ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು. ಹಾಗೆ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ. ಈ ಜಗತ್ತಿನಲ್ಲಿ ಒಳ್ಳೇದು ಕೆಟ್ಟದ್ದು ಎಲ್ಲಾ ಇದೆ, ಆದ್ರೆ ಆಯ್ಕೆ ಮಾತ್ರ ನಮಗೆ ಬಿಟ್ಟ ವಿಚಾರ. ಪ್ರತಿಯೊಬ್ಬರೂ ಒಂದೇ ತರ ಇರಲ್ಲ. ಎಲ್ಲಾ ಸಮಸ್ಸೆಗೂ ಪರಿಹಾರ ಇರದೆ ಇರಲ್ಲ. ಎಲ್ಲ ಬಗೆಯ ಬಿರುಗಾಳಿಯೂ ಬದುಕನ್ನು ಹಾಳು ಮಾಡಲೆಂದೇ ಬರಲ್ಲ. ಕೆಲವೊಂದು ನಿಮ್ಮ ದಾರಿಯನ್ನು ಸ್ವಚ್ಛಗೊಳಿಸಲು ಬರಬಹುದು. ಹಾಗೆ ಕೆಲವು ವ್ಯಕ್ತಿಗಳು ದೂರ ಆದ್ರೆ ಅದು ನಮ್ಮ ಒಳ್ಳೇದಕ್ಕೆ ಎಂದು ತಿಳಿಯೋಣ. ಸೋಲು ಬಂದರೆ ಮುಂದೊಂದು ದಿನ ಅದ್ಭುತವಾದ ಗೆಲುವು ನಮಗಾಗಿ ಕಾದಿದೆ ಎಂದು ನಂಬಿ ಮುನ್ನಡೆಯೋಣ. ಮಳೆಗೂ ಮೊದಲು ಆಕಾಶದಲ್ಲಿ ಕಾಮನಬಿಲ್ಲು ಮೂಡಿಬರುವಂತೆ ಸಂತೋಷವು ಜೀವನದಲ್ಲಿ ಆಗಾಗ ಬಂದು ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ. ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ. ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ ಸುಖದ ಬಾಗಿಲು ತೆರೆದೆ ತೆರೆಯುತ್ತೆ ಕಾಯುವ ತಾಳ್ಮೆ ಇರಬೇಕಷ್ಟೇ. ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ ನಿಮ್ಮ ಒಳ್ಳೆಯತನ ಎಲ್ಲರಿಗೂ ಇಷ್ಟವಾಗುತ್ತೆ. ಅದೇ ಎಲ್ಲರನ್ನು ನಿಮ್ಮತ್ತ ಸೆಳೆಯುತ್ತೆ.
ಪ್ರಪಂಚದಲ್ಲಿ ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡುವ ಅವಕಾಶ ಇರುವುದು ಮನುಷ್ಯನಿಗೆ ಮಾತ್ರ. ಕಾರಣ ವಿವೇಚನೆ ಎಂಬ ಶಕ್ತಿಯನ್ನು ಭಗವಂತ ಮಾನವನಿಗೆ ಮಾತ್ರ ನೀಡಿದ್ದಾನೆ ಅಲ್ವೇ. ಹಾಗಾಗಿ ಆತ ರಾಕ್ಷಸನೂ ಆಗಬಲ್ಲ, ಭಗವಂತನೂ ಆಗಬಲ್ಲ. ಮನುಷ್ಯ ಎಂಬ ಪ್ರಾಣಿಗೆ ಹೊರತು ಪಡೆಸಿ ಉಳಿದ್ಯಾವ ಪ್ರಾಣಿಗೂ ದೇವರು ಯೋಚಿಸು ಶಕ್ತಿ ನೀಡಿಲ್ಲ. ಅವೆಲ್ಲ ತಮ್ಮ ಪ್ರಕೃತಿಯಂತೆ ವ್ಯವಹರಿಸುತ್ತವೆ. ಅದಕ್ಕಾಗಿಯೇ ಪ್ರಪಂಚದ ಯಾವುದೇ ಪ್ರಾಣಿ ಇನ್ನೊಂದು ಪ್ರಾಣಿಯನ್ನು ವಂಚಿಸುವುದಿಲ್ಲ. ಆದರೆ ಮನುಷ್ಯ ಮೋಸ ಮಾಡದೇ ಬಿಡುವದಿಲ್ಲ. ಬೇರೆಯವರಿಂದ ತಾನಾಗೇನು ಬೇಕು ಅದು ಪಡೆದ ಮೇಲು ಅವರಿಗೆ ಕೇಡು ಬಗಿಯುವದ ಬಿಡುವದಿಲ್ಲ. ಮನುಷ್ಯ ಬಿಟ್ಟು ಮತ್ಯಾವ ಪ್ರಾಣಿಯೂ ಸ್ವಾರ್ಥಿಯಲ್ಲ. ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಅವು ಪರಸ್ಪರ ಕಾದಾಡಬಹುದು ಹೊಟ್ಟೆ ತುಂಬಿದ ನಂತರ ನಾಳೆಗೂ ಬೇಕೆಂದು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯನು ಮಾತ್ರ ತಾನು ತಿನ್ನುವದರ ಜೊತೆಗೆ ಸಂಗ್ರಹಿಸಿಟ್ಟುಕೊಳ್ಳುತ್ತಾನೆ. ತನಗಾಗಿ ಮಾತ್ರವಲ್ಲ ತನ್ನ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಸಂಗ್ರಹಿಸುತ್ತಾನೆ. ಸಂಗ್ರಹದ ಸಂದರ್ಭದಲ್ಲಿ ಬೇರೆಯವರಿಗೆ ಹಾನಿ ಮಾಡಲೂ ಹಿಂಜರಿಯುವುದಿಲ್ಲ. ಮನುಷ್ಯನ ಹೊರತಾಗಿ ಪ್ರಾಣಿಗಳಿಗೆ ಯಾವುದೇ ಜೀವಿ, ವಸ್ತು, ವಿಷಯಗಳ ಬಗ್ಗೆ ಮೋಹವೂ ಇರುವುದಿಲ್ಲ. ಆದರೆ ಮಾನವನು ಮೋಹಕ್ಕೊಳಗಾಗಿ ಬಂಧನಗಳಿಗೆ ಒಳಗಾಗಿ ನರಳುತ್ತಾನೆ. ಮೋಸ ಹೋಗುತ್ತಾನೆ, ಮೋಸ ಮಾಡುತ್ತಾನೆ.
ಮನುಷ್ಯ ಜನ್ಮನೆ ಒಂಥರಾ ವಿಚಿತ್ರ, ನಂಬೋಕು ಕಷ್ಟ, ನಂಬದೆ ಇರೋಕು ಕಷ್ಟ. ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು ಯಾರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ, ಅವರೆ ನಮಗೆ ಸುಲಭವಾಗಿ ಮೋಸ ಮಾಡುತ್ತಾರೆ. ಕೆಲವರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ ಇತರರ ಇಡೀ ಜೀವನದ ಸಂತೋಷವನ್ನು ಹಾಳು ಮಾಡುತ್ತಾರೆ. ಆದ್ದರಿಂದ ಅತಿಯಾಗಿ ಯಾರನ್ನು ನಂಬುವುದು ಬೇಡ, ದ್ವೇಷಿಸುವದು ಬೇಡ. ನಾವು ಜೀವನದಲ್ಲಿ ಕಳೆದುಕೊಂಡಿರುವುದರ ಬಗ್ಗೆ ಅತಿಯಾಗಿ ಚಿಂತಿಸುತ್ತಾ, ನಮ್ಮಲ್ಲಿ ಇರುವುದರ ಕುರಿತು ಮರೆತು ಬಿಡುತ್ತೇವೆ. ನಮಗೆ ಎದುರಾಗುವ ಸಮಸ್ಯೆಗಳಿಗೆ ಹೆದರಿ ಕೈ ಚೆಲ್ಲಿ ಕುಳಿತು ಬಿಡುತ್ತೇವೆ. ನಿಮಗೆ ಗೊತ್ತಾ, ನಮಗೆ ಬರುವ ಅದೆಷ್ಟೋ ಸಮಸ್ಯೆಗಳು ಒಂದು ಕಡೆ ನಷ್ಟ ಉಂಟುಮಾಡಿದಂತೆ ಅನಿಸಿದರೂ ಮತ್ತೆಲ್ಲೋ ಆ ನಷ್ಟಕ್ಕಿಂತ ದೊಡ್ಡ ಲಾಭ ಮಾಡಿ ಹೋಗಿರುತ್ತದೆ. ನಾವು ಸಮಸ್ಯೆಯ ಕುರಿತು, ಅದರಿಂದಾದ ತೊಂದರೆಯ ಕುರಿತೇ ಅತಿಯಾಗಿ ಚಿಂತಿಸುವುದರಿಂದ ನಮಗಾದ ಲಾಭದ ಕುರಿತು ತಿಳಿಯುವುದೇ ಇಲ್ಲ. ಇನ್ನೊಂದು ಅರ್ಥದಲ್ಲಿ ಅದೂ ಕೂಡ ನಮಗೆ ನಷ್ಟದಂತೆ ಕಾಣುತ್ತೆ. ಆದರೆ ನಾವು ಸಮಸ್ಯೆಯ ಆಚೆ ನಿಂತು ವಿಚಾರ ಮಾಡಿದರೆ ನಮಗಾದ ಲಾಭ, ಸಮಸ್ಯೆಯಿಂದಾದ ನಷ್ಟವನ್ನೇ ಮರೆಸಿಬಿಡುವುದರ ಮಟ್ಟಿಗೆ ಖುಷಿಯನ್ನು ನೀಡುತ್ತದೆ. ಬಿಟ್ಟು ಹೋದವರ ಬಗ್ಗೆ, ಕಳೆದುಕೊಂಡ ವಸ್ತು ಬಗ್ಗೆ ಯೋಚಿಸುತ್ತ ಕೂತಾಗ ನಮ್ಮ ಜೀವನ ನಿಂತ ನೀರಂತೆ ಆಗಿಬಿಡುವುದು. ನಿಮಗೇ ಗೊತ್ತು ನಿಂತ ನೀರಲ್ಲೇ ಪಾಚಿ, ಕೊಳೆ, ಕಸ ಕಡ್ಡಿಗಳು, ರೋಗಕಾರಕ ಸೊಳ್ಳೆಗಳು ಬೆಳೆಯುವುದೆಂದು. ನಮ್ಮ ಜೀವನ ಹೀಗಾಗೋದು ಬೇಡ ಅಲ್ವಾ...? ಹಳೆ ನೀರು ಹರೆದು ಹೋದಾಗಲೇ ಹೊಸ ನೀರು ಬರಲು ಸಾಧ್ಯ ಅಲ್ವಾ..? ಇದು ಗೊತ್ತಿದ್ರು ಕೊಚ್ಚೆಯಲ್ಲೇ ಬಿದ್ದು ಒದ್ದಾಡುವಾದೇಕೆ? ಆಚೆ ಬನ್ನಿ ಒಂದು ವಿಸ್ಮಯ ಜಗತ್ತು ನಿಮಗಾಗಿ ಕಾದಿದೆ.
ಜೀವ ಚಿಕ್ಕದು ಜೀವನ ದೊಡ್ಡದು ಆದ್ದರಿಂದ ಕೆಲಸಕ್ಕೆ ಬಾರದ ವಿಷಯ ಅಥವಾ ವ್ಯಕ್ತಿ ಬಗ್ಗೆ ಯೋಚ್ನೆ ಮಾಡೋದು ಬಿಟ್ಟು ನಮ್ಮ ಕನಸಿನತ್ತ ಹೆಜ್ಜೆ ಹಾಕೋಣ. ಸಾಯುವವನಿಗೆ ಒಂದೇ ದಾರಿ, ಸಾಧಿಸುವವನಿಗೆ ಸಾವಿರ ದಾರಿ ಎನ್ನುವ ಹಾಗೆ ಯಾವದೇ ಒಂದು ವಿಷಯದಲ್ಲಿ ಸೋತೆ ಎಂದು ಹೆದರದೆ ಮುನ್ನುಗ್ಗುವದೇ ಜೀವನ. ನಮ್ಮ ಗುರಿ ಸಾಧಿಸಲು ಕೇವಲ ಗುಂಡಿಗೆ ಒಂದಿದ್ದರೆ ಸಾಲದು ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು. ಉತ್ತಮ ಜನರ ಸಹವಾಸವಿರ್ಬೇಕು. ಒಳ್ಳೆಯ ಮಾತುಗಳನ್ನ ಕೆಳಬೇಕು, ಒಳ್ಳೇಮಾತುಗಳನ್ನ ಆಡಬೇಕು. ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಮಾತಿನಂತೆ ಮಾತು ಇತಿ ಮಿತಿಯಲ್ಲಿ ಇರಬೇಕು. ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಜೀವನದಲ್ಲಿ ಏನಾಗುತ್ತದೆಯೋ ಅದನ್ನು ಧೈರ್ಯವಾಗಿ ಎದುರಿಸುವ ಶಕ್ತಿ ನಮ್ಮಲ್ಲಿ ಬರಬೇಕು.
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರೂ ಎದುರಿಸಬೇಕು. ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ. ಹಾಗೆಂದು ನೀವು ಕೆಳಕ್ಕೆ ಇಳಿದು ಕೆಳಕ್ಕೆ ನೋಡುತ್ತಾ ನಿಲ್ಲಬಾರದು ಬದಲಿಗೆ ಇನ್ನು ಎತ್ತರಕ್ಕೆ ಏರಬೇಕು ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ. ಇನ್ನೊಬ್ಬರ ಬಗ್ಗೆ ಯಾವತ್ತೂ ಯೋಚಿಸಬೇಡಿ, ನಿಮ್ಮ ಲಕ್ಷ ಕೇವಲ ನಿಮ್ಮ ಗುರಿಯತ್ತ ಇರಲಿ. ಅದಕ್ಕೇನು ಕಷ್ಟ, ಶ್ರಮ ಪಡಬೇಕು ಅದನ್ನು ಪ್ರಾಮಾಣಿಕವಾಗಿ ಪ್ರಯತಿಸುವದು ತುಂಬಾ ಮುಖ್ಯ. ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗುವುದಿಲ್ಲ ಸಿಗಲೂ ಬಾರದು. ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ.
- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ