ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಮುಖ ದೇವಿ ಕ್ಷೇತ್ರವಾದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವು 'ಭೋಗ್' ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದೆ. ದೇವಸ್ಥಾನದ ಪ್ರಸಾದ ಭೋಜನದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಗಣಿಸಿ ನೀಡಲಾಗುತ್ತಿರುವ ಈ ಪ್ರಮಾಣಪತ್ರ ಹೊಂದಿದ ಕೇರಳದ ಏಕಮಾತ್ರ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಈಗ ಮಲ್ಲ ಶ್ರೀಕ್ಷೇತ್ರ ಪಾತ್ರವಾಗಿದೆ.
ಪ್ರಸಾದ ಗುಣಮಟ್ಟವನ್ನು ಪರಿಶೀಲಿಸಿ ರಾಷ್ಟ್ರೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಈ ಪ್ರಮಾಣಪತ್ರ ನೀಡುತ್ತದೆ. ಆಹಾರ ತಯಾರಿಸುವ ಕೊಠಡಿ, ಸೋರಿಕೆ ಇಲ್ಲದ, ಉತ್ತಮ ಗುಣಮಟ್ಟದ ಗೋಡೆ, ಕಾಲು ಜಾರದಂತಹ ನೆಲಹಾಸು, ತುಕ್ಕು ಹಿಡಿಯದ ಕಿಟಕಿ ಬಾಗಿಲುಗಳು, ಆಹಾರ ತಯಾರಿಸುವ ಪಾತ್ರೆಗಳ ಗುಣಮಟ್ಟ, ಆಹಾರ ತಯಾರಿಕಾ ಸಾಮಗ್ರಿಗಳ ದಾಸ್ತಾನು ಕೊಠಡಿ, ಪಾತ್ರೆ ತೊಳೆಯುವ ನೀರು, ತ್ಯಾಜ್ಯ ವಿಲೇವಾರಿ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಿ ಇಂತಹ ಭೋಗ್ ಸರ್ಟಿಫಿಕೇಟ್ ನೀಡಲಾಗುತ್ತದೆ.
ಆಹಾರ ಸುರಕ್ಷತಾ ಪ್ರಮಾಣಪತ್ರ ಹೊಂದಿರುವ ಸರಬರಾಜುದಾರರ ಮೂಲಕವೇ ಖರೀದಿ, ಅವಧಿ ಮೀರುವ ಮೊದಲೇ ಆಹಾರ ಪದಾರ್ಥಗಳ ಬಳಕೆ, ಅವುಗಳನ್ನು ಕೆಡದಂತೆ ಇಡುವ ಸೂಕ್ತ ವ್ಯವಸ್ಥೆ, ಭೋಜನ ಶಾಲೆಯಲ್ಲಿ ಸ್ವಚ್ಛತೆಗೆ ಆದ್ಯತೆ, ಶುದ್ಧೀಕರಣ ಇತ್ಯಾದಿಗಳನ್ನು ಕೂಡ ಪ್ರಾಧಿಕಾರ ಗಮನಿಸಿ ಭೋಗ್ ಪ್ರಮಾಣ ಪತ್ರ ನೀಡುತ್ತದೆ. ನೈರ್ಮಲ್ಯ, ವಾತಾವರಣ, ಸಂಗ್ರಹಣೆ ಮತ್ತು ಆಹಾರ ತಯಾರಿಕೆಯಲ್ಲಿ ಬಳಸುವ ಶುದ್ಧ ನೀರು ಮುಂತಾದ ವಿವಿಧ ಅಂಶಗಳನ್ನು ಪರಿಗಣಿಸಿ, ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರವನ್ನು ನೀಡುತ್ತದೆ.
ಕಾಸರಗೋಡಿನಲ್ಲಿರುವ ಮಲ್ಲ ದೇವಸ್ಥಾನವು ದುರ್ಗಾಪರಮೇಶ್ವರಿ ದೇವಿಯ ಒಂದು ವಿಶೇಷ ದೇವಾಲಯವಾಗಿದೆ. ಇಲ್ಲಿ ಸಾಕಷ್ಟು ಜನರು ದೇವಿಯ ದರ್ಶನ ಪಡೆದು ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಇದೀಗ ಈ ಅನ್ನ ಪ್ರಸಾದಕ್ಕೆ ಭೋಗ್ ಸರ್ಟಿಫಿಕೇಟ್ ದೊರಕಿದೆ.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಾತ್ರವಲ್ಲದೆ ಈಗಾಗಲೇ ಕೊಲ್ಲೂರು ಮೂಕಾಂಬಿಕಾ ದೇಗುಲ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ದ.ಕ. ಜಿಲ್ಲೆಯ ಧರ್ಮಸ್ಥಳ ಮತ್ತು ಉತ್ತರ ಕನ್ನಡ ಜಿಲ್ಲೆಯ ಮಾರಿಕಾಂಬಾ ದೇವಸ್ಥಾನ, ಶಿರಸಿ ಮುಂತಾದ ಪ್ರಸಿದ್ಧ ದೇವಾಲಯಗಳು ಭೋಗ್ ಪ್ರಮಾಣಪತ್ರ ಪಡೆದಿವೆ.
ಮಲ್ಲ ದುರ್ಗಾ ಪರಮೇಶ್ವರಿ ದೇವಸ್ಥಾನವು ಕೇರಳದ ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ಸಮೀಪದ ಮುಳಿಯಾರ್ ಹಳ್ಳಿಯಲ್ಲಿದೆ. ಮಲ್ಲ ದುರ್ಗಾ ಪರಮೇಶ್ವರಿ ದೇವಸ್ಥಾನ ಶತಮಾನಗಳಷ್ಟು ಹಳೆಯದು. ಮಹಾರಾಷ್ಟ್ರದ ಕರಾಡ ಬ್ರಾಹ್ಮಣರಿಂದ ನಿರ್ಮಿಸಲ್ಪಟ್ಟ ಮಲ್ಲ ದುರ್ಗಾ ಪರಮೇಶ್ವರಿ ದೇವಸ್ಥಾನದ ವಿಶೇಷ ಲಕ್ಷಣವೆಂದರೆ ದಿನನಿತ್ಯದ ಅನ್ನದಾನ. ಇಲ್ಲಿ ಭಕ್ತರಿಗೆ ಪ್ರತಿದಿನ ಅನ್ನದಾನ ಮಾಡಲಾಗುತ್ತದೆ. ಇಲ್ಲಿನ ಶ್ರೀದೇವಿಯ ಮೂಲ ಮಂತ್ರಗಳನ್ನು ಹೊಂದಿರುವ ಶ್ರೀಚಕ್ರ ಅತೀವಿರಳ ಎನ್ನಲಾಗಿದೆ.
ಮಲ್ಲಕ್ಷೇತ್ರದಲ್ಲಿ ಮಕ್ಕಳಿಗೆ ಮೊದಲ ಅನ್ನಪ್ರಾಶನ ಮಾಡಿಸಲು ಕರ್ನಾಟಕದಿಂದ ಹಿಡಿದು ಕೇರಳದ ಬಹುತೇಕರು ಆಗಮಿಸುತ್ತಾರೆ. ಚರ್ಮ ರೋಗ, ವಿಷಬಾಧೆ ಮೊದಲಾದ ವಿವಿಧ ರೋಗಗಳಿಂದ ಬಳಲಿದ್ದವರಿಗೆ ಇಲ್ಲಿಯ ತೀರ್ಥ ಸ್ನಾನವೇ ಪರಿಹಾರ ಎಂಬುದು ನಂಬಿಕೆ. ಗ್ರಹಾಚಾರ ದೋಷಮುಕ್ತಿಗೆ ದುರ್ಗಾಪೂಜೆ, ಕಂಕಣ ಕೂಡಿಬರಲು ಸ್ವಯಂವರ ಪುಷ್ಪಾಂಜಲಿ, ಸೀರೆ ಸಮರ್ಪಣೆ ಮೊದಲಾದ ಹರಕೆಗಳಿವೆ. ಸಂತಾನ ಭಾಗ್ಯಕ್ಕಾಗಿ ತುಲಾಭಾರ ಸೇವೆ, ತೊಟ್ಟಿಲಮಗು ಸಮರ್ಪಣೆ ಸೇವೆ ಸಹ ಭಕ್ತರು ಸಲ್ಲಿಸುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ