ಮೂಡುಬಿದಿರೆ: ತುಳು ಭಾಷೆ, ಸಂಸ್ಕೃತಿ ಚಂದ. ಈ ಭಾಷೆಗೆ ಮನಸ್ಸನ್ನು ಕಟ್ಟುವ ಶಕ್ತಿ ಇದೆ. ಯಾವ ಭಾಷೆಯು ಕೀಳಲ್ಲ. ಎಲ್ಲಾ ಭಾಷೆಗಳಿಗೂ ಅವುಗಳದ್ದೇ ಆದ ಗೌರವ, ಸ್ಥಾನಮಾನವಿದೆ ಎಂದು ಬೆಳ್ತಂಗಡಿ ವಾಣಿ ಕಾಲೇಜಿನ ಪ್ರಾಂಶುಪಾಲ ಡಾ ಯದುಪತಿ ಗೌಡ ಹೇಳಿದರು.
ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಕೂಡಿ ಬಾಳುವ ಸಂಸ್ಕೃತಿ ಇತ್ತು. ಆದರೆ ಈಗ ವಿದೇಶಿ ಚಿಂತನೆಗಳಿಂದ ನಮ್ಮ ಜನತೆ ತಮ್ಮ ಸಂಸ್ಕೃತಿಯನ್ನು ಅಸಡ್ಡೆ ಮಾಡುತ್ತಿದ್ದಾರೆ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಹಲವು ಸಂಪ್ರದಾಯಗಳು ವೈಜ್ಞಾನಿಕ ನೆಲೆಯಿಂದ ಕೂಡಿದ್ದವು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಾವೇ ಉಳಿಸಬೇಕು. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕೃತಿಯ ಅನಾವರಣ ಮಾಡುವ ಕೆಲಸವಾಗಬೇಕು ಎಂದರು.
ಇತ್ತೀಚೆಗೆ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ತುಳುನಾಡಿನ ಸಂಸ್ಕೃತಿ, ದೈವಾರದನೆಯನ್ನು ಬಿಂಬಿಸುವ ಕಾಂತರ ಸಿನಿಮಾವೂ ನಮ್ಮ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಇಂದು ಎಲ್ಲರೂ ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ತುಳು ಸಂಘದ ಸಂಯೋಜಕರಾದ ಡಾ ಪ್ರಮೀಳಾ ಕೊಳಕೆ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ತುಳು ಸಂಸ್ಕೃತಿಯನ್ನು ಬಿಂಬಿಸುವ ಹಲವು ನೃತ್ಯಗಳು ಹಾಗೂ ಪಿಲಿ ನಲಿಕೆ ಎಲ್ಲರ ಗಮನ ಸೆಳೆಯಿತು. ಕಾರ‍್ಯಕ್ರಮವನ್ನು ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಕ್ಷಿರಾ ಸ್ವಾಗತಿಸಿ, ಶ್ರುತಿ ವಂದಿಸಿ, ಗಾನವಿ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ