ಪುತ್ತೂರು: ಸೈಬರ್ ಕ್ರೈಮ್ ಒಂದು ರೀತಿಯ ಕಾನೂನು ಬಾಹಿರ ಕೃತ್ಯವಾಗಿದೆ. ಕಂಪ್ಯೂಟರ್ ನ ಮೂಲಕ ಅದನ್ನೇ ಸಾಧನವಾಗಿ ಬಳಸಿ ಹ್ಯಾಕಿಂಗ್, ಎಲೆಕ್ಟ್ರಾನಿಕ್ ರೂಪದಲ್ಲಿನ ಮಾಹಿತಿಯ ಕಳ್ಳತನ ಹಾಗೂ ಜಾಲತಾಣವನ್ನು ಉಪಯೋಗಿಸಿಕೊಂಡು ಅದರಿಂದ ಲಭಿಸುವ ಮಾಹಿತಿ,ಫೋಟೋ, ಪಾಸ್ವರ್ಡ್,ಇಂತಹ ಸೂಕ್ಷ್ಮ ವಿಚಾರಗಳನ್ನು ಮೋಸದಿಂದ ಪಡೆಯಲು ಯತ್ನಿಸುವ ವಿಧಾನವಾಗಿದೆ ಎಂದು ಪ್ರಮಾಣೀಕೃತ ಸೈಬರ್ ಕ್ರೈಮ್ ಇಂಟನ್ಷ್ ನ ಅಧಿಕಾರಿ ಪ್ರಣೀತಾ ಹೇಳಿದರು.
ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ), ಎನ್ ಎಸ್ ಎಸ್, ರೋವರ್ ರೇಂಜಸ್ ಮತ್ತು ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ರೋಟರ್ಯಕ್ಟ್ ಕ್ಲಬ್ ಪುತ್ತೂರು ಇದರ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಜಾಲತಣಗಳಲ್ಲಿ ಬಳಕೆದಾರರ ಹೆಸರುಗಳನ್ನು ಮತ್ತು ಅವರ ವಿವರಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಹಿಂಬಾಲಿಸುತ್ತಾರೆ, ಮತ್ತು ಹಾಗೆ ಆಗದಿರಲು ಯಾವೆಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದೆಲ್ಲ ವಿದ್ಯಾರ್ಥಿಗಳೊಡನೆ ಚರ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರ್ಯಾಕ್ಟ್ ಕ್ಲಬ್ ಪುತ್ತೂರಿನ ಅಧ್ಯಕ್ಷ, ಪತ್ರಕರ್ತ ಗಣೇಶ್ ಎನ್ ಕಲ್ಲರ್ಪೆ ಮಾತನಾಡಿ,ಈಗಿನ ಕಾಲದಲ್ಲಿ ಕ್ರೈಮ್ ಗಳು ಆಗುವ ಮೊದಲೇ ಎಷ್ಟೋ ಎಚ್ಚರಿಕೆ ಕ್ರಮಗಳು ಬರುತ್ತಲೇ ಇರುತ್ತವೆ, ಆದರೆ ಅವುಗಳನ್ನು ಹೇಗೆ ಯಾವ ರೀತಿಯಲ್ಲಿ ಬಳಸಬೇಕು ಎಂಬುದು ಗೊತ್ತಿರುವುದಿಲ್ಲ, ಬಳಸುವಷ್ಟರಲ್ಲಿ ಅಪಾಯವನ್ನು ಎದುರಿಸುವ ಸಂದರ್ಭ ಎದುರಾಗಿರುತ್ತದೆ. ಅದರಿಂದ ನಾವು ಅರ್ಥೈಸಿಕೊಂಡು ಜಾಗೃತರಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾಧಿಕಾರಿ, ಉಪನ್ಯಾಸಕ ಶ್ರೀನಾಥ್ ಸ್ವಾಗತಿಸಿ, ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿದ್ಯಾ ಕೆ ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


