ಉಜಿರೆ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶನಿವಾರದಿಂದ ನಡೆಯಲಿವೆ.
ಪ್ರೌಢಶಾಲಾ ವಠಾರದಲ್ಲಿ ರಾಜ್ಯ ಮಟ್ಟದ ವಸ್ತುಪ್ರದರ್ಶನ ಆಯೋಜಿಸಿದ್ದು ಕೃಷಿ, ಬ್ಯಾಂಕ್‌ಗಳು, ವಾಣಿಜ್ಯ, ಕೈಗಾರಿಕೆಗೆ ಸಂಬಂಧಿಸಿದ ಇನ್ನೂರಕ್ಕೂ ಮಿಕ್ಕಿ ಮಳಿಗೆಗಳಿವೆ.
ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಶಾಸಕ ಹರೀಶ್ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ವಸ್ತು ಪ್ರದರ್ಶನ ವೀಕ್ಷಿಸಲು ಉಚಿತ ಅವಕಾಶವಿದೆ. ಸರ್ಕಾರದ ವಿವಿಧ ಇಲಾಖೆಗಳಾದ ಆರೋಗ್ಯ, ಅರಣ್ಯ, ಕೃಷಿ, ರೇಷ್ಮೆ, ಹೈನುಗಾರಿಕೆ ಮಳಿಗೆಗಳೂ ಇವೆ.
ದೇವಸ್ಥಾನ, ಬೀಡು, ವಸತಿ ಛತ್ರಗಳು ಅನ್ನಪೂರ್ಣ, ಮಂಜೂಷಾ ವಸ್ತುಸಂಗ್ರಹಾಲಯ ಮೊದಲಾದ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ರಾತ್ರಿ ಹೊಸಕಟ್ಟೆಉತ್ಸವ ನಡೆಯುತ್ತದೆ.
ಉಜಿರೆಯಿಂದ ಪಾದಯಾತ್ರೆ: ಶನಿವಾರ ಅಪರಾಹ್ನ ಮೂರು ಗಂಟೆಗೆ ಉಜಿರೆಯಲ್ಲಿರುವ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಸುಮಾರು 25,000 ಮಂದಿ ಭಕ್ತರು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವರು.
ಪಾದಯಾತ್ರೆಯ ದಶಮಾನೋತ್ಸವ ಆದುದರಿಂದ ಕೊಂಬು, ಕಹಳೆ, ಯಕ್ಷಗಾನ ವೇಷಧಾರಿಗಳು ಚೆಂಡೆವಾದನದೊಂದಿಗೆ ತುಳು ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಭವ್ಯ ಮೆರವಣಿಗೆಯಲ್ಲಿ ಪಾದಯಾತ್ರೆ ನಡೆಯುತ್ತದೆ. ಶಿವನಾಮ ಸ್ಮರಣೆಯೊಂದಿಗೆ ಭಜನಾ ತಂಡಗಳು ಭಜನೆ ಮತ್ತು ಭಕ್ತಿಗೀತೆಗಳನ್ನು ಹಾಡುವರು.
ಪಾದಯಾತ್ರೆ ಧರ್ಮಸ್ಥಳ ಪ್ರವೇಶಿಸಿದ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುವರು ಎಂದು ಪಾದಯಾತ್ರೆಯ ಸಂಚಾಲಕ ಪೂರನ್‌ವರ್ಮ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ