ಮಂಗಳೂರು: ನಮ್ಮ ದೇಸೀಯ ಭಾಷಾ ಕೃತಿಗಳಲ್ಲಿ ಪ್ರತಿಭಾ ಸಂಪನ್ನರಾದ ಲೇಖಕರು ಅಪಾರವಾದ ಜೀವನಾನುಭವವನ್ನು ತುಂಬಿಸಿಟ್ಟಿದ್ದು ಅವುಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರೆ ಅಮೂಲ್ಯ ಜ್ಞಾನಭಂಡಾರವನ್ನು ವಿಶ್ವದ ಓದುಗರು ತಿಳಿದುಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ಕವಿ ಸಾಹಿತಿಗಳಾದ ಡಾ. ವಸಂತಕುಮಾರ ಪೆರ್ಲ ಅವರ ಇಂಗ್ಲಿಷ್ ಸಣ್ಣ ಕಥೆಗಳ ಸಂಗ್ರಹ ವಿಷ್ಣುಮಂಗಲ ಒಂದು ಮೌಲಿಕ ಕೊಡುಗೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ ಎಸ್. ಯಡಪಡಿತ್ತಾಯ ಹೇಳಿದರು.
ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಡಾ. ವಸಂತಕುಮಾರ ಪೆರ್ಲ ಅವರ ವಿಷ್ಣುಮಂಗಲ ಅನುವಾದಿತ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು.
ವಿಷ್ಣುಮಂಗಲದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪುರಸ್ಕೃತವಾದ ಹದಿನಾರು ಕಥೆಗಳಿದ್ದು ಬೆಂಗಳೂರಿನ ಹಿರಿಯ ಅನುವಾದಕರಾದ ಬಿ. ಆರ್. ಭೀಮಾಚಾರ್ ಸೊಗಸಾಗಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಪ್ರಸ್ತುತ ಅವರಿಗೆ ನೂರರ ವಯಸ್ಸು ನಡೆಯುತ್ತಿದ್ದು ಅದೇ ಈ ಕೃತಿಯ ಅನುವಾದದ ಹಿಂದಿನ ವಿಶೇಷತೆಯಾಗಿದೆ ಎಂದು ಎಡಪಡಿತ್ತಾಯ ಹೇಳಿದರು.
ಕೃತಿಯ ಕುರಿತು ಪ್ರಾಸ್ತಾವಿಕವಾಗಿ ಮಾತಾಡಿದ ಕೃತಿಕಾರ ಡಾ. ವಸಂತಕುಮಾರ ಪೆರ್ಲ ಅವರು ವಿಷ್ಣುಮಂಗಲ ಎಂಬುದು ಭಾರತದ ಯಾವುದೇ ಹಳ್ಳಿಯೊಂದರ ಪ್ರಾತಿನಿಧಿಕ ರೂಪವಾಗಿದೆ. ಅಭಿವೃದ್ಧಿ ಮತ್ತು ವಿಕಾಸಮುಖಿಯಾದ ಸ್ವಾತಂತ್ರ್ಯೋತ್ತರ ಭಾರತದ ಹಳ್ಳಿಗಳಲ್ಲಿ ನಡೆಯುವ ವ್ಯವಹಾರಗಳು ಸಂಕೀರ್ಣವಾದ ಮನುಷ್ಯ ಸಂಬಂಧಗಳಲ್ಲಿ ಅನಾವರಣಗೊಳ್ಳುತ್ತ ಕಲಾತ್ಮಕ ಕಥೆಗಳಾಗಿ ರೂಪ ತಾಳಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಹಿಂದಿನ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ವಿಷ್ಣುಮಂಗಲ ಎಂಬ ಈ ಇಂಗ್ಲಿಷ್ ಕೃತಿಯು ವಿಶ್ವಸಾಹಿತ್ಯಕ್ಕೆ ಕನ್ನಡದ ಒಂದು ಅಪೂರ್ವ ಕೊಡುಗೆ. ಕೊಂಡು ಓದುವುದರ ಮೂಲಕ ಕೃತಿಕಾರರನ್ನು ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅವರು ಮಾತಾಡುತ್ತ ಕನ್ನಡದ ಓರ್ವ ಅಪರೂಪದ ಸಾಹಿತಿಯಾದ ಡಾ. ಪೆರ್ಲ ಅವರು ಈ ಕಥೆಗಳ ಮೂಲಕ ಸಮಾಜವನ್ನು ಸೂಕ್ಷ್ಮ ಕಣ್ಣುಗಳಿಂದ ವೀಕ್ಷಿಸಿ ಈ ಕೃತಿರಚನೆ ಮಾಡಿದ್ದಾರೆ. ತುಂಬ ಕಲಾತ್ಮಕವಾದ ಈ ಕಥೆಗಳು ನಮ್ಮ ಜಿಲ್ಲೆಯ ಬದುಕಿನ ಚಿತ್ರಣವನ್ನು ವಿಶ್ವದ ಓದುಗರಿಗೆ ತಲಪಿಸಿದಂತಾಗಿದೆ ಎಂದರು.
ಡಾ. ವಸಂತಕುಮಾರ ಪೆರ್ಲ ಸ್ವಾಗತಿಸಿದರು. ಡಾ. ಎಂ. ಪಿ. ಶ್ರೀನಾಥ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ