ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವದ ಅಂಗವಾಗಿ ಮಂಗಳವಾರ ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 90ನೆ ಅಧಿವೇಶನವನ್ನು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸುವರು.
ಶಿವಮೊಗ್ಗದ ಖ್ಯಾತ ವಿದ್ವಾಂಸ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು.
ಬಸ್ತಿಕಟ್ಟೆ ಚರ್ಚ್ ಧರ್ಮಗುರು ಮಾರ್ಸೆಲ್ ಪಿಂಟೊ, ವಿಜಯಪುರದ ಹಾಸಿಂಪೀರ ಇ ವಾಲೀಕರ ಮತ್ತು ಮೂಡಬಿದ್ರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡುವರು.
ವಸ್ತು ಪ್ರದರ್ಶನದಲ್ಲಿ ಇನ್ನೂರಕ್ಕೂ ಹೆಚ್ಚಿನ ಮಳಿಗೆಗಳಿದ್ದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.
ನಾಡಿನೆಲ್ಲೆಡೆಯಿಂದ ಜಾನಪದ ಕಲಾವಿದರು (ಕೊಂಬು, ಕಹಳೆ, ಕರಗ, ಕಂಸಾಳೆ) ಇತ್ಯಾದಿ ಕಲಾ ಸೇವೆ ಮಾಡುತ್ತಿದ್ದಾರೆ.
ಧರ್ಮಜಾಗೃತಿ, ಜ್ಞಾನ, ಸುಜ್ಞಾನ, ಮನೋರಂಜನೆಯ ತಾಣವಾಗಿ ಧರ್ಮಸ್ಥಳ ಬೆಳಗುತ್ತಿದೆ.
ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಭಕ್ತರು ದೇವರ ದರ್ಶನ ಪಡೆದು ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಧನ್ಯತೆಯನ್ನು ಹೊಂದುತ್ತಾರೆ.
ಲಕ್ಷದೀಪೋತ್ಸವ:
ನ. 23 ರಂದು ಬುಧವಾರ ರಾತ್ರಿ ಸಾಹಿತ್ಯ ಸಮ್ಮೇಳನ ಹಾಗೂ ಬಳಿಕ ಲಕ್ಷದೀಪೋತ್ಸವ ನಡೆಯಲಿದೆ. ನಾಡಿನೆಲ್ಲೆಡೆಯಿಂದ ಲಕ್ಷಕ್ಕೂಅಧಿಕ ಭಕ್ತರು ಸೇರುವ ನಿರೀಕ್ಷೆಇದೆ. ಎಲ್ಲೆಲ್ಲೂ ಶಿಸ್ತು, ಸ್ವಚ್ಛತೆ, ದಕ್ಷತೆಎದ್ದುಕಾಣುತ್ತಿದೆ.
ಕೆರೆಕಟ್ಟೆಉತ್ಸವ:
ಭಾನುವಾರ ರಾತ್ರಿ ಕೆರೆಕಟ್ಟೆ ಉತ್ಸವ ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ದೇವಸ್ಥಾನದ ಅಂಗಣದಲ್ಲಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಇರಿಸಿ 16 ಸುತ್ತು ಜಾಗಟೆ, ಶಂಖ, ನಾದಸ್ವರ, ಡೋಲು ಮತ್ತು ಸಂಗೀತದೊಂದಿಗೆ ಪ್ರದಕ್ಷಿಣೆ ನೆರವೇರಿತು. ವೈದಿಕರು ಸಕಲ ಶಾಸ್ತ್ರ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಬಳಿಕ ಗಜಪಡೆ ಮತ್ತು ಗೊಂಬೆಗಳ ಮೆರವಣಿಗೆಯೊಂದಿಗೆ ಕೆರೆಕಟ್ಟೆಗೆ 5 ಸುತ್ತು ಪ್ರದಕ್ಷಿಣೆ ನಂತರ ಕೆರೆಕಟ್ಟೆಯಲ್ಲಿ ಸಂಗೀತ, ನಾಗಸ್ವರ ಮೂಲಕ ಪೂಜಾ ವಿಧಿ-ವಿಧಾನ ನಡೆಯಿತು. ಭಕ್ತರು ಹಣತೆ ದೀಪ ಹಚ್ಚಿ ಸಂಭ್ರಮಿಸಿದರು. ಬಳಿಕ ದೇವರನ್ನು ಬೆಳ್ಳಿ ರಥದಲ್ಲಿ ವಿರಾಜಮಾನಗೊಳಿಸಿ ಮಂಗಳಾರತಿ ಬಳಿಕ ದೇಗುಲ ಸುತ್ತ ಪ್ರದಕ್ಷಿಣೆ ಹಾಕಿ ಗುಡಿಗೆ ಕರೆ ತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ