ಊದುಬತ್ತಿ ಪ್ಯಾಕೇಟ್ ಹಿಡ್ಕಂಡು ಮನೆ ಹತ್ರ ಬರ್ತಾರೆ. "ಇದು 20 ರೂಪಾಯಿ ಒಂದು ಪ್ಯಾಕೇಟ್, ಸ್ಪೆಷಲ್ ಆಫರ್‌ನಲ್ಲಿ 15 ರೂಪಾಯಿಗೆ ಕೊಡ್ತೀವಿ. ನೋಡಿ ಚೆನ್ನಾಗಿದೆ. ನಿಮ್ಮ ಹಿಂದಗಡೆ ಮನೆಯವರು ಮೂರು ಪ್ಯಾಕೇಟ್ ತಗೊಂಡಿದಾರೆ. ಪ್ರತೀ ಹತ್ತು ಪ್ಯಾಕೇಟ್‌ನಲ್ಲಿ ಒಂದು ಪ್ಯಾಕೇಟ್‌ನ ಒಳಗಡೆ ಒಂದು ಕೂಪನ್ ಇರುತ್ತೆ. ನಿಮ್ಮ ಅದೃಷ್ಟ ಚೆನ್ನಾಗಿದ್ದು ಕೂಪನ್ ಬಂದ್ರೆ ಜಸ್ಟ್ ಎರಡು ಸಾವಿರ ರೂಪಾಯಿಗೆ ಹತ್ತು ಐಟಂ ಕೊಡ್ತೀವಿ"
"ಏನೇನು ಹತ್ತು ಐಟಂ?" ಅಂತ ಕೇಳ್ತೀರಿ? ಅವನಿಗೆ ಅಷ್ಟು ಸಾಕು!! ವ್ಯಾಪಾರ ಕುದುರಿತು ಅಂತ ಅರ್ಥ.
"ನೋಡಿ ಇದು ಐದು ಲೀಟರ್ ಕುಕ್ಕರ್, ಅಂಗಡಿಯಲ್ಲಿ ಇದೊಂದಕ್ಕೆ ಮೂರು ಸಾವಿರ ಇದೆ. ಇದು ನಾನ್ ಸ್ಟಿಕ್ ತವಾ, ಇದರ MRP ₹ 866.95. ಇದು ನೋಡಿ ಸ್ಟೀಲ್ ಪಾತ್ರೆ, ಇದರ ತೂಕ ನೋಡಿ... ಎಲ್ಲ ಒಟ್ಟು ಸುಮಾರು ಹನ್ನೊಂದು ಸಾವಿರದ ವಸ್ತುಗಳು ಕೇವಲ ಎರಡು ಸಾವಿರಕ್ಕೆ!!. ನಿಮ್ಮ ಅದೃಷ್ಟ ಪರೀಕ್ಷೆ ಮಾಡಿ"
ಹಿಂದಗಡೆ ಮನೆಯವರು ಮೂರು ಊದುಬತ್ತಿ ಪ್ಯಾಕೇಟ್ ಕೊಂಡಾಗ ನಾವು ನಾಲ್ಕಾದರು ತಗೊಳ್ಳೋದು ಬ್ಯಾಡವಾ? ನಮ್ಮನೆ ದೇವರು ಅವರ ಮನೆ ದೇವರಿಗಿಂತ ಸಣ್ಣವನಾ?!!
ಆಶ್ಚರ್ಯ!! ನಾಲ್ಕು ಪ್ಯಾಕೇಟ್ ತಗೊಂಡು ಓಪನ್ ಮಾಡಿದಾಗ, ಒಂದರಲ್ಲಿ ಆ ಲಕ್ಕಿ ಕೂಪನ್ ಮಲಗಿದೆ!!
'ಕಂಗ್ರಾಜುಲೇಷನ್' ಅಂತ ಪ್ರಾರಂಭವಾಗಿ ₹ 11,000 ಮೌಲ್ಯದ ವಸ್ತುಗಳ ಪಟ್ಟಿ ಮಾಡಿದ ಕೂಪನ್!! ಜಸ್ಟ್ ಎರಡು ಸಾವಿರಕ್ಕೆ!!
ಎರಡು ಸಾವಿರ ಕೊಟ್ಟು ಅಷ್ಟೂ ಐಟಂಗಳನ್ನು ಕೊಂಡಾಯ್ತು. ಅದರಲ್ಲಿರುವುದು ಮೆಯಿನ್ ಐಟಂ ಕುಕ್ಕರ್!
**
ಹೌದು, ನೀವು ಕೊಡುವ ಎರಡು ಸಾವಿರದ ಮೊತ್ತದ ಪುಟ್ಟ ಲಾಭದಲ್ಲಿ ಮನೆ ಮನೆ ತಿರುಗುವ ಆತನ ಬದುಕು ನೆಡೆಯುವುದು.
ಆದರೆ, ಆ ಕುಕ್ಕರ್ ಸ್ಪೋಟಿಸುತ್ತೆ!!
ಬಾಂಬು ಇಲ್ಲದೇ ಇದ್ದರು!!
ಆ ಕುಕ್ಕರ್‌ಗೆ ಗ್ಯಾರಂಟಿ ಇಲ್ಲ, ತಯಾರು ಮಾಡಿದವನ ಹೆಸರಿಲ್ಲ, ಬಿಲ್ ಇಲ್ಲ, ಗುಣಮಟ್ಟ ದೇವರೇ ಬಲ್ಲ. ಆದರೂ ಬಿಸಲಲ್ಲಿ ತಿರುಗುವ ಆ ಸಣ್ಣ ವ್ಯಾಪಾರಿಗೆ ನೀವು ಒಂದು ಸಣ್ಣ ಸಹಾಯ ಮಾಡಿದ್ದೀರಿ.
ಆದರೆ...
ಅದ್ಯಾವುದೂ ಸಮಸ್ಯೆ ಅಲ್ಲ. ಸಮಸ್ಯೆ ಇರುವುದು ಆ ಕುಕ್ಕರ್ ಸ್ಪೋಟಿಸಿದರೆ!!
ಯಾವ ISI ಮಾರ್ಕೂ ಇಲ್ಲದ, ಅತ್ಯಂತ ಕಳಪೆ ಗುಣ ಮಟ್ಟದ, ಅನಧಿಕೃತವಾಗಿ ತಯಾರಾದ ವಸ್ತುಗಳು ಅವು. ಇಂತಹ ಕುಕ್ಕರ್‌ಗಳಿಂದ ಅನೇಕ ಅನಾಹುತಗಳು ಆಗಿವೆ. ಕುಕ್ಕರ್‌ಗೆ ಸೇಫ್ಟಿ ವಾಲ್ ಇರುತ್ತೆ. ಆದರೆ ಅದು ಕೆಲಸ ಮಾಡಿಲ್ಲ ಅಂದ್ರೆ?
ಕುಕ್ಕರ್ ಒಳಗೆ ಬಾಂಬ್ ಇರಬೇಕು ಅಂತಿಲ್ಲ, ಇಂತಹ ಕುಕ್ಕರ್‌ಗಳೇ ಸ್ಪೋಟಿಸುತ್ತವೆ. ತಮಾಷೆ ಅಂದ್ರೆ ಈ ಎಲ್ಲ ಐಟಂಗಳೂ ಚೈನಾದಿಂದ ಬರ್ತಾವೆ ಅಂತ ಸುದ್ದಿ. ಹದಿನೈದು ರೂಪಾಯಿ ಊದುಬತ್ತಿ ಒಳಗಿನ ಕೂಪನ್ ಕೂಡ ಎಷ್ಟು ಅಪಾಯಕಾರಿ.
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ