ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪಾರಂಪರಿಕ ದಿನ ಆಚರಣೆ

Upayuktha
0

                                                                  


ಪುತ್ತೂರು: ಬದುಕನ್ನು ಕಟ್ಟಿಕೊಳ್ಳಲು ಬೇಕಾದ  ಮೌಲ್ಯಗಳನ್ನು ಕೊಟ್ಟ ಪರಂಪರೆ ಭಾರತೀಯರದ್ದು. ಬೆಳಗೆದ್ದು ದೇವರ ಸ್ತುತಿಯೊಂದಿಗೆ  ಈ ಜಗತ್ತಿನಲ್ಲಿರುವ ಎಲ್ಲರಿಗೂ ಶುಭವಾಗಲಿ  ಎಂದು ದಿನವನ್ನು ಆರಂಭಿಸುತ್ತೇವೆ. ಇಂತಹ ಆದರ್ಶಮಯ ಪರಂಪರೆಯನ್ನು ಹೊಂದಿರುವ ನಾವು ಎಂದಿಗೂ ನಮ್ಮತನವನ್ನು ತೊರೆಯದೆ ಇಡೀ ಜಗತ್ತಿಗೆ ನಮ್ಮ ಸತ್ವವನ್ನು ಸಾರ ಬೇಕಾಗಿದೆ ಎಂದು ವಾಗ್ಮಿ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು.

ನಗರದ ನಟ್ಟೋಜ ಫೌಂಡೇಶನ್‌  ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಸಂಸ್ಥೆಗಳಲ್ಲಿ ಒಂದಾದ ಬಪ್ಪಳಿಗೆಯ ಪದವಿ ಪೂರ್ವ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ಅವರು ಮಾತನಾಡಿದರು.

ನಾವು ಪ್ರಾಚೀನ ಕಾಲದ ಜನರ ಜೀವನ ಪದ್ದತಿಯನ್ನು ಪುನಃ ಅನುಸರಿಸಬೇಕಾದ ಅಗತ್ಯತೆ ಇದೆ. ಇಂದಿನ ಆಧುನಿಕ ಜಗತ್ತಿನ ಫ್ಯಾಶನ್‌ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ದೇಶದ ಸಂಸ್ಕಾರ , ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಾರಂಪರಿಕ ದಿನವನ್ನು ಒಂದೇ ದಿನಕ್ಕೆ ಸೀಮಿತವಾಗಿಸದೆ ನಮ್ಮ ಜೀವನಶೈಲಿಯಾಗಿ ಅಳವಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳೇ ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಬೇಕೆಂದು ಕರೆನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,  ವಿದೇಶಿಯರು ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ರೋಗಮುಕ್ತ ಹಾಗೂ ಸುಖಮಯ ಜೀವನವನ್ನು ನಡೆಸಲು ಮುಂದಾಗುತ್ತಿರುವಾಗ ನಮ್ಮ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಒಲವು ತೋರಿಸುತ್ತಿರುವುದು ದುಃಖಕರ ಸಂಗತಿ. ನಮ್ಮ ಭಾರತೀಯ ಶ್ರೇಷ್ಠ ಸಂಸ್ಕೃತಿಯನ್ನು ಉಳಿಸಿ ಬೆಳೆಸುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕಾಗಿದೆ. ಇಂದಿನ ಯುವಜನತೆ ನಮ್ಮ ಪಾರಂಪರಿಕ ಉಡುಗೆ ತೊಡುಗೆಗಳನ್ನು ತೊಟ್ಟು ನಮ್ಮ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದರೆ ಮಾತ್ರ ಮುಂದಿನ ಪೀಳಿಗೆಗೆ ಇದು ವರ್ಗಾವಣೆಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್‌ ನಟ್ಟೋಜ , ಪ್ರಾಂಶುಪಾಲೆ  ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್‌ ಪ್ರಸಾದ್‌ ಡಿ ಎಸ್‌ ಹಾಗು ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಗೀತಾ ಸಿ ಕೆ ನಿರೂಪಿಸಿ ವಂದಿಸಿದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top