ಪುತ್ತೂರು: ಪಕ್ಷಪಾತ ಮಾಡುವುದು ಮನುಷ್ಯನೇ ಹೊರತು, ಪ್ರಕೃತಿಯಲ್ಲ. ಪ್ರಕೃತಿ ಎಂದೂ ಕೂಡ ಬೇಧಭಾವ ಮಾಡಲಾರದು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸೂಕ್ತ ಪರಿಸರ ಅಗತ್ಯ. ಕೆಲವು ವಿದ್ಯಾರ್ಥಿಗಳು ಹಿಂದೆ ಉಳಿಯಲು ಕಾರಣ ಅವರು ಬೆಳೆದು ಬಂದಿರುವ ಪರಿಸರ. ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಟ್ಟು ಓದದೇ, ಇಷ್ಟಪಟ್ಟು ಓದಿದರೆ ಎಲ್ಲವೂ ದಕ್ಕುತ್ತದೆ. ಬದುಕಲ್ಲಿ ಮುಂದೇನಾಗಬೇಕು ಎಂದು ದೃಢ ನಿರ್ಧಾರವಿದ್ದರೆ ಸಾಧನೆ ಕಷ್ಟವಲ್ಲ. ಆದುದರಿಂದ ತಾವೇನಾಗಬೇಕು ಎಂದು ಸಂಕಲ್ಪ ಮಾಡಿಕೊಂಡು, ಇತರರ ಇಷ್ಟಗಳಿಗೆ ಮಣಿಯದೇ ನಿಮ್ಮ ಕನಸನೇನು ಎಂಬುದನ್ನು ಮನನ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದು "ಥಟ್ ಅಂತ ಹೇಳಿ" ರಸಪ್ರಶ್ನೆ ಕಾರ್ಯಕ್ರಮದ ನಿರೂಪಕ ಡಾ. ನಾ. ಸೋಮೇಶ್ವರ ಹೇಳಿದರು.
ಅವರು ಇಲ್ಲಿನ ಪುತ್ತೂರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇವರ ಸಹಯೋಗದಲ್ಲಿ ನಡೆದ ಪ್ರೇರಣ -2022 ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು: ಡಾ ಕುಶ್ವಂತ್
ಖ್ಯಾತ ಬರಹಗಾರ, ಮಕ್ಕಳ ವೈದ್ಯ ಮೇಜರ್ ಡಾ ಕುಶ್ವಂತ್ ಮಾತನಾಡಿ, ಉತ್ತಮ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವಲ್ಲಿ, ಶಿಕ್ಷಕರ ಪಾತ್ರ ಮಹತ್ತರವಾದುದು. ಯಾಕೆಂದರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಮಾದರಿಯಾಗಿಟ್ಟುಕೊಂಡು ಅವರ ಚಲನವಲನಗಳನ್ನು ಗಮನಿಸುತ್ತಾ ಬೆಳೆಯುತ್ತಾರೆ. ಪ್ರತಿಭೆ ಎಲ್ಲರಲ್ಲೂ ಇರುತ್ತದೆ, ಆದರೆ ಅದನ್ನು ಹೊರತಲು ಆತ್ಮವಿಶ್ವಾಸ, ತಮ್ಮತನದ ಮೇಲೆ ನಂಬಿಕೆ ಅತೀ ಅಗತ್ಯವಾದುದು. ಕೆಲವು ಸಲ ಸಮಾಜ ನಮ್ಮ ಮೇಲೆ ಒತ್ತಡ ಹಾಕುತ್ತಲೇ ಇರುತ್ತದೆ. ಸಲಹೆಗಳನ್ನು ನೀಡುತ್ತಿರುತ್ತದೆ. ಆದರೆ ಆ ಸಂದರ್ಭದಲ್ಲಿ ಇನ್ನೊಬ್ಬರ ಹೇರಿಕೆಗೆ ಬಲಿಯಾಗದೆ ತಮಗೇನು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರೊಂದಿಗೆ ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು, ದೌರ್ಬಲ್ಯವನ್ನು ತಿಳಿದುಕೊಂಡು ಬದುಕಿನಲ್ಲಿ ತಾವೇನಾಗಬೇಕೆಂಬುದು ನಿರ್ಧಾರ ಮಾಡಬೇಕು ಎಂದು ಹೇಳಿದರು.
ಬೋಳಂತಿಮುಗೇರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಠಲ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಇತರರು ಹೇಳಿದುದನ್ನು ಕೇಳುವ ಮನಸ್ಥಿತಿ ಹೊಂದಿರಬೇಕು. ಜೀವನ ಮೌಲ್ಯಗಳೇನು ಎಂದು ಅರ್ಥ ಮಾಡಿಕೊಳ್ಳಬೇಕು.
ಕಲಿತುಕೊಳ್ಳಲಿರುವ ತಂತ್ರಜ್ಞಾನವನ್ನು ಕಳೆದುಕೊಳ್ಳಲು ಬಳಸುತ್ತಿರುವುದು ಶೋಚನೀಯ ಸಂಗತಿ. ಅಂತೆಯೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಕುಗ್ಗಿ ಹೋಗುವ ವಿದ್ಯಾರ್ಥಿಗಳು ಮಾನಸಿಕವಾಗಿ ಗಟ್ಟಿಯಾಗಬೇಕು ಎಂದು ನುಡಿದರು.
ಡಾ. ನಾ. ಸೋಮೇಶ್ವರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಎಂ, ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುನಿತಾ ಎಂ, ಸಂಚಾಲಕ ಹೇಮನಾಥ್ ಶೆಟ್ಟಿ, ಪುತ್ತೂರು ನಗರಸಭೆಯ ಸದಸ್ಯ ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.
ಆಕಾಂಕ್ಷ ಚಾರಿಟೇಬಲ್ ಟ್ರಸ್ಟೀ ಗಣೇಶ್ ಹೆಗ್ಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ