ ಬಳಗದವರಿಂದ ಸಿ.ಅಶ್ವತ್ ಸ್ಮರಣಾರ್ಥ ಕನ್ನಡ ಗೀತೆಗಳ ಸಂಗೀತ ರಸಮಂಜರಿ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ