ಮಂಗಳೂರು ವಿವಿ ಮತ್ತು ನಾರ್ವೆಯ ಯುನಿವರ್ಸಿಟಿ ಆಫ್ ಅಗ್ಡರ್ ನಡುವೆ ಒಡಂಬಡಿಕೆ

Upayuktha
0

ಮಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ನಾರ್ವೆಯ ಯುನಿವರ್ಸಿಟಿ ಆಫ್ ಅಗ್ಡರ್ ಗಳು ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ.


ವಿಜ್ಞಾನ ತಂತ್ರಜ್ಞಾನ, ಸಮಾಜ ವಿಜ್ಞಾನಗಳು, ವ್ಯವಹಾರ ಆಡಳಿತ ಮತ್ತು  ದೈಹಿಕ ಶಿಕ್ಷಣ ಸೇರಿದಂತೆ, ಪರಸ್ಪರ ಆಸಕ್ತಿಗಳ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನಾ ಯೋಜನೆಗಳು; ಶೈಕ್ಷಣಿಕ ಪ್ರಕಟಣೆಗಳು ಮತ್ತು ವರದಿಗಳ ವಿನಿಮಯ; ಜಂಟಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಉಪನ್ಯಾಸಗಳು ಮತ್ತು ಸಮ್ಮೇಳನಗಳ ಸಂಘಟನೆ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯಕ್ಕೆ ಈ ಒಡಂಬಡಿಕೆ ಸಹಕಾರಿಯಾಗಲಿದೆ.


ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಸಂಶೋಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ತರಬೇತಿ, ತಂತ್ರಜ್ಞಾನದ ವರ್ಗಾವಣೆ ಮತ್ತು ದೀರ್ಘಾವಧಿಯ ವಾಣಿಜ್ಯೇತರ ಆಧಾರದ ಮೇಲೆ ಜ್ಞಾನದ ಪ್ರಸರಣ ಕ್ಷೇತ್ರಗಳಲ್ಲಿ ಪರಸ್ಪರ ಆಸಕ್ತಿಯನ್ನು ಗುರುತಿಸುವಲ್ಲಿ ಈ ಒಡಂಬಡಿಕೆಯು ಪೂರಕವಾಗಿದೆ. ಅಂತರರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುವಲ್ಲಿ ಉನ್ನತ ಶಿಕ್ಷಣದ ಪಾತ್ರ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡಲು ಇದು ಸಹಕಾರಿ, ಎಂದರು.


ಆಗ್ಡರ್ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ್ತಿ ಎಮ್ಮಾ ಎಲಿಸಬೆತ್ ಹಾರ್ನೆಮನ್, ವಿಭಾಗದ ಸಹಾಯಕ ನಿರ್ದೇಶಕಿ ಹೈಡಿ ಕ್ರಿಸ್ಟೆನ್ಸನ್ ಉಪಸ್ಥಿತರಿದ್ದರು. ಹೈಡಿ ಕ್ರಿಸ್ಟೆನ್ಸೆನ್ ಅವರು ಭಾರತದಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಈ ರೀತಿಯ ಒಪ್ಪಂದ ಇದೇ ಮೊದಲನೆಯದು ಎಂಬುದನ್ನು ಉಲ್ಲೇಖಿಸಿದರು. ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಐಐಟಿ, ಹೈದರಾಬಾದ್ನ ಸಾರ್ವಜನಿಕ ಮತ್ತು ಕಾರ್ಪೊರೇಟ್ ಸಂಬಂಧಗಳು ವಿಭಾಗದ ಡೀನ್‌ ಪ್ರೊ. ಸಿ. ಕೃಷ್ಣ ಮೋಹನ್ ಗೌರವ ಅತಿಥಿಗಳಾಗಿದ್ದರು.


ಅಗ್ದರ್ ವಿಶ್ವವಿದ್ಯಾಲಯದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಲಿಂಗಾ ರೆಡ್ಡಿ ಸೆಂಕೆರಮಡ್ಡಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ಬಿ.ಎಚ್. ಶೇಖರ್, ಎರಡು ವಿಶ್ವವಿದ್ಯಾನಿಲಯಗಳ ಒಡಂಬಡಿಕೆ ಕಾರ್ಯವನ್ನು ಸಂಯೋಜಿಸಿದರು.


ಮಂಗಳೂರು ವಿವಿ ಕುಲಸಚಿವ ಪ್ರೊ. ಸಿ. ಕೆ. ಕಿಶೋರ್ ಕುಮಾರ್ ಸ್ವಾಗತಿಸಿದರು. ಕುಲಸಚಿವರು (ಮೌಲ್ಯಮಾಪನ) ಪ್ರೊ.ಪಿ.ಎಲ್. ಧರ್ಮ, ಹಣಕಾಸು ಅಧಿಕಾರಿ ಪ್ರೊ.ಸಂಗಪ್ಪ ವೈ. ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ.ಮಂಜುನಾಥ ಪಟ್ಟಾಭಿ, ಕಲಾ ವಿಭಾಗದ ಡೀನ್‌ ಪ್ರೊ. ಜಯರಾಜ್ ಅಮೀನ್, ಕುಲಪತಿಗಳ ಕಾರ್ಯಾಲಯದ ವಿಶೇಷ ಅಧಿಕಾರಿ ಪ್ರೊ. ಪ್ರಶಾಂತ ನಾಯಕ್, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಪ್ರೊ.ಎ.ಎಂ. ಖಾನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ. ಎಚ್.ಎಲ್.ಶಶಿರೇಖಾ, ವಿವಿಧ ವಿಭಾಗಗಳ ವಿಶೇಷ ಅಧಿಕಾರಿಗಳಾದ ಡಾ. ಶೇಖರ್ ನಾಯ್ಕ್, ಡಾ. ಯಶಸ್ವಿನಿ ಬಟ್ಟಂಗಾಯ ಮತ್ತು ಡಾ.ಶ್ರೀನಾಥ್ ಬಿ.ಎಸ್ , ಉಪಕುಲಸಚಿವ ಹುಕ್ರಪ್ಪ ನಾಯ್ಕ ಡಿ. ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top