ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

Upayuktha
0

ವಿದ್ಯಾರ್ಥಿಗಳು ಯಶಸ್ಸಿನ ಸೂತ್ರವನ್ನರಿತು ಮುಂದುವರಿಯುವಂತಾಗಲಿ :ಡಾ ಕೆ ಎಂ ಕೃಷ್ಣ ಭಟ್


ಪುತ್ತೂರು: ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜಕ್ಕೆ ಉಪಯೋಗವಾಗುವಂತ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಮಾಜದ ಏಳಿಗಾಗಿ ಶ್ರಮಿಸಬೇಕು. ಆಗ ಮಾತ್ರ ನಮ್ಮ ದೇಶದ ಏಳಿಗೆ ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಶಿಕ್ಷಣದ ಕಡೆಗೆ ಗಮನಹರಿಸಿ ಗುರಿಯನ್ನು ತಲುಪುವ ಪ್ರಯತ್ನ ಮಾಡಬೇಕು ಎಂದು ಸಕಲೇಶಪುರ ರೋಟರಿ ಶಾಲೆಯ ಮುಖ್ಯೋಪಾಧ್ಯಾಯ ಸುಮಂತ್ ಹೇಳಿದರು.


ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ನಾವು ಎಷ್ಟೇ ಎತ್ತರ ಬೆಳೆದರೂ, ಉನ್ನತ ಹುದ್ದೆಯಲ್ಲಿದ್ದರೂ ನಾವು ಕಲಿತ ಶಾಲೆ ಹಾಗೂ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ಇರುವ ಗೌರವಕ್ಕೆ ಎಂದಿಗೂ ಕುಂದು ಕೊರತೆ ಬರಬಾರದು. ಋಣಾತ್ಮಕ ಚಿಂತನೆಗಳ ಕಡೆಗೆ ಮನಸ್ಸು ವಾಲದಂತೆ ನೋಡಿಕೊಂಡು, ಕೋಪ ಮತ್ತು ಉದ್ರೇಕಗಳನ್ನು ನಿಯಂತ್ರಣ ಮಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಯಾಗಿಯೇ ಉಳಿದುಕೊಂಡು ದೇಶಕ್ಕೆ ಉತ್ತಮ ಪ್ರಜೆಯಾಗುವಂತಾಗಬೇಕು ಎಂದು ಹೇಳಿದರು.


ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಮಾತನಾಡಿ, ವ್ಯಕ್ತಿ ಗುರುತಿಸಲ್ಪಡುವುದು ಅವರ ವ್ಯಕ್ತಿತ್ವದಿಂದ ಮತ್ತು ಸಾಧನೆಯಿಂದಾಗಿದೆ. ಎಲ್ಲರಲ್ಲೂ ಅವರದೇ ಆದ ಪ್ರತಿಭೆಯಿದೆ. ಆದರೆ ಆ ಪ್ರತಿಭೆಯನ್ನು ಗುರುತಿಸಲು ಸೂಕ್ತ ವೇದಿಕೆ ಅಗತ್ಯ. ಆ ವೇದಿಕೆ ಲಭಿಸುವಾಗ, ಅವಕಾಶಗಳು ಒಲಿದು ಬರುವಾಗ ಬಳಸಿಕೊಳ್ಳುವ ಚಾಣಾಕ್ಷತೆ ವಿದ್ಯಾರ್ಥಿಗಳಲ್ಲಿರಬೇಕು. ಜ್ಞಾನಎನ್ನುವುದು ಅಂಗೈಯಲ್ಲಿದೆ. ಆದುದರಿಂದ ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ. ಯಾವ ದಾರಿಯಲ್ಲಿ ಸಾಗಬೇಕು ಎಂದು ದೃಢ ನಿಶ್ಚಯ ಮಾಡಿ, ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ, ಏಕಾಗ್ರತೆಯಿಂದ ಶ್ರಮ ಪಟ್ಟರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ ಕೆ ಎಂ ಕೃಷ್ಣ ಭಟ್ ಮಾತನಾಡಿ ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ಯಶಸ್ಸಿನ ಸೂತ್ರವನ್ನು ಮೊದಲಿಗೆ ತಿಳಿದುಕೊಳ್ಳಬೇಕು. ತಾವು ಮಾಡುವ ಕೆಲಸದಲ್ಲಿ ಪ್ರೀತಿ, ಕೌಶಲ್ಯ, ಮತ್ತು ಆತ್ಮವಿಶ್ವಾಸ ಇದ್ದರೆ ಮಾತ್ರ ಸಾಧನೆ ಸಾಧ್ಯವಾಗುವುದು. ಇದರೊಂದಿಗೆ ನಾವು ಮಾಡುವ ಕೆಲಸ ನಮಗೆ ಆತ್ಮಾನಂದ ನೀಡುವಂತಿರಬೇಕು. ಆ ಸಂದರ್ಭದಲ್ಲಿ ಸೋಲು ಎದುರಾಗುವುದು ಸಹಜ, ಆದರೆ ಆ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲೇರುವ ಹುಮ್ಮಸ್ಸು ವಿದ್ಯಾರ್ಥಿಗಳಲ್ಲಿರಬೇಕು. ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ಶಕ್ತಿ ವಿದ್ಯಾರ್ಥಿಗಳಿಗಿದೆ. ಆದುದರಿಂದ ಸಮಾಜ ಹಾಗೂ ದೇಶದ ನಿರ್ಮಾಣಕ್ಕೆ ಕೊಡುಗೆಗಳನ್ನು ನೀಡುವ ಹೊಣೆಗಾರಿಕೆ ಹೊತ್ತುಕೊಂಡು ಶ್ರಮಿಸುವ ಶಕ್ತಿ ವಿದ್ಯಾರ್ಥಿಗಳಿಗೆ ಸಿದ್ಧಿಯಾಗಲಿ ಎಂದು ಹೇಳಿದರು.


ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಪ್ರಾಂಶುಪಾಲಮಹೇಶ ನಿಟಿಲಾಪುರ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ ಗೋಪಾಲಕೃಷ್ಣ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುದತ್ ನಾಯಕ್, ಕಾರ್ಯದರ್ಶಿ ಕೀರ್ತನ್ ಉಪಸ್ಥಿತರಿದ್ದರು.


ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥ ಪರಮೇಶ್ವರ ಶರ್ಮ ಸ್ವಾಗತಿಸಿ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ದೇವಿಚರಣ್ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top