• ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾಕಾರ್ಯಕ್ರಮ ನಡೆಯಿತು.
• ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಷಟ್ಖಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿ ಗ್ರಂಥವನ್ನು ಬಿಡುಗಡೆಗೊಳಿಸಿದರು.
• ಮೂಡಬಿದ್ರೆಯ ಸಾಹಿತಿ ವೀಣಾ ರಘುಚಂದ್ರ ಶೆಟ್ಟಿ ಬೆಟಕೇರಿ ಅವರನ್ನು ಸನ್ಮಾನಿಸಲಾಯಿತು.
ಉಜಿರೆ: ಧರ್ಮಸ್ಥಳದಲ್ಲಿ ಗುರುವಾರರಾತ್ರಿ ಬಸದಿಯಲ್ಲಿ ಭಗವಾನ್‌ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಂಡವು.
ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ, ಶ್ರೀ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ, ಶ್ರುತದೇವಿ ಹಾಗೂ ಗಣಧರ ಪರಮೇಷ್ಠಿಗಳ ಅಷ್ಟವಿಧಾರ್ಚನೆ ಪೂಜೆ ಸುಶ್ರಾವ್ಯ ಗಾಯನದೊಂದಿಗೆ ಯಶಸ್ವಿಯಾಗಿ ನಡೆಯಿತು.
ಬಾಹುಬಲಿ ಸೇವಾ ಸಮಿತಿಯ ಶ್ರಾವಕರು, ಶ್ರಾವಕಿಯರಿಂದ ಸುಶ್ರಾವ್ಯವಾಗಿ ಭಕ್ತಿಗೀತೆಗಳ ಗಾಯನ ಪೂಜೆಗೆ ವಿಶೇಷ ಮೆರುಗನ್ನು ನೀಡಿತು.
ಷಟ್ಕಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿ ಗ್ರಂಥವನ್ನುಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಗ್ರಂಥದ ಬಗ್ಯೆ ಮಾಹಿತಿ ನೀಡಿದ ಖ್ಯಾತ ಸಾಹಿತಿ ಜೀವಂಧರಕುಮಾರ್ ಹೊಸಪೇಟ ಜೈನರ ತ್ರೈರತ್ನಗಳಾದ ಸಮ್ಯಕ್ ದರ್ಶನ , ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯದ ಅನುಷ್ಠಾನದಿಂದ ಮೋಕ್ಷ ಮಾರ್ಗ ಪ್ರಾಪ್ತಿಯಾಗುತ್ತದೆ. ಧವಳತ್ರಯ ಗ್ರಂಥಗಳು ಕೂಡಾ ಮೋಕ್ಷ ಪ್ರಾಪ್ತಿಗೆ ಮಾರ್ಗದರ್ಶನ, ಪ್ರೇರಣೆ ನೀಡುತ್ತವೆ. ಇವುಗಳ ಸ್ವಾಧ್ಯಾಯದಿಂದ ಧರ್ಮ ಪ್ರಭಾವನೆಯಾಗುತ್ತದೆ ಎಂದರು.
ಮೂಡಬಿದ್ರೆಯ ಖ್ಯಾತ ಸಾಹಿತಿ ವೀಣಾ ರಘುಚಂದ್ರ ಶೆಟ್ಟಿ ಬೆಟ್ಕೇರಿ ಅವರನ್ನು ಡಿ, ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ, ಶ್ರದ್ಧಾ ಅಮಿತ್, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಸನ್ಮಾನಿಸಿದರು.
ಅಭಿನಂದನಾ ಭಾಷಣ ಮಾಡಿದ ಹೇಮಾವತಿ ಹೆಗ್ಗಡೆಯವರು, ವೀಣಾ ರಘುಚಂದ್ರ ಶೆಟ್ಟಿಅವರು ಆದರ್ಶ ಗೃಹಿಣಿಯಾಗಿ, ಶ್ರಾವಕಿಯಾಗಿ ತಮ್ಮ ವಿಶಿಷ್ಟ ಕವಿತಾ ಶಕ್ತಿಯಿಂದ ಆದಿನಾಥ ವೈಭವದ ಹಾಡುಗಳನ್ನು ಅರ್ಥಗರ್ಭಿತವಾಗಿ ರಚಿಸಿ ಸುಶ್ರಾವ್ಯವಾಗಿ ಹಾಡಿ, ಧರ್ಮಪ್ರಭಾವನೆ ಮಾಡಿದ್ದಾರೆ. ಮೂಲತಃ ನೆಲ್ಲಿಕಾರಿನವರಾದ ಆಕೆ ಬಾಲ್ಯದಿಂದಲೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಅನೇಕ ವೃತ-ನಿಯಮಗಳ ಪಾಲನೆಯೊಂದಿಗೆ, ನೋಂಪಿಗಳನ್ನು ಮಾಡಿ, ತ್ಯಾಗಿಗಳ ಸೇವೆ ಮಾಡಿ ಅವರ ಆಹಾರ-ವಿಹಾರದಲ್ಲಿಯೂ ಶ್ರದ್ಧಾ-ಭಕ್ತಿಯಿಂದ ಸೇವೆ ಮಾಡಿ ಪುಣ್ಯ ಸಂಚಯ ಮಾಡಿದ್ದಾರೆ. ಅವರ ಸರಳ ಜೀವನ, ಉನ್ನತ ಚಿಂತನೆ ಸ್ತುತ್ಯಾರ್ಹವಾಗಿದೆ ಎಂದು ಅಭಿನಂದಿಸಿದರು.
ಶ್ರದ್ಧಾಅಮಿತ್ ಸನ್ಮಾನಪತ್ರ ವಾಚನ ಮಾಡಿದರು. ಸನ್ಮಾನಕ್ಕೆ ಕೃತಜ್ಞತೆ ವ್ಯಕ್ತ ಪಡಿಸಿದ ವೀಣಾರಘುಚಂದ್ರ ಶೆಟ್ಟಿ, ತಾನು ಹಸಿವು, ಬಾಯಾರಿಕೆಯನ್ನೂ ಮರೆತು ಒಂದೂವರೆ ವರ್ಷದಲ್ಲಿ ತನ್ಮಯತೆಯಿಂದ ಕೃತಿಯನ್ನು ರಚಿಸಿರುವುದಾಗಿ ಹೇಳಿದರು.
ಆದರ್ಶಜೈನ ಮಹಿಳಾ ರತ್ನ ಪ್ರಶಸ್ತಿ ಪುರಸ್ಕೃತರಾದ ಅನಿತಾ ಸುರೇಂದ್ರ ಕುಮಾರ್ ಅವರನ್ನೂ ಸನ್ಮಾನಿಸಲಾಯಿತು. ಸಾವಿತ್ರಿ ಪುಷ್ಪದಂತ ಅಭಿನಂದನಾ ಭಾಷಣ ಮಾಡಿದರು.
ಅಡುಗೆ ತಜ್ಞರಾದ ಯುವರಾಜ ಹೆಗ್ಡೆ ನಾವರ ಮತ್ತು ದಿನೇಶ್ ಕಾವಳಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ