ಸೌರಶಕ್ತಿ ಬಳಕೆ ಸುಸ್ಥಿರ ಅಭಿವೃದ್ಧಿಯ ಪಥಕ್ಕೆ ಮುನ್ನಡೆ: ಡಾ. ಶಾಲಿನಿ ರಜನೀಶ್‌

Upayuktha
0

'ಜಾಗತಿಕ ಸುಸ್ಥಿರ ಅಭಿವೃದ್ಧಿ 7ರ ಪರಿಸರ ವ್ಯವಸ್ಥೆ ಕುರಿತ ದಕ್ಷಿಣ ದೇಶಗಳ ಜಾಗತಿಕ ಸಮಾವೇಶ 2022’



ಬೆಂಗಳೂರು: ಕರ್ನಾಟಕದಾದ್ಯಂತ ಶೇ. 100ರಷ್ಟು ವಿದ್ಯುದೀಕರಣವನ್ನು ಹೊಂದಿದ್ದರೂ, ಒಟ್ಟಾರೆ ನಿರ್ವಹಣೆಯೂ ಸೇರಿದಂತೆ ಸಂಗ್ರಹಣೆ, ವಿತರಣೆ, ಹಣಕಾಸು, ಕಾರ್ಯಾಚರಣೆಗಳ ವಿಷಯವಾಗಿ ಸವಾಲುಗಳಿವೆ. ಹಾಗಾಗಿ, ಸೌರಶಕ್ತಿಯನ್ನು ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳೊಂದಿಗೆ ಬಳಸಿಕೊಂಡು ಮುನ್ನೆಡೆಯುವುದು ತಕ್ಷಣದ ಆದ್ಯತೆಯಾಗಿದೆ ಎಂದು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು. 


ಸೆಲ್ಕೋ ಫೌಂಡೇಷನ್ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಬೆಂಗಳೂರು ಇವರ ಸಹಯೋಗದಲ್ಲಿ ಬೆಂಗಳೂರಿನ ಐಐಎಂಬಿಯಲ್ಲಿ ನಡೆಯುತ್ತಿರುವ ಎರಡು ದಿನಗಳ 'ಜಾಗತಿಕ ಸುಸ್ಥಿರ ಅಭಿವೃದ್ಧಿ 7ರ ಪರಿಸರ ವ್ಯವಸ್ಥೆ ಕುರಿತ  ದಕ್ಷಿಣ ದೇಶಗಳ ಜಾಗತಿಕ ಸಮಾವೇಶ 2022’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಬೀದಿ ವ್ಯಾಪಾರಿಗಳಿಗೆ ಮೂಲ ಸೌಕರ್ಯ ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಕಾರ್ಯಕ್ರಮದಿಂದ ಸಹಾಯವಾಯಿತು. ಆದರೆ, ಒಂದು ದಿನದ ನಂತರ ಮಾರಾಟವಾಗದ ಮತ್ತು ಹಾಳಾಗುವ ಉತ್ಪನ್ನಗಳನ್ನು ಸಂರಕ್ಷಿಸುವ ಸವಾಲು ಎದುರಾಯಿತು. ಆದರೆ, ಸೆಲ್ಕೋ  ಫೌಂಡೇಶನ್ ಸಹಭಾಗಿತ್ವದಲ್ಲಿ ವೀಕೆಂದ್ರೀಕೃತ ನವೀಕರಿಸಬಹುದಾದ ಇಂಧನದ ಬೆಂಬಲಿತ  ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಅನೇಕ ರೈತರಿಗೆ ನೀಡಲಾಯಿತು. ಇದರಿಂದ  ಈ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಕೆಡದಂತೆ ಸಂಗ್ರಹಿಸಿಡಲು ಮತ್ತು ಮರುದಿನ ಮಾರಾಟ ಮಾಡಲು ಸಾಧ್ಯವಾಯಿತು ಎಂದು ಸೆಲ್ಕೋದ ಸಹಭಾಗಿತ್ವವನ್ನು ಅವರು ಶ್ಲಾಘಿಸಿದರು.

ಸೆಲ್ಕೋದ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವು ರಾಯಚೂರು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳನ್ನು ಸೌರಶಕ್ತಿ ಆಧಾರಿತ ವ್ಯವಸ್ಥೆಯಿಂದ ನಡೆಯುವಂತೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳನ್ನು ಸ್ಮಾರ್ಟ್ ಕ್ಲಾಸ್  ಮಾಡಬೇಕಾದ ಅಗತ್ಯವಿದೆ ಎಂದರು.


ಅಂತಾರಾಷ್ಟ್ರೀಯ ಸೌರಶಕ್ತಿ ಸಂಘಟನೆ (ಐಎಸ್ಎ)ಯ ಮಹಾ ನಿರ್ದೆಶಕರಾದ ಡಾ. ಅಜೇಯ್ ಮಾಥೂರ್ ಮಾತನಾಡಿ, ಪಳಯುಳಿಕೆ ಇಂಧನಕ್ಕಿಂತ ಅಗ್ಗದಲ್ಲಿ ದೊರೆಯುವ ಸೋಲಾರ್ ಶಕ್ತಿಯನ್ನು ಹೆಚ್ಚಾಗಿ ಬಳಸದಿದ್ದರೆ ಜನರ ಜೀವನ ದುಬಾರಿಯಾಗಲಿದೆ. ಭಾರತದಂತೆಯೇ ಆಫ್ರಿಕಾ ದೇಶಗಳಲ್ಲಿ ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ, 20 ಸ್ಟಾರ್ಟ್ ಅಪ್ ಯೋಜನೆಗಳಿಗೆ ಪ್ರೋತ್ಸಾಹ ನೀಡಲು ಅಂತಾರಾಷ್ಟ್ರೀಯ ಸೌರಶಕ್ತಿ ಸಂಘಟನೆ ನಿರ್ಧರಿಸಿದ್ದು, ಆಸಕ್ತರು 2023ರ ಮಾರ್ಚ್ 31ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದರು. 


ಸೆಲ್ಕೋ ಫೌಂಡೇಷನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ ಅವರು ಮಾತನಾಡಿ, ಏಷ್ಯಾ ಉಪಖಂಡ ಮತ್ತು ಆಫ್ರಿಕಾ ದೇಶಗಳ ಜನರು ಆರೋಗ್ಯ ಮತ್ತು ಜೀವನೋಪಾಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಈ  ಹಿನ್ನೆಲೆಯಲ್ಲಿ, ಈ ದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಇದು ಬಹಳ ಮಹತ್ವದ ಕಾಲಘಟ್ಟವಾಗಿದೆ ಎಂದರು.


ಇದೇ ಸಂದರ್ಭದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಸಂಪನ್ಮೂಲ ಕೇಂದ್ರ (NHSRC) ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಸೆಲ್ಕೋ ಫೌಂಡೇಷನ್ ನ 1000 ಸೌರ ಆಧಾರಿತ ಆರೋಗ್ಯ ವ್ಯವಸ್ಥೆಗಳ ಅಳವಡಿಕೆಯ ಮೈಲುಗಲ್ಲನ್ನು ದಾಟಿದ ಸಂಭ್ರಮದ ಜೊತೆಗೆ ಮಣಿಪುರದ ಸಗಾಂಗ್ ಹಾಗೂ ಇಥಿಯೋಪಿಯಾದ ಸಗ್ಲಾನ್ ವಾಜಿಯ ಸೌರಶಕ್ತಿ ಆಧರಿತ ಆರೋಗ್ಯ ಕೇಂದ್ರಗಳನ್ನು ಏಕಕಾಲಕ್ಕೆ ಉದ್ಘಾಟಿಸಲಾಯಿತು. 

 

'ಜಾಗತಿಕ ಸುಸ್ಥಿರ ಅಭಿವೃದ್ಧಿ 7ರ ಪರಿಸರ ವ್ಯವಸ್ಥೆ ಕುರಿತ ದಕ್ಷಿಣ ದೇಶಗಳ ಜಾಗತಿಕ ಸಮಾವೇಶ 2022’ರ ಉದ್ಘಾಟನಾ ಸಮಾರಂಭದಲ್ಲಿ ಸೆಲ್ಕೋ ಫೌಂಡೇಷನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ, ಟಿಎಂಎಫ್ಐನ ಕಾರ್ಯನಿರ್ವಾಹಕ ನಿರ್ದೇಶಕರಾದ ವಿನ್ನಿ ಟೆರ್ರಿ, ಸಿಯೆರಾ ಲಿಯೋನ್ ನ ಸಂಸತ್ ಸದಸ್ಯರಾದ ಕೀಕುರಾ ಕ್ರಿಸ್ಟೋಪಾ ವಂಡಿ, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಇಥಿಯೋಪಿಯಾದ ಪ್ರಿಸೈಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ಪಾಲುದಾರರಾದ ಹೆನೋಕ್ ಅಸೆಫಾ, ENN ನಲ್ಲಿ ತಾಂತ್ರಿಕ ಸಲಹೆಗಾರ ಮತ್ತು SEforALL ನಲ್ಲಿ ಸಿಯೆರಾ ಲಿಯೋನ್ ರಾಷ್ಟ್ರೀಯ ಇಂಧನ ಸಲಹೆಗಾರರಾದ ಪಾಲ್ ಟಿ. ಯಿಲಿಯಾ, ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲಂಕೇವ್, ಸೆಲ್ಕೋ ಫೌಂಡೇಷನ್ ನಿರ್ದೇಶಕರಾದ ಹುದಾ ಜಾಫರ್ ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top