ಸಂಶೋಧನೆಯಲ್ಲಿ ಆಧುನಿಕ ಉಪಕರಣಗಳ ಬಳಕೆ ಅತ್ಯಾವಶ್ಯಕ, ಡಾ. ವಿ. ಪಾರ್ಧಸಾರದಿ
ಮಂಗಳೂರು: ಸಂಶೋಧನೆಯಲ್ಲಿ ಆಧುನಿಕ ಉಪಕರಣಗಳ ಪಾತ್ರವು ಬಹಳ ಮಹತ್ತರವಾದದ್ದು. ಅವುಗಳ ಸಮರ್ಪಕ ಬಳಕೆಯಿಂದ ಗುಣಮಟ್ಟದ ಸಂಶೋಧನೆ ಸಾಧ್ಯ. ಉಪಕರಣಗಳ ಬಳಕೆಗೆ ಸಂಶೋಧಕರನ್ನು ತರಬೇತುಗೊಳಿಸುವಲ್ಲಿ ಕಾರ್ಯಾಗಾರಗಳು ಬಹಳ ಪರಿಣಾಮ ಬೀರುತ್ತವೆ, ಎಂದು ಯುರೋಫಿನ್ಸ್ ಅಡ್ವಿನಸ್ ಅಗ್ರೋಸೈನ್ಸಸ್ ಸರ್ವೀಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಅಧ್ಯಕ್ಷ, ಬ್ಯುಸ್‌ನೆಸ್ ಯೂನಿಟ್ ಮುಖ್ಯಸ್ಥ ಡಾ. ವಿ. ಪಾರ್ಧಸಾರಧಿ ಅಭಿಪ್ರಾಯಪಟ್ಟರು.
ಅವರು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ)ಯ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ (ವಿವಿ) ಮತ್ತು ಕೋಲಾಪುರದ ಶಿವಾಜಿ ವಿವಿಗಳ ಸಹಭಾಗಿತ್ವದಲ್ಲಿ ಮಂಗಳೂರು ವಿವಿಯ ಡಿಎಸ್‌ಟಿ-ಪರ್ಸ್, ಕಾರ್ಟ್ ಮತ್ತು ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ ಎನ್‌ಎಂಆರ್ ಉಪಕರಣ ಕೇಂದ್ರಗಳ ಜಂಟಿ ಸಹಯೋಗದಲ್ಲಿ ನಡೆದ ಏಳು ದಿನಗಳ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ನಿಕಾಯದ ಡೀನ್ ಪ್ರೊ. ಮಂಜುನಾಥ ಪಟ್ಟಾಭಿ ಅವರು ಮಾತನಾಡಿ, ಸಂಶೋಧಕರು ವೈಜ್ಞಾನಿಕ ಮೂಲತತ್ವಗಳು ಮತ್ತು ಸಂಶೋಧನಾ ಕ್ಷೇತ್ರದ ಪ್ರಗತಿಯ ಬಗ್ಗೆ ಜ್ಞಾನ ಗಳಿಸಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದರು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಆಯ್ದ 38 ಸಂಶೋಧಕರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಹ-ಸಂಘಟಕ ಪ್ರೊ. ಬೋಜ ಪೂಜಾರಿಯವರು ಅತಿಥಿಗಳನ್ನು ಸ್ವಾಗತಿಸಿದರು.
ವೈಜ್ಞಾನಿಕ ಅಧಿಕಾರಿ ಡಾ. ಮಹೇಶ್ ಕೆ. ಕೆ ತರಬೇತಿ ಕಾರ್ಯಕ್ರಮದ ವರದಿ ವಾಚಿಸಿದರು. ಕಾರ್ಯಕ್ರಮದ ಸಂಘಟಕರಾದ ಪ್ರೊ. ಬಿ. ವಿಶಾಲಾಕ್ಷಿ ವಂದಿಸಿದರು. ರಾಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ, ಕುಮಾರಿ ಲವಿನಾ ಗ್ಲಾಡಿಸ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ