ಹಲವಾರು ವರ್ಷಗಳಿಂದ ತಲತಲಾಂತರವಾಗಿ ಬೆಳೆದು ಬಂದ ವೈದ್ಯ ಪದ್ಧತಿ ಎಂದರೆ ಅದು ನಾಟಿ ಔಷಧಿ. ಬೇರೆ ಬೇರೆ ಕಾಯಿಲೆಗಳಿಗೆ ರಾಮಬಾಣವಾಗಿ ಔಷಧಿಗಳನ್ನು ಕೊಟ್ಟು ಜನರ ಬದುಕ ಬೆಳಕಾಗಿಸುವ ನಾಟಿ ವೈದ್ಯರು ನಮ್ಮೆಲ್ಲರ ನಡುವೆ ಹಲವರಿದ್ದಾರೆ. ಈಗಲೂ ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ತಲೆ ಎತ್ತಿ ನಿಂತಿರುವ ನಾಟಿ ವೈದ್ಯರ ಬಳಿ ಊರಾ-ಪರವೂರ ಜನರು ತಮ್ಮ ಸಮಸ್ಯೆಗೆ ಔಷಧಿಯನ್ನರಸಿ ಬರುತ್ತಾರೆ. ಇಂತಹ ನಾಟಿವೈದ್ಯರ ಸಾಲಿಗೆ ಸೇರಿ ಹಲವಾರು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆ ಉಸಿರಾಟದ ತೊಂದರೆಗೆ, ತಲೆನೋವು ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿಗಳನ್ನು ನೀಡಿ ರೋಗಿಗಳು ಗುಣಮುಖರಾಗುವುದರಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರು ಭಾಸ್ಕರ ಬಂಡೆಡ್ಕ.
ಭಾಸ್ಕರ ಬಂಡೆಡ್ಕರವರು ಮುತ್ತಪ್ಪ ಗೌಡ ಮತ್ತು ತಂಗಮ್ಮ ದಂಪತಿಗಳ ಪುತ್ರರಾಗಿ 1950ರಲ್ಲಿ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಬಂಡೆಡ್ಕ ಮನೆತನದಲ್ಲಿ ಜನಿಸುತ್ತಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಚೆಂಬುವಿನಲ್ಲಿ ಪೂರೈಸುತ್ತಾರೆ. ಪ್ರಾರಂಭದಲ್ಲಿ ಕೃಷಿಕರಾಗಿದ್ದ ಇವರು ತದನಂತರ ಸ್ವಾವಲಂಬಿಯಾಗಿ 1971ರಲ್ಲಿ ತನ್ನದೇ ಆದ ಅಂಗಡಿಯೊಂದನ್ನು ಪ್ರಾರಂಭಿಸಿದರು. ಪತ್ನಿ ಜಯಶ್ರೀ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಬದುಕ ಕಟ್ಟಿಕೊಂಡರು.
ನಾಟಿ ಔಷಧಿ ನೀಡುವ ಈ ಕಲೆ ಇವರಿಗೆ ವಂಶ ಪಾರಂಪರ್ಯ ಬಳುವಳಿಯಾಗಿ ಬಂದತಕ್ಕದ್ದು. ಅಜ್ಜಿ ಗೌರಮ್ಮ ಬಹಳ ಹಿಂದೆಯೇ ರೋಗಸ್ಥರಿಗೆ ಔಷಧಿಯನ್ನು ನೀಡಿ ಜನರಿಗೆ ನೆರವಾದವರು. ತನ್ನ ಅಜ್ಜಿಯನ್ನು ನೋಡಿ ತಿಳಿದು ಅವರ ಆಶೀರ್ವಾದ ಪಡೆದು ಔಷಧಿ ನೀಡಲು ಪ್ರಾರಂಭಿಸಿದರು.
ಜನರ ಬಾಯಿಂದ ಬಾಯಿಗೆ ಹರಡಿದ ಮನೆಮದ್ದು ಇಂದು ಅನೇಕರನ್ನು ತಲುಪಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡುವ ಇವರ ಔಷಧೀಯ ಪ್ರಯೋಜನ ಪಡೆದವರು ಹಲವರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇವರು ಔಷಧಿಯನ್ನು ನೀಡುತ್ತಾರೆ. ಹಳ್ಳಿಗಳಲ್ಲಿ ಸಿಗುವ ಗಿಡಮೂಲಿಕೆಗಳೇ ಇವರ ಔಷಧಿಗೆ ವಸ್ತುಗಳು. ಸುಳ್ಯ, ಪುತ್ತೂರು, ಧರ್ಮಸ್ಥಳ, ಕುಶಾಲನಗರ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಊರುಗಳಿಂದ ಇವರ ಔಷಧಿಗಾಗಿ ಜನರು ಬರುತ್ತಾರೆ ಹಾಗೂ ಗುಣಮುಖರಾಗಿದ್ದಾರೆ. ದೂರದ ಮುಂಬೈಗಳಿಗೂ ಔಷಧಿಗಳನ್ನು ರವಾನಿಸಿದ್ದಾರೆ. ಔಷಧಿಯನ್ನು ಇವರು ಅಮಾವಾಸ್ಯೆ ದಿನದಂದು ನೀಡುತ್ತಾರೆ ಮೂರು ಅಮಾವಾಸ್ಯೆ ದಿನಗಳು ಔಷಧಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಇವರ ಹಳ್ಳಿ ಮದ್ದನ್ನು ಪಡೆದ ಅನೇಕರು ಗುಣಮುಖರಾಗಿರುವುದು ಇವರ ಔಷಧಿಯ ಹಿರಿಮೆ.
ಔಷಧಿ ನೀಡುವುದರೊಂದಿಗೆ ಇವರು ಹಲವು ಹವ್ಯಾಸಗಳುಳ್ಳವರಾಗಿದ್ದಾರೆ. ಯಕ್ಷಗಾನದಲ್ಲಿ ಆಸಕ್ತಿಯುಳ್ಳವರು, ಭಜನೆ ಮಾಡುವುದು ಇವರ ಕಲೆ. ವಚನಕಾರರ ವಚನಗಳನ್ನು ಕಂಠಪಾಠವಾಗಿ ಹೇಳುತ್ತಾ ತನ್ನ ಅಂಗಡಿಗೆ ಬಂದವರೊಂದಿಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅದಲ್ಲದೆ ಗುಡಿಕೈಗಾರಿಕೆ ಕಲೆಯನ್ನೂ ಹೊಂದಿದ್ದಾರೆ. ಬುಟ್ಟಿ ಹೆಣೆಯುವುದು, ಗೆರಟೆಯ ಸೌಟುಗಳನ್ನು ಮಾಡುವುದು ಇನ್ನಿತ್ಯಾದಿ ಕೆಲಸಗಳನ್ನು ತಿಳಿದವರಾಗಿದ್ದಾರೆ.
ನಾನು ಮಾಡುವ ಕೆಲಸದಲ್ಲಿ ನನಗೆ ತುಂಬಾ ಸಂತೋಷವಿದೆ. ಜನರಿಗೆ ನನ್ನಿಂದಾದ ಸಹಾಯ ಮಾಡಬೇಕೆನ್ನುವುದು ನನ್ನ ಮನದ ಆಸೆ. ನಾನು ಔಷಧಿ ನೀಡಿ ಜನರಿಂದ ಏನೂ ಅಪೇಕ್ಷೆ ಅಥವಾ ನಿರೀಕ್ಷೆ ಮಾಡುವುದಿಲ್ಲ. ನನಗೆ ಇರುವುದೊಂದೇ ಅಪೇಕ್ಷೆ ಅದು ಔಷಧಿ ಪಡೆದುಕೊಂಡವರು ಸಂಪೂರ್ಣವಾಗಿ ಗುಣಮುಖರಾಗಬೇಕು ಎನ್ನುವುದು. ಆದರೂ ಔಷಧಿ ಪಡೆದವರು ಗುಣಮುಖರಾಗಿ ಸಂತೋಷದಿಂದ ಬಂದು ನನಗೆ ಉಡುಗೊರೆ ಕಾಣಿಕೆಗಳನ್ನು ಕೊಡುತ್ತಾರೆ ಎನ್ನುತ್ತಾರೆ, ನಾಟಿ ವೈದ್ಯ ಭಾಸ್ಕರ ಬಂಡೆಡ್ಕ.
ಇವರು ನೀಡುವ ನಾಟಿ ಔಷಧಿಯಿಂದ ಇಂದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅನೇಕರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಂಡಿದ್ದಾರೆ. ಜನರಿಗೆ ಸೇವೆ ಮಾಡಿದ ಪುಣ್ಯ ಇವರದ್ದು. ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡುವ ಇವರ ಕಾರ್ಯಕ್ಕೆ ಕೃತಜ್ಞರಾಗೋಣ. ಮುಂದೆಯೂ ಅಗತ್ಯ ಇರುವವರಿಗೆ ಇವರ ಸೇವೆಯು ನಿರಂತರವಾಗಿ ಮುಂದುವರೆಯುವಂತಾಗಲಿ ಎಂದು ಆಶಿಸೋಣ.
-ಲತಾ ಚೆಂಡೆಡ್ಕ ಪಿ
ಪ್ರಥಮ ಬಿ.ಎ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ