ಅದೊಂದು ದಿನ ನಾನು ಏಳನೇ ತರಗತಿಯಲ್ಲಿ ಕಲಿಯುತ್ತಿರಬೇಕಾದರೆ ನನ್ನ ಜೀವದ ಗೆಳತಿ ಎಂದು ಅಂದು ನಾನು ಯಾರನ್ನು ಭಾವಿಸಿದ್ದೇನೋ ಆಕೆಗೂ ನನಗೂ ಏನೋ ಒಂದು ಕಾಣಲು ಚಿಕ್ಕದಾದ ನನ್ನ ಮನಸ್ಸಿಗೆ ಗಾಢವಾಗಿ ನೋವನ್ನುಂಟು ಮಾಡಿದ ಮನಸ್ತಾಪವೊಂದು ಬಂದೊದಗಿತ್ತು. ಆಕೆ ಅಂದು ನನ್ನನ್ನು ತರಗತಿಯವರ ಹಾಗೂ ಶಿಕ್ಷಕರ ಎದುರು ಹೇಗೆ ಬಿಂಬಿಸಿದ್ದಳೆಂದರೆ ಅದನ್ನು ನೆನೆದಾಗ ನನ್ನ ಕಣ್ಣಂಚಿನಲ್ಲಿ ಈಗಲೂ ಕಣ್ಣೀರು ತುಂಬಿಕೊಳ್ಳುತ್ತದೆ. ಆದರೆ ಆ ಸಂದರ್ಭದಲ್ಲಿ ನನ್ನ ಕಣ್ಣೀರ ಒರೆಸಿ ಕೈ ಹಿಡಿದಾಕೆ ಇಂದಿಗೂ ನನ್ನೊಂದಿಗೆ ಇದ್ದಾಳೆ.
7ನೇ 8ನೇ 9ನೇ ತರಗತಿಗಳನ್ನು ದಾಟಿ ಹತ್ತನೆಯ ತರಗತಿಗೆ ಕಾಲಿಟ್ಟವು ಯಾರು ಹೇಗೆ ಪ್ರಯತ್ನಿಸಿದರು ನಮ್ಮಿಬ್ಬರನ್ನು ದೂರ ಮಾಡುವುದು ಸಾಧ್ಯವಾಗಲಿಲ್ಲ. ಆದರೆ ನಮ್ಮಿಬ್ಬರ ಪಯಣಕ್ಕೆ ಇನ್ನು ನಾಲ್ವರು ಜೊತೆಗಾರರು ಕೂಡಿಕೊಂಡರು.
ಎಲ್ಲರೂ ಪ್ರತಿದಿನವೂ ಶಾಲೆಗೆ ಬರುವುದು ಕಲಿಕೆಗಾಗಿಯಾಗಿದ್ದರೆ, ನಾವು ಬರುತ್ತಿದ್ದದ್ದು ಕಲಿಕೆಯ ಜೊತೆಗೆ ನಮ್ಮ ನಿತ್ಯ ಭೇಟಿಗಾಗಿ. ಪ್ರತಿದಿನವೂ ಒಬ್ಬರನ್ನೊಬ್ಬರು ಟೀಕಿಸುತ್ತಾ, ಮಾತನಾಡುತ್ತ ದಿನಗಳನ್ನು ಕಳೆಯುತ್ತಿದ್ದೆವು. ಮೊದಮೊದಲು ನಮ್ಮ ಮಾತುಕತೆ ಕೇವಲ ಶಾಲೆಯ ಗೋಡೆ,ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿತ್ತು, ಆದರೆ ಮುಂದುವರೆಯುತ್ತಾ ಕೈಗೆ ಮೊಬೈಲ್ ಬಂದ ನಂತರ ಸಂದೇಶಗಳನ್ನು ಕಳಿಸುವುದರ ಮೂಲಕ ನಮ್ಮ ಆತ್ಮೀಯತೆ ಇನ್ನೂ ಹೆಚ್ಚಾಗ ತೊಡಗಿತು. ಈ ಮೊಬೈಲ್ ಸಿಕ್ಕಿದ ನಂತರ ಶಾಲೆಯಲ್ಲಿ ಆ ವಿಚಾರ ತಿಳಿದು ಶಿಕ್ಷಕರಿಂದ ಅರ್ಚನೆ ಪಡೆದ ಸವಿನೆನಪು ಇಂದಿಗೂ ಸವಿಯಾಗಿಯೇ ಇದೆ.
ಹಾಗೋ ಹೀಗೋ ಎಸ್ಎಸ್ಎಲ್ಸಿ ಮುಗಿಸಿ ಕಾಲೇಜ್ ಹಂತಕ್ಕೆ ಬಂದೆವು, ಶಾಲೆಯಲ್ಲಿ ಒಂದೇ ವಿಷಯ,ಒಂದೇ ತರಗತಿಯಲ್ಲಿ ಕುಳಿತು ಕಲಿತ ನಾವೆಲ್ಲರೂ ಈಗ ನಮ್ಮ ನಮ್ಮ ಆಯ್ಕೆಯ ಹಿಂದೆ ಹೋಗಬೇಕಾಗಿ ಬಂತು.
ಮುಂದೆ ಕಾಲೇಜು-ವಿಷಯದ ಆಯ್ಕೆ ಬೇರೆ ಬೇರೆಯಾದರೂ ನಡುವಿನಲ್ಲಿ ಬಂದ ಆಪ್ತಮಿತ್ರ ಮೊಬೈಲು ನಮ್ಮೆಲ್ಲರ ಆತ್ಮೀಯತೆಯನ್ನು ಹಾಗೆ ಉಳಿಸಿತ್ತು. ಆದರೆ ಮೊದಲಿನಷ್ಟು ಮಾತಿಲ್ಲ, ಹರಟೆ ಇರಲಿಲ್ಲ,ಖುಷಿ ಇರಲಿಲ್ಲ ಹೇಗೋ ಪದವಿ ಪೂರ್ವ ಹಂತವು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಮುಗಿದಂತಿತ್ತು. ಪುನಃ ಆ ಹಿಂದಿನ ದಿನಗಳಂತೆ ನಾವೆಲ್ಲರೂ ಒಂದೇ ಕುಟುಂಬದವರಂತೆ ಮತ್ತೆ ಬದುಕಲು ಅವಕಾಶ ಮಾಡಿಕೊಟ್ಟದ್ದು ಪದವಿ ಕಾಲೇಜಿನ ಈ ದಿನಗಳು. ಬೇರೆ ಬೇರೆ ಕಡೆ ಹಂಚಿ ಹೋಗಿದ್ದ ನಾವು ಪುನಃ ಒಂದೇ ಗುಂಪಿನ ಗುಬ್ಬಿಗಳಂತೆ ಒಂದೇ ಕಾಲೇಜಿನಲ್ಲಿ ಓದುವ ದಿನಗಳು ಬಂದಿತ್ತು. ಇಲ್ಲಿಯೂ ನಮ್ಮ ಕಲಿಕಾ ಹಾದಿ ಬೇರೆ ಬೇರೆಯಾದರೂ ನಾವೆಲ್ಲರೂ ಕಾಲೇಜಿಗೆ ಬರುವುದು ಪುನಃ ಹಿಂತಿರುಗುವುದು ಜೊತೆಜೊತೆಯಾಗಿಯೇ. ನಾವು ಪದವಿ ಕಾಲೇಜಿಗೆ ಸೇರುವಾಗ ಮೊದಲು ಆರು ಜನ ಮಾತ್ರ ಆತ್ಮೀಯರಾಗಿದ್ದೆವು. ಆದರೆ ಈಗ ನಮ್ಮ ಆತ್ಮೀಯ ಬಳಗದಲ್ಲಿ ಸದಸ್ಯತ್ವವು ಹೆಚ್ಚುಗೊಂಡು ಒಗ್ಗಟ್ಟು ಬಲಗೊಂಡಿದೆ ಎಂಬುದು ಸಂತಸದ ವಿಚಾರ.
ನಮ್ಮ ಈ ಬಾಂಧವ್ಯ ಪ್ರಾರಂಭವಾದ್ದರಿಂದ ಇಲ್ಲಿಯವರೆಗೂ ಕಿಂಚಿತ್ತೂ ಏರುಪೇರನ್ನು ಕಂಡಿಲ್ಲ ಕಾಣುವುದು ಬೇಡ. ನಮ್ಮೀ ಗುಂಪು ಕೇವಲ ಹರಟೆ ಹೊಡೆಯುವುದಕ್ಕೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರ ನೋವಿಗೂ ಹೆಗಲಾಗಿ, ಪ್ರತಿಯೊಬ್ಬರ ನಲಿವಿನಲ್ಲಿಯೂ ನಗುವಾಗಿ, ಪ್ರತಿಯೊಬ್ಬರ ಗೆಲುವಿಗೂ ಚಪ್ಪಾಳೆಯಾಗಿ ಪ್ರತಿಬಿಂಬಿತವಾಗಿದೆ. ನಾವು ಕೇವಲ ಮಿತ್ರರಲ್ಲ ನಾವೊಂದು ಕುಟುಂಬ, ಹೀಗಿಂದಾಗಲೇ ಆನಂದಬಾಷ್ಪ ಕಣ್ಣಂಚನ್ನು ಒದ್ದೆಗೊಳಿಸುತ್ತದೆ. ನಮ್ಮ ಈ ಬಾಂಧವ್ಯ ನನ್ನುಸಿರು ಕೊನೆಯಾಗುವವರೆಗೂ ಉಸಿರಾಡುತ್ತಲೇ ಇರಬೇಕೆಂಬುದು ನನ್ನ ಮನದಾಳದನಿಸಿಕೆ.
-ಚೈತನ್ಯ ಲಕ್ಷ್ಮೀ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ